ಕರ್ನಾಟಕ

karnataka

ಎರಡು ಬಾರಿ ಸಿಎಂ ಆದ ಹೆಚ್​​ಡಿಕೆ ಬಜೆಟ್​ ದಿನವೇ ಬಂದಿಲ್ಲ, ಅವರ ಬಗ್ಗೆ ನಗಬೇಕೋ, ಅಳಬೇಕೋ ಗೊತ್ತಿಲ್ಲ: ಸಚಿವ ಚಲುವರಾಯಸ್ವಾಮಿ

By

Published : Jul 7, 2023, 4:27 PM IST

Updated : Jul 7, 2023, 11:04 PM IST

ಸಿಎಂ ಸ್ಥಾನದಲ್ಲಿ ಯಾರೇ ಇದ್ದರೂ ಸಿದ್ದರಾಮಯ್ಯ ತರಹ ಬಜೆಟ್ ಕೊಡಲು ಸಾಧ್ಯವಿಲ್ಲ. ಈ ಪ್ರಸಕ್ತ ಸಾಲಿನ ಬಜೆಟ್​ನ್ನು ಎಲ್ಲರೂ ಒಪ್ಪುತ್ತಾರೆ: ಸಚಿವ ಚೆಲುವರಾಯಸ್ವಾಮಿ ಅಭಿಮತ.

Minister Cheluvarayaswamy
ಸಚಿವ ಚಲುವರಾಯಸ್ವಾಮಿ

ಸುದ್ದಿಗಾರರೊಂದಿಗೆ ಸಚಿವ ಚೆಲುವರಾಯಸ್ವಾಮಿ ಮಾತನಾಡಿದರು.

ಬೆಂಗಳೂರು:ಎರಡು ಬಾರಿ ಸಿಎಂ ಆದ ಕುಮಾರಸ್ವಾಮಿ ಅವರು ಬಜೆಟ್‌ಗೆ ಬಂದಿಲ್ಲ‌.ಅವರ ಬಗ್ಗೆ ನಗಬೇಕೋ, ಅಳಬೇಕೋ ಗೊತ್ತಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು,ಇದು ಪರಿಷ್ಕರಣಾ ಬಜೆಟ್. ಯಾರೇ ಆ ಸ್ಥಾನದಲ್ಲಿದ್ರು ಸಿಎಂ ಸಿದ್ದರಾಮಯ್ಯ ತರ ಬಜೆಟ್ ಕೊಡಲು ಸಾಧ್ಯವಿಲ್ಲ. ಈ ಬಜೆಟ್​ನ್ನು ಎಲ್ಲರೂ ಒಪ್ಪುತ್ತಾರೆ. ವಿರೋಧ ಪಕ್ಷ ಟೀಕಿಸಬಹುದು. ಐದು ಭರವಸೆ ಈಡೇರಿಸಲು ಸಮಸ್ಯೆ ಆಗದಂತೆ ಬಜೆಟ್ ಮಂಡಿಸಿದ್ದಾರೆ. ಎಲ್ಲ ರೀತಿಯಲ್ಲೂ ಉತ್ತಮದ ಬಜೆಟ್ ಇದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅನೇಕ ಇಲಾಖೆಗಳಲ್ಲಿ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗ್ತಿದ್ದಾರೆ. ನಮ್ಮ ಇಲಾಖೆಯಲ್ಲಿ ನಂದಿನಿ ಬ್ರಾಂಡ್ ಮಾಡಲು ನಿರ್ಧರಿಸಿದ್ದೇವೆ. ನರೇಗಾ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ ಮುಂದುವರೆಸುವ ಬಗ್ಗೆಯೂ ಯೋಚಿಸಿದ್ದೇವೆ ಎಂದು ತಿಳಿಸಿದರು. ಇದು ಚೆಂಡು ಹೂ ಮುಡಿಸುವ ಬಜೆಟ್ ಅನ್ನೋ ಹೆಚ್​ಡಿಕೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದು ಪಕ್ಷದ ಸಭಾ ನಾಯಕರು ಬಜೆಟ್​ನಲ್ಲಿ ಕೂರದೇ ಇರುವವರು ಬಜೆಟ್ ಬಗ್ಗೆ ಹೇಳಿಕೆ ಕೊಡುತ್ತಾರೆ. ಅವರಿಗೆ ಮಾತನಾಡುವ ನೈತಿಕತೆ ಏನಿದೆ. ಅವರು ಬಜೆಟ್ ಸದನದಲ್ಲಿ ಕೂತು ಬಳಿಕ ಮಾತನಾಡಬೇಕಿತ್ತು. ಅವರ ಪ್ರತಿಕ್ರಿಯೆ ಹಾಕಲೇ ಬಾರದು. ಅವರು ಬಜೆಟ್ ಭಾಷಣ ಕೇಳಲು ಸದನಕ್ಕೆ ಬಂದಿಲ್ಲ. ಅದಕ್ಕೆ ನಗ ಬೇಕೋ ಅಳಬೇಕೋ ಎಂದು ಚಲುವರಾಯ ಸ್ವಾಮಿ ಟೀಕಿಸಿದರು.

