ಕರ್ನಾಟಕ

karnataka

ಸಂಸದ ಸ್ಥಾನ ಅಸಿಂಧು ಆದೇಶಕ್ಕೆ ತಡೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಜಾ

By ETV Bharat Karnataka Team

Published : Sep 11, 2023, 4:03 PM IST

Prajwal Revanna disqualification case: ಸಂಸದ ಸ್ಥಾನ ಅಸಿಂಧು ಆದೇಶಕ್ಕೆ ತಡೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

high-court-dismissed-prajwal-revanna-petition-seeking-a-stay-on-disqualification-order
ಸಂಸದ ಸ್ಥಾನ ಅಸಿಂಧು ಆದೇಶಕ್ಕೆ ತಡೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಜಾ

ಬೆಂಗಳೂರು :ಚುನಾವಣಾ ಅಕ್ರಮ ಆರೋಪದ ಮೇಲೆ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿರುವುದನ್ನು ಅಸಿಂಧುಗೊಳಿಸಿ ಹೊರಡಿಸಿರುವ ಆದೇಶಕ್ಕೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೂ ತಡೆಯಾಜ್ಞೆ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಕೆ. ನಟರಾಜನ್ ಅವರ ಪೀಠ ಸೋಮವಾರ ಅರ್ಜಿ ವಜಾಗೊಳಿಸಿದೆ. ವಿವರವಾದ ಆದೇಶದ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಿದೆ.

ಈ ಹಿಂದೆ ನಡೆದ ಅರ್ಜಿಯ ವಿಚಾರಣೆ ವೇಳೆ, ಪ್ರಜ್ವಲ್ ಪರ ಹಿರಿಯ ವಕೀಲ ಉದಯಹೊಳ್ಳ, ಅಸಿಂಧು ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿಯವರೆಗೆ ಅಸಿಂಧು ಆದೇಶಕ್ಕೆ ತಡೆ ನೀಡಬೇಕು ಎಂದು ಹೈಕೋರ್ಟ್​​ಗೆ ಮನವಿ ಮಾಡಿದ್ದರು. ಮೇಲ್ಮನವಿ ಸಲ್ಲಿಕೆ ಮಾಡುವವರೆಗೆ ತಡೆಯಾಜ್ಞೆ ನೀಡಲು ಈ ನ್ಯಾಯಾಲಯಕ್ಕೆ ಅವಕಾಶವಿದೆ ಎಂದು ತಿಳಿಸಿ, ಆ ಕುರಿತ ನಿಯಮಗಳು ಮತ್ತು ಇದೇ ಸಂಬಂಧ ಹಲವು ತೀರ್ಪುಗಳೊಂದಿಗೆ ಅರ್ಜಿಯಲ್ಲಿ ವಿವರಿಸಿ, ತಡೆ ನೀಡುವಂತೆ ಮನವಿ ಮಾಡಲಾಗಿತ್ತು.

ಇದನ್ನೂ ಓದಿ:ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ: ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್ ಸೂಚನೆ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ದೇವರಾಜೇಗೌಡ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು, ಅಸಿಂಧು ಆದೇಶಕ್ಕೆ ತಡೆ ನೀಡಬಾರದು. ತಡೆ ನೀಡಲು ಈ ನ್ಯಾಯಾಲಯಕ್ಕೆ ಅವಕಾಶವಿಲ್ಲ. ಆದೇಶ ಹೊರಡಿಸಿದ ದಿನವೇ ತಡೆಗೆ ಕೋರಿ ಅರ್ಜಿ ಸಲ್ಲಿಸಬೇಕಿತ್ತು. ಆದರೆ, ಅರ್ಜಿ ಸಲ್ಲಿಸಲು ವಿಳಂಬ ಮಾಡಲಾಗಿದೆ ಎಂದು ತಮ್ಮ ಪ್ರಬಲ ವಾದವನ್ನು ಮಂಡಿಸಿದ್ದರು. ಮತ್ತೊಬ್ಬ ಅರ್ಜಿದಾರ ಎ. ಮಂಜು ಪರ ವಕೀಲರು, ರೇವಣ್ಣ ಅವರ ಮಧ್ಯಂತರ ಅರ್ಜಿಗೆ ತಮ್ಮ ಯಾವುದೇ ಆಕ್ಷೇಪಣೆ ಇಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ಎರಡೂ ಕಡೆಯವರ ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತ್ತು.

ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಿ ನ್ಯಾಯಮೂರ್ತಿ ಕೆ. ನಟರಾಜನ್ ಅವರ ಪೀಠ ಸೆಪ್ಟೆಂಬರ್​ 1 ರಂದು ತೀರ್ಪು ನೀಡಿ, ಅದರ ಪ್ರತಿಯನ್ನು ಸಂಸತ್ ಸ್ಪೀಕರ್‌ಗೆ ಕಳುಹಿಸಲು ರಿಜಿಸ್ಟ್ರಿಗೆ ನಿರ್ದೇಶಿಸಿತ್ತು. ಸೆಪ್ಟೆಂಬರ್ 4ರಂದು ಹೈಕೊರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಪ್ರಜ್ವಲ್ ರೇವಣ್ಣ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವವರೆಗೆ ಅಸಿಂಧು ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದರು. ಈ ಬಗೆಗಿನ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ಅಂತಿಮವಾಗಿ ಪ್ರಜ್ವಲ್​ ರೇವಣ್ಣ ಅವರ ಅರ್ಜಿ ವಜಾಗೊಳಿಸಿದೆ.

ಇದನ್ನೂ ಓದಿ:ಅಸಿಂಧು ಆದೇಶಕ್ಕೆ ತಡೆ ಕೋರಿ ಪ್ರಜ್ವಲ್ ರೇವಣ್ಣ ಅರ್ಜಿ: ​ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ABOUT THE AUTHOR

...view details