ಕರ್ನಾಟಕ

karnataka

ಎಸ್​​ಸಿ-ಎಸ್​​ಟಿ ದೌರ್ಜನ್ಯ ಕಾಯ್ದೆ ಜಾರಿ ವಿಚಾರ: ಪ್ರಕರಣಗಳ ಮಾಹಿತಿ ಕೇಳಿದ ಹೈಕೋರ್ಟ್

By

Published : Nov 12, 2020, 9:31 PM IST

ಅಧಿನಿಯಮ 1995ರಂತೆ ರಚಿಸಲಾದ ರಾಜ್ಯದ ಮಟ್ಟದ ವಿಚಕ್ಷಣಾ ಮತ್ತು ಮೇಲ್ವಿಚಾರಣಾ ಸಮಿತಿಯು ಪ್ರತಿ ವರ್ಷ ಜನವರಿ ಹಾಗೂ ಜುಲೈ ತಿಂಗಳಲ್ಲಿ ಕಡ್ಡಾಯವಾಗಿ ಸಭೆ ನಡೆಸಬೇಕು.‌ ಇದನ್ನು ರಾಜ್ಯ ಸರ್ಕಾರ ಖಾತರಿಗೊಳಿಸಬೇಕು. ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆಯೂ ಸರ್ಕಾರ ಮಾಹಿತಿ‌ ಒದಗಿಸಬೇಕು ಎಂದು ಪೀಠ ನಿರ್ದೇಶಿಸಿತು.

High Court hearing information on cases of SC-ST Violence Act
ಎಸ್​​ಸಿ-ಎಸ್​​ಟಿ ದೌರ್ಜನ್ಯ ಕಾಯ್ದೆ ಜಾರಿ ವಿಚಾರ

ಬೆಂಗಳೂರು: ರಾಜ್ಯದಲ್ಲಿ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ' (ದೌರ್ಜನ್ಯ ತಡೆ) ಕಾಯ್ದೆ-1989ರಡಿ ಕಳೆದ ಐದು ವರ್ಷಗಳಲ್ಲಿ ದಾಖಲಾದ ಪ್ರಕರಣಗಳ ಸಮಗ್ರ ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲ್ವಿಚಾರಣೆ ಮತ್ತು ಬಲವರ್ಧನೆ ಸಂಘದ ಸಂಚಾಲಕಿ ಪಿ.ಯಶೋಧ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರಿ ವಕೀಲರು ಪೀಠಕ್ಕೆ ನೀಡಿದ ಮಾಹಿತಿ ಒಪ್ಪದ ಪೀಠ, ಸರ್ಕಾರದ ಮಾಹಿತಿ ಸಮರ್ಪಕವಾಗಿಲ್ಲ. ಆದ್ದರಿಂದ ಎಸ್​​ಸಿ, ಎಸ್​​ಟಿ ದೌರ್ಜನ್ಯ ತಡೆ ಕಾಯ್ದೆ 1989ರಡಿ 2015ರಿಂದ 2020ರ ಅಕ್ಟೋಬರ್​​ವರೆಗೆ ದಾಖಲಾದ ಒಟ್ಟು ಪ್ರಕರಣಗಳು, ಚಾರ್ಜ್​ಶೀಟ್ ಸಲ್ಲಿಕೆಯಾದ ಪ್ರಕರಣಗಳು, ಬಾಕಿ ಇರುವ ಪ್ರಕರಣಗಳು, ಶಿಕ್ಷೆಗೊಳಗಾದ ಮತ್ತು ಖುಲಾಸೆಗೊಂಡ ಪ್ರಕರಣಗಳು, ಶಿಕ್ಷೆಗೊಳಗಾದ ಪ್ರಕರಣಗಳಲ್ಲಿ ಎಷ್ಟು ಪ್ರಕರಣಗಳಲ್ಲಿ ಮೇಲ್ಮನವಿಸಲಾಗಿದೆ. ಎಷ್ಟು ಪ್ರಕರಣಗಳಲ್ಲಿ ತಡೆಯಾಜ್ಞೆ ಇದೆ ಎಂಬ ಬಗ್ಗೆ ವರ್ಷವಾರು ವಿವರಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಿತು.

ಅಧಿನಿಯಮ 1995ರಂತೆ ರಚಿಸಲಾದ ರಾಜ್ಯದ ಮಟ್ಟದ ವಿಚಕ್ಷಣಾ ಮತ್ತು ಮೇಲ್ವಿಚಾರಣಾ ಸಮಿತಿಯು ಪ್ರತಿ ವರ್ಷ ಜನವರಿ ಹಾಗೂ ಜುಲೈ ತಿಂಗಳಲ್ಲಿ ಕಡ್ಡಾಯವಾಗಿ ಸಭೆ ನಡೆಸಬೇಕು.‌ ಇದನ್ನು ರಾಜ್ಯ ಸರ್ಕಾರ ಖಾತರಿಗೊಳಿಸಬೇಕು. ಜಿಲ್ಲಾ ಮಟ್ಟದ ಹಾಗೂ ಉಪವಿಭಾಗ ಮಟ್ಟದ ಸಮಿತಿಗಳು ನಿಯಮಿತವಾಗಿ ಸಭೆಗಳನ್ನು ನಡೆಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ಪರಿಹಾರ ನೀಡುವ ಬಗ್ಗೆಯೂ ಸರ್ಕಾರ ಮಾಹಿತಿ‌ ಒದಗಿಸಬೇಕು ಎಂದು ಪೀಠ ನಿರ್ದೇಶಿಸಿತು.

ಇನ್ನು ಎಸ್​​ಸಿ, ಎಸ್​​ಟಿ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಲು 9 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. 2019ರ ಏಪ್ರಿಲ್ 20ರಂದು ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆ ಬಗ್ಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್​​ಗೆ ಸೂಚಿಸಿ ಪೀಠ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿತು.

ABOUT THE AUTHOR

...view details