ಕರ್ನಾಟಕ

karnataka

3 ವಾರಗಳಲ್ಲಿ ಬೀದಿ ನಾಯಿಗಳ ಸಂತಾನ ಹರಣ ನಿಯಮ ಜಾರಿಗೊಳಿಸಲು ಹೈಕೋರ್ಟ್ ಸೂಚನೆ

By ETV Bharat Karnataka Team

Published : Oct 5, 2023, 10:47 PM IST

ಮುಂದಿನ ಮೂರು ವಾರಗಳಲ್ಲಿ ಈ ಕುರಿತು ಉತ್ತರಿಸಬೇಕು, ಮತ್ತೆ ಕಾಲಾವಕಾಶ ನೀಡುವುದಿಲ್ಲ ಎಂದು ಸರ್ಕಾರಕ್ಕೆ ಹೈಕೋರ್ಟ್​ ತಾಕೀತು ಮಾಡಿ ವಿಚಾರಣೆಯನ್ನು ನ.15ಕ್ಕೆ ಮುಂದೂಡಿತು.

high court
ಹೈಕೋರ್ಟ್​

ಬೆಂಗಳೂರು:ಬೀದಿ ನಾಯಿಗಳ ಸಂತಾನಹರಣ ಕುರಿತಾಗಿರುವ ಪ್ರಾಣಿಗಳ ಜನನ ನಿಯಂತ್ರಣ (ನಾಯಿ) ನಿಯಮಗಳ ಜಾರಿಗೆ ಸಂಬಂಧಿಸಿದಂತೆ ಮುಂದಿನ 3 ವಾರಗಳಲ್ಲಿ ಸಮರ್ಪಕ ಉತ್ತರ ಕೊಡದಿದ್ದರೆ, ಸೂಕ್ತ ಆದೇಶ ಹೊರಡಿಸುವುದಾಗಿ ಹೈಕೋರ್ಟ್ ಎಚ್ಚರಿಕೆ ನೀಡಿದೆ.

ವಕೀಲ ಎಲ್.ರಮೇಶ್ ನಾಯಕ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಎಚ್ಚರಿಕೆ ನೀಡಿ‌ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿಗೆ ಉತ್ತರಿಸಲು ಸರ್ಕಾರದ ಪರ ವಕೀಲರು ಕಾಲಾವಕಾಶ ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಈ ವರ್ಷದ ಜನವರಿಯಲ್ಲಿ ಉತ್ತರಿಸುವುದಾಗಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಕೊನೆಯ ಬಾರಿಗೆ ಕಾಲಾವಕಾಶ ಕೇಳಿದ್ದರು. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸರ್ಕಾರದ ಈ ನಡೆ ಒಪ್ಪುವುದಿಲ್ಲ. ಇದು ಕೊನೆಯ ಅವಕಾಶ. ಮುಂದಿನ ಮೂರು ವಾರಗಳಲ್ಲಿ ಉತ್ತರಿಸಬೇಕು. ಮತ್ತೆ ಕಾಲಾವಕಾಶ ನೀಡುವುದಿಲ್ಲ ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.

ಬೀದಿ ನಾಯಿಗಳಿಗೆ ಆಹಾರ ಪೂರೈಸುವುದು ಒಳ್ಳೆಯ ಕಾರ್ಯ. ಆದರೆ ಅದರ ರೀತಿ ಸರಿ ಇರಬೇಕು. ನಿಗದಿತ ಸ್ಥಳದಲ್ಲಿ ಅದು ಉತ್ತಮವಾಗಿ ಇಲ್ಲದಿದ್ದರೆ ದಾರಿಹೋಕರು ಆಯಾ ಪ್ರದೇಶದ ನಿವಾಸಿಗಳಿಗೆ ತೊಂದರೆ ಉಂಟಾಗುತ್ತದೆ. ವಿಧಾನಸೌಧದ ಗೇಟಿನ ಮುಂಭಾಗ ಕೆಲವರು ಬೆಳಗಿನ ಜಾವ ಪ್ರಾಣಿಗಳಿಗೆ ಆಹಾರ ತಂದು ಹಾಕುತ್ತಾರೆ. ಪ್ರಾಣಿಗಳ ಬಗ್ಗೆ ಅನುಕಂಪ ತೋರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಅವ್ಯವಸ್ಥೆ ಸೃಷ್ಟಿಯಾಗಬಾರದು ಎಂದಷ್ಟೇ ನಮ್ಮ ಕಳಕಳಿ.

ಅನೇಕ ಕಡೆ ಬೆಳಗಿನ ಅವಧಿಯಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಇದರಿಂದ ತೊಂದರೆ ಆಗುವುದನ್ನು ತಳ್ಳಿ ಹಾಕುವಂತಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಬೀದಿ ನಾಯಿಗಳು ಸೇರಿದಂತೆ ಇತರೆ ಪ್ರಾಣಿ-ಪಕ್ಷಿಗಳ ಬಗ್ಗೆ ಕಾಳಜಿ ತೋರುವವರು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಪೀಠ ತಿಳಿಸಿತು.

ಈ ರೀತಿಯ ವಿಚಾರಗಳಲ್ಲಿ ನಾಗರಿಕರು ಸರ್ಕಾರದೊಂದಿಗೆ ಸಹಕರಿಸಬೇಕು. ಹಕ್ಕುಗಳನ್ನು ಪ್ರತಿಪಾದಿಸುವವರು, ಕರ್ತವ್ಯಗಳನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಹಕ್ಕು ಮತ್ತು ಕರ್ತವ್ಯಗಳು ಅಂತರ್‌ಸಂಬಂಧ ಹೊಂದಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಇದನ್ನೂಓದಿ:ಗ್ರಂಥಾಲಯ, ಕ್ರೀಡಾಂಗಣ ಇಲ್ಲದಿದ್ದರೂ ಮೇಲ್ದರ್ಜೆಗೆ ಮನವಿ; ಖಾಸಗಿ ಶಾಲಾ ಆಡಳಿತ ಮಂಡಳಿ ನಡೆಗೆ ಹೈಕೋರ್ಟ್ ಗರಂ

ABOUT THE AUTHOR

...view details