ಕರ್ನಾಟಕ

karnataka

ಅರಣ್ಯಾಧಿಕಾರಿಗಳ ಪರಿಶೀಲನೆಗೆ ಪೆಂಡೆಂಟ್‌ ಒಪ್ಪಿಸಿದ ಹೆಚ್‌ಡಿಕೆ: 'ಹುಲಿ ಉಗುರಲ್ಲ, ಅದು ಸಿಂಥೆಟಿಕ್‌'- ಸ್ಪಷ್ಟನೆ

By ETV Bharat Karnataka Team

Published : Oct 25, 2023, 10:42 PM IST

Updated : Oct 25, 2023, 11:01 PM IST

ನಮ್ಮ ಬಳಿ ಇರುವ ಹುಲಿ ಉಗುರಿನ ರೀತಿಯ ಪೆಂಡೆಂಟ್ ಸಿಂಥೆಟಿಕ್‌ನದು. ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲು ಯಾವುದೇ ತೊಂದರೆ ಇಲ್ಲ ಎಂದು ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Former CM HD Kumaraswamy spoke to the media.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೆಂಗಳೂರು: ಹುಲಿ ಉಗುರಿನ ರೀತಿಯಲ್ಲಿರುವ ಪೆಂಡೆಂಟ್ ನೈಜವಲ್ಲ. ಅದನ್ನು ಅರಣ್ಯಾಧಿಕಾರಿಗಳು ಪರಿಶೀಲನೆ ಮಾಡಲು ತೆಗೆದುಕೊಂಡು ಹೋಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸಕ್ಕೆ ಬುಧವಾರ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪೆಂಟೆಂಡ್ ಪರಿಶೀಲನೆ ನಡೆಸಿರುವ ಬಗ್ಗೆ ಮಾತನಾಡುತ್ತಾ, ಇವತ್ತು ಬೆಳಗ್ಗೆಯಿಂದ ಚಿತ್ರ ನಟರು, ಜ್ಯೋತಿಷಿಗಳು ಹುಲಿ ಉಗುರಿನ ಮಾದರಿಯ ಪೆಂಡೆಂಟ್‌ ಧರಿಸಿರುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಸರು ಈ ವಿಷಯದಲ್ಲಿ ಕೇಳಿ ಬಂದಿದೆ. ನಿಖಿಲ್ ಮದುವೆ ಸಂದರ್ಭದಲ್ಲಿ ಕೊರಳಿಗೆ ಹಾಕಿದ್ದ ಪೆಂಡೆಂಟ್ ಅದು. ನಿಖಿಲ್ ಹೆಸರು ಬಂದ ಬಳಕ ಸ್ವತಃ ನಾನೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಬಂದು ಪರಿಶೀಲನೆ ಮಾಡಿಕೊಳ್ಳಿ, ನಿಮಗೆ ಮುಜುಗರ ಆಗಬಾರದು. ಈ ರಾಜ್ಯದಲ್ಲಿ ನ್ಯಾಯ ಎಲ್ಲರಿಗೂ ಒಂದೇ ಎಂದು ತಿಳಿಸಿದ್ದೆ. ಅದರಂತೆ ಬಂದು ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು.

ತಪ್ಪಿದ್ದರೆ ಕ್ರಮ ತೆಗೆದುಕೊಳ್ಳಲು ಯಾವುದೇ ತೊಂದರೆ ಇಲ್ಲ. ನೀವು ಬಂದು ಪರಿಶೀಲನೆ ಮಾಡಿ ಅಂದೆ. ಅದರಂತೆ ಅಧಿಕಾರಿಗಳು ಬಂದು ಮಹಜರ್ ಮಾಡಿದ್ದಾರೆ. ನಾನೇ ಅಧಿಕಾರಿಗಳೊಂದಿಗೆ ಚಿನ್ನದ ಅಂಗಡಿಗೆ ಅದನ್ನು ಕಳುಹಿಸುತ್ತಿದ್ದೇನೆ. ಅದನ್ನು ಬಿಚ್ಚಿ ತೆಗೆದುಕೊಂಡು ಹೋಗಲು ಸಹಕಾರ ಕೊಟ್ಟಿದ್ದೇನೆ. ನಮ್ಮ ಬಳಿ ಇರುವ ಹುಲಿ ಉಗುರು ರೀತಿಯ ಪೆಂಡೆಂಟ್ ಸಿಂಥೆಟಿಕ್‌ನದು. ಸಾಕಷ್ಟು ಜನರ ಬಳಿ ಇಂಥ ಪೆಂಡೆಂಟ್ ಇರುತ್ತದೆ ಎಂದರು.

ನಾನು ಬಹಳಷ್ಟು ಸಿನಿಮಾಗಳಲ್ಲಿ ನೋಡಿದ್ದೀನಿ. ನಟರು ಇಂಥ ಪೆಂಡೆಂಟ್‌ ಧರಿಸಿರುತ್ತಾರೆ. ನಾನು ಕೂಡ ಸಿನಿಮಾ ನಿರ್ಮಾಪಕನೇ. ಅನೇಕರು ಸ್ಟೈಲ್ ಆಗಿದೆ ಎಂದು ಧರಿಸುತ್ತಾರೆ. ನಿಖಿಲ್ ಅವರ ಮದುವೆಯಲ್ಲಿ ಯಾರೋ ಉಡುಗೊರೆ ಕೊಟ್ಟರು ಅಂತ ಹಾಕಿದ್ದುಬಿಟ್ಟರೆ ಅದು ಬೀರುವಿನಲ್ಲೇ ಬಿದ್ದಿತ್ತು ಎಂದು ತಿಳಿಸಿದರು.

ವನ್ಯಜೀವಿ ಸಂಕ್ಷರಣಾ ಕಾಯ್ದೆ ಬಗ್ಗೆ ನಮಗೂ ಗೊತ್ತಿದೆ. ಅಂಥ ವಸ್ತುಗಳನ್ನು ಇಟ್ಟುಕೊಳ್ಳುವುದು ಕಾನೂನು ಬಾಹಿರ ಎನ್ನುವ ಅರಿವು ನಮಗಿದೆ. ನಾವು ಅಂಥಾ ಕೆಲಸ ಮಾಡುವುದಿಲ್ಲ. ಹೀಗಾಗಿ ನಮಗೆ ಯಾವುದೇ ಗಾಬರಿ, ಆತಂಕ ಇಲ್ಲ. ಅಧಿಕಾರಿಗಳು ಎಫ್‌ಎಸ್‌ಎಲ್‌ಗೆ ಕಳುಹಿಸಿ ವಾಸ್ತವಾಂಶ ಪತ್ತೆ ಹಚ್ಚಲಿ. ಅದರಲ್ಲಿ ಅನುಮಾನ ಎನ್ನುವ ಮಾತು ಬರಬಾರದು ಎಂದರು.

ಇದನ್ನೂಓದಿ:ಹುಲಿ ಉಗುರು ಪೆಂಡೆಂಟ್ ಹೊಂದಿರುವ ಆರೋಪ: ದರ್ಶನ್, ರಾಕ್​ಲೈನ್ ವೆಂಕಟೇಶ್‌ ಮನೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

Last Updated : Oct 25, 2023, 11:01 PM IST

ABOUT THE AUTHOR

...view details