ಕರ್ನಾಟಕ

karnataka

ಬೆಂಗಳೂರಿನಲ್ಲಿ ಕನ್ನಡ ರಥದ ಮೆರವಣಿಗೆ: ಸಾಹಿತ್ಯ ಸಮ್ಮೇಳನಕ್ಕೆ ಸಮಸ್ತ ಕನ್ನಡಿಗರಿಗೆ ಆಹ್ವಾನ

By

Published : Dec 16, 2022, 9:54 PM IST

ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ರಥದ ಅದ್ಧೂರಿ ಮೆರವಣಿಗೆ ಜಾಥಾಕ್ಕೆ ನಾಡೋಜ ಡಾ.ಮಹೇಶ ಜೋಶಿ ಚಾಲನೆ ನೀಡಿದರು.

Etv BharatNadoja Dr. Mahesh Joshi started the jatha by offering puja to the Kannada chariot that arrived in Bangalore
ಬೆಂಗಳೂರಿಗೆ ಆಗಮಿಸಿದ ಕನ್ನಡ ರಥಕ್ಕೆ ಪೂಜೆ ಸಲ್ಲಿಸಿ ಜಾಥಾಕ್ಕೆ ನಾಡೋಜ ಡಾ.ಮಹೇಶ ಜೋಶಿ ಚಾಲನೆ

ಬೆಂಗಳೂರು:ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಜ್ಯೋತಿಯನ್ನು ಹೊತ್ತ ಕನ್ನಡ ಸ್ವಾಭಿಮಾನದ ಸಂಕೇತವಾದ ಕನ್ನಡ ರಥ ಜಾಥಾವನ್ನು ಪರಿಷತ್ತು ಹಮ್ಮಿಕೊಂಡಿದ್ದು, ಹೊಸ ಪರಂಪರೆಗೆ ನಾಂದಿ ಹಾಡಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅಭಿಪ್ರಾಯಪಟ್ಟರು. ಇಂದು ಬೆಂಗಳೂರಿಗೆ ಆಗಮಿಸಿದ ಕನ್ನಡ ರಥಕ್ಕೆ ಪೂಜೆ ಸಲ್ಲಿಸಿ ಜಾಥಾಕ್ಕೆ ಅವರು ಚಾಲನೆ ಕೊಟ್ಟರು.

ಬಳಿಕ ಮಾತನಾಡಿ, ಹೆಸರಾಂತ ಹಿರಿಯ ಕವಿ ಡಾ. ದೊಡ್ಡರಂಗೇಗೌಡರ ಅಧ್ಯಕ್ಷತೆಯಲ್ಲಿ 2023ರ ಜನವರಿ 6,7 ಹಾಗೂ 8 ವರೆಗೆ ಮೂರು ದಿನಗಳ ಕಾಲ ಆಚರಿಸಲಾಗುತ್ತಿರುವ ಕನ್ನಡದ ನುಡಿ ಜಾತ್ರೆಯನ್ನು ಐತಿಹಾಸಿಕ ದಾಖಲೆಯನ್ನಾಗಿಸುವ ಸದುದ್ದೇಶದಿಂದ, ರಥವನ್ನು ನಾಡಿನಾದ್ಯಂತ ಸಂಚರಿಸುವ ಮೂಲಕ ಎಲ್ಲ ಕನ್ನಡಿಗರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುತ್ತಿದೆ. ಜೊತೆಗೆ ಕನ್ನಡ ತಾಯಿ ಭುವನೇಶ್ವರಿಯ ಸನ್ನಿಧಾನದಿಂದ ತರಲಾದ ಪವಿತ್ರ ಕನ್ನಡ ಜ್ಯೋತಿಯನ್ನು ಕನ್ನಡಿಗರಿಗೆ ದರ್ಶನ ಮಾಡಿಸುವುದರ ಮೂಲಕ ಹೊಸ ಇತಿಹಾಸ ಸೃಷ್ಟಿಸುವ ಪ್ರಯತ್ನ ಇದಾಗಿದೆ ಎಂದು ಜೋಶಿ ತಿಳಿಸಿದರು.

ರಥಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಬೇಲಿಮಠದ ಪೀಠಾಧಿಕಾರಿ ಶಿವರುದ್ರ ಸ್ವಾಮೀಜಿ, ಕನ್ನಡ ತಾಯಿ ಭುವನೇಶ್ವರಿಯ ಪೂರ್ಣ ಕೃಪೆ ಸಮಸ್ತ ಕನ್ನಡಿಗರ ಮೇಲಿದೆ. ಈ ಸತ್ಯವನ್ನು ಇಂದು ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಎಲ್ಲ ಮೂಲೆ ಮೂಲೆಗಳ ಕನ್ನಡಿಗರಿಗೆ ರಥದಲ್ಲಿ ಕನ್ನಡ ಜ್ಯೋತಿ ದರ್ಶನ ಮಾಡಿಸುವುದರ ಮೂಲಕ ತೋರಿಸಿಕೊಟ್ಟಿದೆ ಎಂದು ಹೇಳಿದರು.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ದೋಡ್ಡರಂಗೇಗೌಡ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡಿಗರ ಹೆಮ್ಮೆಯ ಪ್ರತೀಕವಾಗಬೇಕಿದೆ. ಆ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸಕಾರಾತ್ಮಕವಾದ ಹೆಜ್ಜೆ ಇಡುತ್ತಿದೆ. ಎಲ್ಲ ಕನ್ನಡಿಗರು ಹಾವೇರಿಯಲ್ಲಿ ನಡೆಯುವ ಕನ್ನಡದ ಅಕ್ಷರ ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ಕನ್ನಡಾಭಿಮಾನವನ್ನು ಎತ್ತಿ ತೋರಿಸಬೇಕಿದೆ ಎಂದು ಹೇಳಿದರು.

ನಾಳೆ ಬೆಳಗ್ಗೆ ಮೈಸೂರು ರಸ್ತೆಯಿಂದ ತೆರಳಿ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸ್ವೀಕರಿಸಿ ಕೆಂಗೇರಿ ಮಾರ್ಗವಾಗಿ ರಾಮನಗರ ಜಿಲ್ಲೆಗೆ ಕನ್ನಡ ರಥ ತೆರಳಲಿದೆ.

ಇದನ್ನೂ ಓದಿ:ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಗ್ಗೆ ಡಾ.ಮಹೇಶ್‌ ಜೋಶಿ ಸ್ಪಷ್ಟನೆ

ABOUT THE AUTHOR

...view details