ಕರ್ನಾಟಕ

karnataka

ರೌಡಿಯಿಂದ ಬೆದರಿಕೆ ಹಿನ್ನೆಲೆ: ವಿವಾಹ ಸಮಾರಂಭಕ್ಕೆ ಭದ್ರತೆ ನೀಡಲು ಪೊಲೀಸರಿಗೆ ಹೈಕೋರ್ಟ್ ಸೂಚನೆ

By

Published : May 5, 2023, 10:55 PM IST

ರೌಡಿಯಿಂದ ಬೆದರಿಕೆ ಹಿನ್ನೆಲೆ ಮದುವೆ ಕಾರ್ಯಕ್ರಮದ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸುವುದಾಗಿ ಕೆಂಗೇರಿ ಠಾಣೆಯ ಪೊಲೀಸ್ ಇನಸ್ಪೆಕ್ಟರ್ ಭರವಸೆ ನೀಡಿದ್ದಾರೆ. ಜೊತೆಗೆ ಇನಸ್ಪೆಕ್ಟರ್ ತಮ್ಮ ಭರವಸೆಗೆ ಬದ್ಧವಾಗಿರಬೇಕು ಎಂದು ಹೈಕೋರ್ಟ್​ ಸೂಚನೆ ನೀಡಿದೆ.

High Court
ಹೈಕೋರ್ಟ್

ಬೆಂಗಳೂರು:ಯುವತಿಯೊಬ್ಬಳ ವಿವಾಹಕ್ಕೆ ರೌಡಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮೇ 9 ಮತ್ತು 10ರಂದು ನಡೆಯುಲಿರುವ ಕಾರ್ಯಕ್ರಮಕ್ಕೆ ಭದ್ರತೆ ಕಲ್ಪಿಸುವಂತೆ ಕೆಂಗೇರಿ ಠಾಣಾ ಪೊಲೀಸರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ. ತನ್ನ ಮದುವೆಗೆ ಭದ್ರತೆ ಕಲ್ಪಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ನಗರದ ಯುವತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯಗೌಡ ಅವರ ಪೀಠ ಈ ಆದೇಶ ನೀಡಿದೆ.

ಅರ್ಜಿದಾರೆಯ ಮದುವೆ ನಗರದ ಖಾಸಗಿ ಹೋಟೆಲ್​​ವೊಂದರಲ್ಲಿ ಮೇ 9 ಮತ್ತು 10ರಂದು ನಡೆಯಲಿದೆ. ತಂದೆಯ ವ್ಯಾಪಾರದಲ್ಲಿ ಪಾಲುದಾರನಾದ ಕೆ.ಶಿವರಾಜ್ ಗೌಡ ಎಂಬುವರು ಹಣಕಾಸು ವಿವಾದವನ್ನು ಮುಂದಿಟ್ಟುಕೊಂಡು ತನ್ನ ಮದುವೆ ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಹೀಗಾಗಿ ಮದುವೆ ಸಂದರ್ಭದಲ್ಲಿ ಸೂಕ್ತ ಭದ್ರತೆ ಒದಗಿಸುವುದಾಗಿ ಕೆಂಗೇರಿ ಠಾಣೆಯ ಪೊಲೀಸ್ ಇನಸ್ಪೆಕ್ಟರ್ ಭರವಸೆ ನೀಡಿದ್ದಾರೆ. ಅದರಂತೆ ಇನಸ್ಪೆಕ್ಟರ್ ತಮ್ಮ ಭರವಸೆಗೆ ಬದ್ಧವಾಗಿರಬೇಕು ಎಂದು ಸೂಚಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿದೆ.

