ಕರ್ನಾಟಕ

karnataka

ಮಳೆ ಹಾನಿ ಪರಿಶೀಲನೆ.. ಕೇಂದ್ರ ತಂಡದ್ದು 'ಬಂದ ಪುಟ್ಟ ಹೋದ ಪುಟ್ಟ' ಎಂಬಂತಹ ಸ್ಥಿತಿ: ಹೆಚ್​​ಡಿಕೆ ಅಸಮಾಧಾನ

By

Published : Sep 14, 2022, 5:22 PM IST

ರಾಜ್ಯದಲ್ಲಿ ಉಂಟಾದ ಮಳೆಹಾನಿಯನ್ನು ಪರಿಶೀಲನೆ ನಡೆಸಲು ಆಗಮಿಸಿದ ಕೇಂದ್ರ ತಂಡದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಅಧ್ಯಯನ ತಂಡ ಸರಿಯಾಗಿ ಅಧ್ಯಯನ ನಡೆಸದೇ ಹೇಗೆ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

hd-kumaraswamy-relieved-for-the-central-teams-rain-damage-survey
ಮಳೆ ಹಾನಿ ಪರಿಶೀಲನೆಗೆ ಬಂದ ಕೇಂದ್ರ ತಂಡ ' ಬಂದ ಪುಟ್ಟ ಹೋದ ಪುಟ್ಟ ' ಎಂಬಂತಾಗಿದೆ : ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ

ಬೆಂಗಳೂರು : ಮಳೆ ಹಾನಿ ಪರಿಶೀಲನೆ ನಡೆಸಿ ವರದಿ ನೀಡಲು ಬಂದಿದ್ದ ಕೇಂದ್ರ ತಂಡ "ಬಂದ ಪುಟ್ಟ ಹೋದ ಪುಟ್ಟ ಆದಂತಾಯಿತೇ ಎಂಬುದು ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ನಿಯಮ 69 ಅಡಿಯಲ್ಲಿ ಅತಿವೃಷ್ಟಿ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕೇಂದ್ರ ತಂಡ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ.‌ ಕೇಂದ್ರ ತಂಡದ ಮುಂದೆ ಜನರು ಹಾವೇರಿಯಲ್ಲಿ ಪರಿಹಾರ ಕೊಡಿಸಿ ಇಲ್ಲವಾದರೆ, ವಿಷ ಸೇವಿಸುವ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ‌ ಎಂದು ಗಮನಸೆಳೆದರು.

ಶಿಗ್ಗಾಂವಿ ತಾಲೂಕಿನಲ್ಲಿ ಕೇಂದ್ರ ತಂಡದ ಪರಿಶೀಲನೆಗೆ ರೈತರು ಅಸಮಾಧಾನಗೊಂಡಿದ್ದರು. ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಬಂದಿದೆ. ಬೆಳೆ ನಷ್ಟದ ಬಗ್ಗೆ ಹೊಲಕ್ಕೆ ಬಾರದೆ ರಸ್ತೆಯಲ್ಲೇ ನಿಂತು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾದರೆ ಎಷ್ಟರ ಮಟ್ಟಿಗೆ ಕೇಂದ್ರ ಸರ್ಕಾರಕ್ಕೆ ಇವರು ವರದಿ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಕೃಷಿ ವಿವಿ ಬಗ್ಗೆ ಅಸಮಾಧಾನ : ಕಳೆದ ಐದು ವರ್ಷದಲ್ಲಿ ಯಾವ ರೀತಿಯಲ್ಲಿ ಸರಾಸರಿ ಮಳೆಯಾಗಿದೆ ಹಾಗೂ ಅದರ ಪರಿಣಾಮದ ಬಗ್ಗೆ ವರದಿ ತೆಗೆದುಕೊಳ್ಳಬೇಕಿದೆ. ಸ್ಪರ್ಧೆಯಲ್ಲಿ ಕೃಷಿ ವಿವಿ ಮಾಡಿಕೊಂಡಿದ್ದೇವೆ. ಆದರೆ, ಅವರು ಏನು ಮಾಡುತ್ತಿದ್ದಾರೆ ? ಐದು ವರ್ಷಗಳಲ್ಲಿ ಏನು ಕೆಲಸ ಮಾಡಿದ್ದಾರೆ ? ಮಳೆ ಅನಾಹುತದ ಬಗ್ಗೆ ವೈಜ್ಞಾನಿಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.

ಎನ್ ಡಿ ಆರ್ ಎಫ್ ಗೈಡ್ ಲೈನ್ ಬದಲಾವಣೆ ಆಗಿಲ್ಲ. ಐದು ವರ್ಷಕ್ಕೆ ಒಮ್ಮೆ ಪರಿಶೀಲನೆ ಮಾಡಬೇಕಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಅದು ಆಗಿಲ್ಲ . ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಸಿದ್ದರಾಮಯ್ಯ ಸದನಲ್ಲಿ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತ ಇದೆ ಎಂದು ಸಿದ್ದರಾಮಯ್ಯ ಮಾತಿಗೆ ಹೆಚ್ ಡಿಕೆ ಸಹಮತ ವ್ಯಕ್ತಪಡಿಸಿದರು.

