ಬೆಂಗಳೂರು: ರಾಜ್ಯದಲ್ಲಿ ಮುಂದಿನ 4-6 ವಾರಗಳ ಕಾಲ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮನವಿ ಮಾಡಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ವಿಶ್ವದಲ್ಲಿ ಗಮನಿಸಿದರೆ ಮುಂದಿನ 5-6 ವಾರಗಳು ಕೋವಿಡ್ ಸೋಂಕು ಹೆಚ್ಚಾಗುತ್ತೆ. ಆದರೆ, ದೀರ್ಘಕಾಲದ ಅಲೆ ಇರುವುದಿಲ್ಲ.
ಮೊದಲ ಹಾಗೂ ಎರಡನೇ ಅಲೆಯಲ್ಲಿ 3-5 ತಿಂಗಳ ಕಾಲ ತೀವ್ರತೆ ಇತ್ತು. ಆದರೆ, ಮೂರನೇ ಅಲೆಯಲ್ಲಿ ಹಾಗೇ ಇರೋದಿಲ್ಲ. ಬದಲಿಗೆ ಬಹಳ ವೇಗವಾಗಿ ಹರಡುತ್ತೆ, ಅಷ್ಟೇ ವೇಗವಾಗಿ ಕಡಿಮೆ ಆಗುತ್ತೆ. ಈ ನಿಟ್ಟಿನಲ್ಲಿ ಕನಿಷ್ಟ 4-6 ವಾರಗಳು ಕೋವಿಡ್ ನಿಯಮ ಪಾಲಿಸಿದರೆ ಸೋಂಕು ನಿಯಂತ್ರಣ ಸಾಧ್ಯ ಅಂತಾ ತಿಳಿಸಿದರು.
ಮಾಧ್ಯಮಗಳೊಂದಿಗೆ ಕೊರೊನಾ ಕುರಿತಂತೆ ಮಾತನಾಡಿರುವ ಆರೋಗ್ಯ ಸಚಿವ ಡಾ. ಕೆ.ಸುಧಾಕರ್.. ಸೋಂಕು ಶ್ವಾಸಕೋಶಕ್ಕೆ ಹೋಗಲ್ಲ:ಸೋಂಕು ಬಂದರೆ ಜನ ಗಾಬರಿ ಪಡುವ ಅಗತ್ಯವಿಲ್ಲ. ಆತಂಕಕ್ಕೆ ಒಳಗಾಗಿ ಜನರು ಆಸ್ಪತ್ರೆಗೆ ದಾಖಲಾಗುವುದು ಬೇಡ. ಯಾಕೆಂದರೆ, ಒಮಿಕ್ರಾನ್ ಸ್ವಭಾವ ಮೂಗಿನಿಂದ ಪ್ರವೇಶ ಮಾಡಿ ಗಂಟಲಿಗೆ ಹೋಗುತ್ತೆ ವಿನಃ ಶ್ವಾಸಕೋಶಕ್ಕೆ ಹೋಗುವುದು ತೀರಾ ಕಡಿಮೆ.
ಹೀಗಾಗಿ, ಆಕ್ಸಿಜನ್, ವೆಂಟಿಲೇಟರ್, ಐಸಿಯು ಅಗತ್ಯತೆಯಾಗಲಿ ಕಡಿಮೆ ಇದೆ. ಆದರೆ, ಯಾರು ಎರಡು ಡೋಸ್ ಲಸಿಕೆ ಪಡೆದಿಲ್ಲ, ಅವ್ರಿಗೆ ಈ ಸೋಂಕು ಪ್ರಭಾವ ಬೀರುತ್ತದೆ. ಹೀಗಾಗಿ, ಎಲ್ಲರೂ ಲಸಿಕೆಯನ್ನ ಪಡೆಯಬೇಕು ಅಂತಾ ತಿಳಿಸಿದರು.
ಜನವರಿ 10 ರಿಂದ 60 ವರ್ಷ ಮೇಲ್ಪಟ್ಟವರಿಗೆ 3ನೇ ಡೋಸ್ ನೀಡಲಾಗುತ್ತದೆ. ಜೊತೆಗೆ ಆರೋಗ್ಯ ವಲಯದ ವೈದ್ಯರು, ದಾದಿಯರಿಗೂ, ಫ್ರಂಟ್ ಲೈನ್ ಕೆಲಸಗಾರರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಲಸಿಕೀಕರಣದಿಂದ ಕೊರೊನಾ ನಿಯಂತ್ರಣದ ದೊಡ್ಡ ಕೆಲಸ ಆಗ್ತಿದೆ ಅಂದರು.
10-15 ದಿನಗಳಲ್ಲಿ ಮಕ್ಕಳಿಗೆ ಸಂಪೂರ್ಣ ಲಸಿಕೆ :ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಇನ್ನು 10-15 ದಿನಗಳಲ್ಲಿ ಎಲ್ಲ ಮಕ್ಕಳಿಗೂ ಸಂಪೂರ್ಣ ಮೊದಲ ಡೋಸ್ ಲಸಿಕೆ ನೀಡಲಾಗುವುದು.
ಮೊದಲ ಡೋಸ್ ಪಡೆದ 28 ದಿನಗಳ ನಂತರ ಎರಡನೇ ಡೋಸ್ ನೀಡಬೇಕಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಎಲ್ಲರಿಗೂ ಕೋವ್ಯಾಕ್ಸಿನ್ ಕೊಡಲಾಗುವುದು ಅಂತಾ ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಾದಯಾತ್ರೆ- ಕಾನೂನು ಕ್ರಮದ ಕುರಿತು ಪರೋಕ್ಷ ಎಚ್ಚರಿಕೆ
ಮೇಕೆದಾಟು ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಇದೇ ಜನವರಿ 9ರಿಂದ ಪಾದಯಾತ್ರೆ ಹಮ್ಮಿಕೊಂಡಿದೆ. ಹೀಗಾಗಿ, ಮತ್ತೊಮ್ಮೆ ಸಚಿವ ಸುಧಾಕರ್ ಇದನ್ನ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ನಾವು ದುರುದ್ದೇಶದಿಂದ ಯಾವುದೇ ನಿಯಮ ಮಾಡ್ತಿಲ್ಲ.
ಬದಲಿಗೆ ಕೊರೊನಾ ವೇಗವಾಗಿ ಹರಡ್ತಿದೆ. ಹೀಗಾಗಿ, ಕಾಂಗ್ರೆಸ್ ಪಕ್ಷಕ್ಕೆ ಜನರ ಹಿತ ಕಾಪಾಡುವ ಮನಸ್ಸು ಇದೆ ಅಂತಾ ಅಂದುಕೊಂಡಿದ್ದೇನೆ. ಅವರ ಮನಸ್ಸು ಪರಿವರ್ತನೆ ಆಗಬಹುದು ಅಂದರು.