ಕರ್ನಾಟಕ

karnataka

ಡಿಕೆಶಿ ಐಟಿ ದಾಳಿ ಪ್ರಕರಣ: ಆಪ್ತ ಸಚಿನ್​​ಗೆ ಸೇರಿದ್ದ 53 ಲಕ್ಷ ಹಿಂದಿರುಗಿಸಲು ಸಿಬಿಐಗೆ ಹೈಕೋರ್ಟ್ ನಿರ್ದೇಶನ

By

Published : Mar 4, 2021, 9:54 PM IST

2017ರಲ್ಲಿ ಡಿ.ಕೆ ಶಿವಕುಮಾರ್‌ ಅವರಿಗೆ ಸೇರಿದ ದೆಹಲಿಯ ಫ್ಲಾಟ್​​​​ ಹಾಗೂ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿಕೆಶಿ ಆಪ್ತರಾದ ಸಚಿನ್ ನಾರಾಯಣ್ ಮತ್ತವರ ಸಂಸ್ಥೆ ವೆಲ್‌ವರ್ಥ್ ಸಾಫ್ಟ್‌ವೇರ್ ಪ್ರೈ.ಲಿ ಕಚೇರಿ ಮೇಲೂ ದಾಳಿ ನಡೆಸಿ 53 ಲಕ್ಷ ರೂ. ಜಪ್ತಿ ಮಾಡಿದ್ದರು. ಇದೀಗ ಈ ಹಣ ಹಿಂದಿರುಗಿಸಲು ಕೋರ್ಟ್ ಆದೇಶ ನೀಡಿದೆ.

High court
ಹೈಕೋರ್ಟ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಪ್ತ ಸಚಿನ್ ನಾರಾಯಣ್ ಮನೆ ಹಾಗೂ ಕಂಪನಿ ಮೇಲೆ ದಾಳಿ ನಡೆಸಿ ಜಪ್ತಿ ಮಾಡಿದ್ದ 53 ಲಕ್ಷ ರೂ. ಹಣವನ್ನು ಹಿಂದಿರುಗಿಸುವಂತೆ ಹೈಕೋರ್ಟ್ ಸಿಬಿಐಗೆ ನಿರ್ದೇಶಿಸಿದೆ.

ಹಣ ಬಿಡುಗಡೆ ಮಾಡುವಂತೆ ಸಿಬಿಐಗೆ ನಿರ್ದೇಶನ ಕೋರಿ ಸಚಿನ್ ನಾರಾಯಣ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಜಾನ್ ಮೈಕೆಲ್ ಕುನ್ಹ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ. ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ನೋಡಿದರೆ ಜಪ್ತಿ ಮಾಡಿರುವ ಹಣ ಅವರಿಗೆ ಸೇರಿದೆ ಎಂಬುದು ತಿಳಿದು ಬರುತ್ತಿದೆ. ಹೀಗಾಗಿ ಹಣವನ್ನು ವಶದಲ್ಲಿಟ್ಟುಕೊಳ್ಳುವ ಅಗತ್ಯ ಇಲ್ಲವಾದ್ದರಿಂದ ಹಣ ಬಿಡುಗಡೆ ಮಾಡಬಹುದು. ಆದರೆ, ಹಣದ ಮೂಲದ ಬಗ್ಗೆ ಸಿಬಿಐ ತನಿಖೆ ಮುಂದುವರಿಸಬಹುದು ಎಂದು ಆದೇಶಿಸಿದೆ.

ಅಲ್ಲದೇ, ಒಂದು ವೇಳೆ ಪ್ರಕರಣದ ತನಿಖೆಗೆ ಅಗತ್ಯ ಎನ್ನಿಸಿದರೆ ಅಥವಾ ತನಿಖೆ ಬಳಿಕ ಹಣ ಅಕ್ರಮ ಮೂಲದಿಂದ ಬಂದಿದೆ ಎಂದು ಕಂಡುಬಂದರೆ ಬಿಡುಗಡೆ ಮಾಡಿರುವ ಹಣವನ್ನು ಮರುಪಾವತಿಸುವ ಬಗ್ಗೆ ಅರ್ಜಿದಾರರು ತನಿಖಾಧಿಕಾರಿಗಳಿಗೆ ಮುಚ್ಚಳಿಕೆ ಬರೆದು ಕೊಡಬೇಕು ಎಂದು ಷರತ್ತು ವಿಧಿಸಿದೆ.

ಇದಕ್ಕೂ ಮುನ್ನ ವಿಚಾರಣೆ ಸಂದರ್ಭದಲ್ಲಿ ಸಚಿನ್ ಪರ ವಾದಸಿದ ವಕೀಲರು, ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಅವರ ಮನೆ ಹಾಗೂ ಕಂಪನಿ ಮೇಲೆ ದಾಳಿ ನಡೆಸಿ, ಕಂಪನಿಗೆ ಸೇರಿದ 43 ಲಕ್ಷ ಹಾಗೂ ವೈಯಕ್ತಿಕ ಹಣ 5 ಲಕ್ಷ ರೂ. ವಶ ಪಡಿಸಿಕೊಳ್ಳಲಾಗಿದೆ. ಹಣಕ್ಕೆ ದಾಖಲೆ ಒದಗಿಸಿದರೂ ಬಿಡುಗಡೆ ಮಾಡಿಲ್ಲ. ಇದರಿಂದ ಸಂಸ್ಥೆ ವಹಿವಾಟಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಹಣ ಬಿಡುಗಡೆ ಮಾಡಲು ನಿರ್ದೇಶಿಸಬೇಕು ಎಂದು ಕೋರಿದ್ದರು.

ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲ ಪಿ. ಪ್ರಸನ್ನ ಕುಮಾರ್, ಅಕ್ರಮ ಮೂಲದಿಂದ ಹಣ ಸಂಪಾದಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕಿದ್ದು, ಹಣ ಬಿಡುಗಡೆಗೆ ಆದೇಶಿಸಬಾರದು ಎಂದು ಮನವಿ ಮಾಡಿದ್ದರು.

ಪ್ರಕರಣದ ಹಿನ್ನೆಲೆ

2017ರಲ್ಲಿ ಡಿ.ಕೆ ಶಿವಕುಮಾರ್‌ ಅವರಿಗೆ ಸೇರಿದ ದೆಹಲಿಯ ಫ್ಲಾಟ್​​​​ ಹಾಗೂ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡಿಕೆಶಿ ಆಪ್ತರಾದ ಸಚಿನ್ ನಾರಾಯಣ್ ಮತ್ತವರ ಸಂಸ್ಥೆ ವೆಲ್‌ವರ್ಥ್ ಸಾಫ್ಟ್‌ವೇರ್ ಪ್ರೈ.ಲಿ ಕಚೇರಿ ಮೇಲೂ ದಾಳಿ ನಡೆಸಿ 53 ಲಕ್ಷ ರೂ. ಜಪ್ತಿ ಮಾಡಿದ್ದರು. ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:ಫುಟ್‌ಪಾತ್ ಮೇಲೆ ಟ್ರಾನ್ಸ್‌ಫಾರ್ಮರ್ ಅಳವಡಿಕೆ: ಬೆಸ್ಕಾಂ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ

ABOUT THE AUTHOR

...view details