ಸಿದ್ದರಾಮಯ್ಯ ಬಜೆಟ್​ದಲ್ಲಿ ಕೃಷಿ ಕ್ಷೇತ್ರಕ್ಕೆ ಆದ್ಯತೆ:ಬೆಂಗಳೂರು:ಪಂಚ ಗ್ಯಾರಂಟಿ ಯೋಜನೆಗಳಿಗೆ ಮಹತ್ವ ನೀಡುವುದರ ಜೊತೆಗೆ ಸಿದ್ದರಾಮಯ್ಯ ಸರ್ಕಾರ ಕೃಷಿ ಕ್ಷೇತ್ರಕ್ಕೂ ಉತ್ತಮ ಕೊಡುಗೆ ನೀಡಿದ್ದಾರೆ. ರಾಜ್ಯದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿರುವ ಅಲ್ಪಾವಧಿ ಸಾಲದ ಮಿತಿಯನ್ನು ಸದ್ಯದ 3 ಲಕ್ಷ ರೂಗಳಿಂದ 5 ಲಕ್ಷ ರೂ ಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಶೇ 3ರ ಬಡ್ಡಿ ದರದಲ್ಲಿ ನೀಡುವ ಮಾಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷ ರೂಗಳಿಂದ 15 ಲಕ್ಷ ರೂಗಳಿಗೆ ಹೆಚ್ಚಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂಗಳಷ್ಟು ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ.

ರೈತರು ತಮ್ಮ ಹಾಗೂ ತಮ್ಮ ನೆರೆಹೊರೆಯ ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಗೋದಾಮ ನಿರ್ಮಿಸಲು ಬ್ಯಾಂಕುಗಳು ನೀಡುವ 20 ಲಕ್ಷ ರೂ ವರೆಗಿನ ಸಾಲಕ್ಕೆ ರಾಜ್ಯ ಸರ್ಕಾರವು ಶೇಕಡಾ 7ರಷ್ಟು ಬಡ್ಡಿ ಸಹಾಯಧನ ನೀಡಲಿದೆ.

ಎಪಿಎಂಸಿ ಕಾಯ್ದೆ ರದ್ದು: ಎಪಿಎಂಸಿ ಕಾಯ್ದೆ ಜಾರಿ ನಂತರ ರೈತರಿಗೆ ಉಂಟಾಗಿರುವ ಹಾನಿ ಪರಿಗಣಿಸಿ ಈ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಲು ಸರ್ಕಾರ ನಿರ್ಧರಿಸಿದೆ. ಕಾಯಕ ನಿಧಿ ಯೋಜನೆ ಅಡಿ ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರು ಮರಣ ಹೊಂದಿದಲ್ಲಿ ಶವ ಸಂಸ್ಕಾರಕ್ಕಾಗಿ ನೀಡಲಾಗುತ್ತಿದ್ದ 10,000 ವನ್ನು 25,000 ರೂ.ಗೆ ಹೆಚ್ಚಳ ಮಾಡುವುದಾಗಿ ಬಜೆಟ್​ನಲ್ಲಿ ತಿಳಿಸಲಾಗಿದೆ.

ನವೋದ್ಯಮ ಯೋಜನೆ:ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ʻನವೋದ್ಯಮʼ ಎಂಬ ಹೊಸ ಯೋಜನೆಯಡಿ 10 ಕೋಟಿ ರೂ. ಒದಗಿಸಲು ನಿರ್ಧರಿಸಲಾಗಿದೆ.

ಇದನ್ನೂಓದಿ:Karnataka Budget: ದಾಖಲೆಯ ಬಜೆಟ್​ ಮಂಡಿಸಿದ ಸಿದ್ದರಾಮಯ್ಯ: ಅಬಕಾರಿ ಸುಂಕ ಹೆಚ್ಚಳ

Last Updated : Jul 7, 2023, 11:04 PM IST

ABOUT THE AUTHOR

...view details