ಪರಿಹಾರದ ವಿಚಾರವಾಗಿ ಕೇಂದ್ರ ಸರ್ಕಾರದ ಮನವೊಲಿಸಬೇಕು :ಈ ವರ್ಷ ಹೆಚ್ಚಿನ ಮಳೆಯಾಯ್ತು ಎಂದು ಕಾರಣ ಹೇಳಲು ಸಾಧ್ಯವಿಲ್ಲ. ಆ ಕಾರಣ ಹೇಳಿ ಜನರನ್ನು ಮೆಚ್ಚಿಸಲು ಸಾಧ್ಯವಿಲ್ಲ. ಕಳೆದ ಐದು ವರ್ಷದಲ್ಲಿ ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಮಳೆಯಾಗಿದೆ. ಹಳ್ಳಿ ಮೇಲೆ, ಬೆಳೆ ಮೇಲೆ ಆಗಿರುವ ಪರಿಣಾಮದ ಬಗ್ಗೆ ವರದಿ ಪಡೆಯಬೇಕು ಎಂದರು.

ಪ್ರಕೃತಿ ವಿಕೋಪದ ಸಂಕಷ್ಟಕ್ಕೆ ನಾವೇ ನಮ್ಮನ್ನು ದೂಡಿಕೊಂಡಿದ್ದೇವೆ. ಅತಿವೃಷ್ಟಿ ಅನಾಹುತ 2004-05 ರಲ್ಲೂ 2009 ರಲ್ಲೂ ಕಂಡಿದ್ದೇವೆ. 2018 ರಲ್ಲೂ ಹಲವು ಕಡೆಗಳಲ್ಲಿ ಪ್ರಕೃತಿ ವಿಕೋಪದ ಸಮಸ್ಯೆ ಎದುರಿಸಬೇಕಾಯಿತು. ವಿರೋಧ ಪಕ್ಷದಲ್ಲಿ ಕುಳಿತು ಸರ್ಕಾರದ ವೈಫಲ್ಯವನ್ನು ಟೀಕೆಗಾಗಿ ಮಾಡಲು ನಾನು ತಯಾರಿಲ್ಲ. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪರಿಹಾರ ವಿಚಾರವಾಗಿ ಕೇಂದ್ರ ಸರ್ಕಾರದ ಮನವೊಲಿಸಬೇಕು. ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಮನೆಗಳ ಕುಸಿತಕ್ಕೆ ಐದು ಲಕ್ಷ ಪರಿಹಾರ ಕೊಡಲಾಗಿತ್ತು. ಇದು ಉತ್ತಮವಾದ ತೀರ್ಮಾನ. ಬೆಳೆ ಹಾನಿ ಬಗ್ಗೆಯೂ ಎನ್ ಡಿ ಆರ್ ಎಫ್ ನಾರ್ಮ್ ಮೀರಿ ಪರಿಹಾರ ಕೊಡಲಾಗಿದೆ. ಬೆಂಗಳೂರು ಮಳೆ ಹಾನಿಗೆ ಪರಸ್ಪರ ಟೀಕೆ ಸರಿಯಲ್ಲ. ಇದರಿಂದ ಜನಸಾಮಾನ್ಯರ ನೋವಿಗೆ ಉತ್ತರ ಸಿಗಲ್ಲ ಎಂದು ಹೇಳಿದರು.

ಪ್ರಕೃತಿ ವಿಕೋಪದಿಂದ ಐದು ವರ್ಷದಲ್ಲಿ 1 ಲಕ್ಷ ಕೋಟಿ ನಷ್ಟ : ನಮ್ಮ ಸರ್ಕಾರದ ಪ್ರತೀ ವರದಿ ನೋಡಿದಾಗ, 2008-09ರಲ್ಲಿ ಎಸ್ಟಿಮೇಟ್ ಲಾಸ್ 3,700 ಕೋಟಿ ರೂ. ಕೊಟ್ಟಿದ್ದೇವೆ. 2019ಕ್ಕೆ ಬಂದರೆ 35 ಸಾವಿರ ಕೋಟಿ ರೂ. ನಷ್ಟವಾಗಿದೆ. 2020 ಆಗಸ್ಟ್ ತಿಂಗಳಲ್ಲಿ 8,000 ಕೋಟಿ ನಷ್ಟ ಆಗಿದೆ. ಮತ್ತೆ ಅದೇ ವರ್ಷ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ 15,410 ಕೋಟಿ ನಷ್ಟ ಕೊಡಲಾಗಿದೆ. 2021 ಜುಲೈ ತಿಂಗಳಲ್ಲಿ 5,490 ಕೋಟಿ. ಈಗ 11,911 ಕೋಟಿ ಲೆಕ್ಕ ಕೊಡಲಾಗಿದೆ. ಈ ಎಲ್ಲ ಲೆಕ್ಕ ನೋಡಿದರೆ, 1 ಲಕ್ಷ ಕೋಟಿ ಕಳೆದ ಐದು ವರ್ಷದಲ್ಲಿ ಪ್ರಕೃತಿ ವಿಕೋಪದಿಂದ ನಷ್ಟವಾಗಿದೆ ಎಂದು ಅಂಕಿ- ಅಂಶಗಳ ಸಹಿತ ವಿವರಿಸಿದರು.

ಇದನ್ನೂ ಓದಿ :ಸದನದಲ್ಲಿ ಗಂಗಾ ಕಲ್ಯಾಣ ಯೋಜನೆ ಪ್ರತಿಧ್ವನಿ: ಆಡಳಿತ, ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ

ABOUT THE AUTHOR

...view details