ಕರ್ನಾಟಕ

karnataka

ಕೊಡೇರಿ ಬೀಚ್​ನಲ್ಲಿ ಕಿರು ಬಂದರು ನಿರ್ಮಾಣ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್​ ನೋಟಿಸ್​

By ETV Bharat Karnataka Team

Published : Nov 24, 2023, 10:53 PM IST

ಹೈಕೋರ್ಟ್ ಕೊಡೇರಿ ಬೀಚ್​ನಲ್ಲಿ ಕಿರು ಮೀನುಗಾರಿಕಾ ಬಂದರು ನಿರ್ಮಾಣ ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

Etv Bharathigh-court-notice-to-government-over-construction-of-small-harbor-at-kodiyeri-sea-coast
ಕೊಡೇರಿ ಕಡಲ ಕಿನಾರೆಯಲ್ಲಿ ಕಿರು ಬಂದರು ನಿರ್ಮಾಣ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ನೋಟಿಸ್​

ಬೆಂಗಳೂರು: ಎಡಮಾವಿನಹೊಳೆ ನದಿ ಪಾತ್ರದ ಕೊಡೇರಿ ಕಡಲ ಕಿನಾರೆ (ಬೀಚ್)ನಲ್ಲಿ ಕಿರು ಮೀನುಗಾರಿಕಾ ಬಂದರು ನಿರ್ಮಾಣ ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಕೊಡೇರಿ ಬಂದರು ಮೀನುಗಾರರ ಸಹಕಾರಿ ಸಂಘದ ಪ್ರಕಾಶ್ ಎಂಬುವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠದ ವಿಚಾರಣೆ ನಡೆಸಿತು.

ಅಲ್ಲದೆ, ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಕರ್ನಾಟಕ ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರ, ಮೀನುಗಾರಿಕೆ ನಿರ್ದೆಶನಾಲಯದ ನಿರ್ದೇಶಕರು, ಬಂದರು ಮತ್ತು ಮೀನುಗಾರಿಕೆ ಉಡುಪಿ ವಿಭಾಗದ ಎಕ್ಸಿಕ್ಯೂಟಿವ್ ಎಂಜಿನಿಯರ್, ಅರಣ್ಯ ಇಲಾಖೆ ಪ್ರಧಾನ ವನ್ಯಜೀವಿ ಪಾಲಕ ಇವರಿಗೆ ನೋಟಿಸ್ ಜಾರಿಗೊಳಿಸಿ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ನಿರ್ದೇಶನ ನೀಡಿದ ಪೀಠ ವಿಚಾರಣೆಯನ್ನು ಮುಂದೂಡಿತು.

ಕೊಡೇರಿ ಕಡಲ ಕಿನಾರೆಯ ಕಿರು ಮೀನುಗಾರಿಕಾ ಬಂದರು ಸಮುದ್ರ ಹಾಗೂ ಎಡಮಾವಿನಹೊಳೆ ನದಿಯ 50 ಮೀಟರ್ ಅಂತರದಲ್ಲಿದೆ. ಇಲ್ಲಿ ಕಿರು ಮೀನುಗಾರಿಕಾ ಬಂದರು ನಿರ್ಮಾಣ ಮಾಡುವುದು ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಪ್ರದೇಶ ಸಿಆರ್‌ಜೆಡ್ ವಲಯ-1ರ ವ್ಯಾಪ್ತಿಗೆ ಬರಲಿದ್ದು, ಈ ಪ್ರದೇಶದಲ್ಲಿ ಸೇವೆ ಮತ್ತು ರಕ್ಷಣಾ ಕಾರ್ಯಾಚರಣೆ ಹೊರತುಪಡಿಸಿ ಬೇರೆ ಚಟುವಟಿಕೆ ನಡೆಸುವಂತಿಲ್ಲ. ಕಡಲ ಕೊರೆತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳದ ಹೊರತು ಈ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿ ಕೈಗೊಳ್ಳುವಂತಿಲ್ಲ. ಬಂದರು ನಿರ್ಮಾಣದಿಂದ ಕಿರಿಮಂಜೇಶ್ವರ ಗ್ರಾಮದ ಕುಡಿಯುವ ನೀರು ಕಲುಷಿತಗೊಳ್ಳಲಾಗಿದ್ದು, 10 ಸಾವಿರ ಜನಸಂಖ್ಯೆಗೆ ಸಮಸ್ಯೆ ಎದುರಾಗಲಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಹೀಗಾಗಿ ಎಡಮಾವಿನಹೊಳೆ ನದಿ ಪಾತ್ರದಲ್ಲಿನ ಕಿರು ಮೀನುಗಾರಿಕಾ ಬಂದರು ತೆರವುಗೊಳಿಸಬೇಕು. ಬಂದರು ಬದಲಾವಣೆ, ಮಾರ್ಪಾಡು ಮತ್ತು ವಿಸ್ತರಣೆ ಮಾಡದಂತೆ ಕೇಂದ್ರ ಪರಿಸರ ಸಚಿವಾಲಯ, ರಾಜ್ಯ ಕರಾವಳಿ ನಿರ್ವಹಣಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕು. ಯೋಜನೆಗೆ ಪರವಾನಿಗೆ ಕೊಡದಂತೆ ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಗೆ ಸೂಚಿಸಬೇಕು, ಎತ್ತರದ ಉಬ್ಬರವಿಳಿತ ರೇಖೆ (ಎಚ್‌ಟಿಎಲ್)ಯ 50 ಮೀಟರ್ ವ್ಯಾಪ್ತಿಯ ‘ಆಪತ್ತಿನ ದುರ್ಬಲ ಕರಾವಳಿ’ ವಲಯಕ್ಕೆ ಸೇರಿದ ಕೊಡೇರಿ, ಮರವಂತೆ ಕಡಲ ಕಿನಾರೆಯಲ್ಲಿ ಆಣೆಕಟ್ಟು ನಿರ್ಮಾಣ ಮತ್ತು ಬಂದರು ವಿಸ್ತರಣೆಯಿಂದ ಒಟ್ಟಾರೆ ಕರಾವಳಿ ಸವೇತದ ಮೇಲಾಗುವ ಪರಿಣಾಮದ ಕುರಿತು ಸ್ವತಂತ್ರ ಸಮಿತಿ ರಚನೆಗೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಇದನ್ನೂ ಓದಿ:ಮದ್ಯದಂಗಡಿ ಪರವಾನಗಿ ರದ್ದತಿ ಕೋರಿದ ಅರ್ಜಿ ವಜಾ

ABOUT THE AUTHOR

...view details