ವಿಚಾರಣೆ ವೇಳೆ ಅರ್ಜಿದಾರೆಯ ಪರ ವಕೀಲ ಡಿ.ಮೋಹನ್ ಕುಮಾರ್, ಶಿವರಾಜ್ ಗೌಡ ಅವರು 2014ರಿಂದ ಅರ್ಜಿದಾರೆಯ ತಂದೆ ಜೊತೆಗೆ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಹಣಕಾಸು ವಿಚಾರವಾಗಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದರಿಂದ ಶಿವರಾಜ್ ಗೌಡ, ಅರ್ಜಿದಾರೆಯ ಮನೆಗೆ ಬಂದು ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಸಾಲದೇ, ಅರ್ಜಿದಾರೆಯ ನಕಲಿ ಫೋಟೋಗಳನ್ನು ವರನ ಕಡೆಯವರಿಗೆ ತೋರಿಸಿ ಮದುವೆ ನಿಲ್ಲಿಸಲಾಗುವುದು ಮತ್ತು ಕಲ್ಯಾಣ ಮಂಟಪದಿಂದಲೇ ಅರ್ಜಿದಾರೆಯನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ:ಕೊನೆಗೂ ಸಿಕ್ತು ಮೋದಿ ರೋಡ್ ಶೋಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಶಿವರಾಜ್ ಗೌಡ ಉದ್ದೇಶವನ್ನು ತಿಳಿದು ಅರ್ಜಿದಾರೆಯು ಮೇ 9 ಮತ್ತು 10ರಂದು ಮದುವೆ ನಡೆಯುವಾಗ ಭದ್ರತೆ ಕಲ್ಪಿಸುವಂತೆ ಕೋರಿ ಮೇ 1ರಂದು ಕೆಂಗೇರಿ ಠಾಣಾ ಪೊಲೀಸರಿಗೆ ಕೋರಿದ್ದರು. ಈ ಮನವಿ ಪರಿಗಣಿಸಿ ಸೂಕ್ತ ಕ್ರಮ ಒದಗಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸರ್ಕಾರಿ ವಕೀಲರು ಪ್ರಕರಣದ ಕುರಿತು ಕೆಂಗೇರಿ ಠಾಣಾ ಪೊಲೀಸ್ ಇನ್ಪೆಕ್ಟರ್ ಮೇ 4ರಂದು ಬರೆದ ಪತ್ರವನ್ನು ಕೋರ್ಟ್‌ಗೆ ಹಾಜರುಪಡಿಸಿ, ಮೇ 9 ಮತ್ತು 10ರಂದು ಠಾಣಾ ವ್ಯಾಪ್ತಿಯಲ್ಲಿ ಎರಡು ಹೊಯ್ಸಳ ವಾಹನವನ್ನು ಗಸ್ತಿಗೆ ನಿಯೋಜಿಸಲಾಗಿರುತ್ತದೆ. ಒಂದು ವೇಳೆ ವಿವಾಹ ನಡೆಯುವಾಗ ಯಾವುದೇ ವ್ಯಕ್ತಿಯಿಂದ ತೊಂದರೆಯಾದರೆ ತಕ್ಷಣವೇ 112ಗೆ ಕರೆ ಮಾಡಬಹುದು. ಆಗ ಹೊಯ್ಸಳ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಬಂದು ಸೂಕ್ತ ಕ್ರಮ ಜರುಗಿಸುತ್ತಾರೆ ಎಂಬುದಾಗಿ ಪತ್ರದಲ್ಲಿ ತಿಳಿಸಲಾಗಿದೆ ಎಂದು ತಿಳಿಸಿದರು. ವಾದ-ಪ್ರತಿವಾದ ಪರಿಗಣಿಸಿದ ನ್ಯಾಯಪೀಠ, ಪೊಲೀಸ್ ಇನಸ್ಪೆಕ್ಟರ್ ತಮ್ಮ ಭರವಸೆಯಂತೆ ಅರ್ಜಿದಾರೆಯ ಮದುವೆಗೆ ಭದ್ರತೆ ಕೊಡಬೇಕು ಎಂದು ನಿರ್ದೇಶಿಸಿದ ಹೈಕೋರ್ಟ್​ ಅರ್ಜಿಯನ್ನು ಇತ್ಯರ್ಥ ಪಡಿಸಿತು.

ಇದನ್ನೂ ಓದಿ:ಐಟಿ ದಾಳಿಗೆ ಕೇಂದ್ರ ಸರ್ಕಾರ ಕಾರಣ, ಇದು ಐಟಿ ದಾಳಿ ಮಾಡುವ ಸಮಯವಲ್ಲ: ಶೆಟ್ಟರ್ ಅಸಮಾಧಾನ

ABOUT THE AUTHOR

...view details