ಕರ್ನಾಟಕ

karnataka

ಜಾತಿಗಣತಿ ವರದಿ ಕೈ ಸೇರಿದ ಬಳಿಕ ಸೂಕ್ತ ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ

By ETV Bharat Karnataka Team

Published : Nov 22, 2023, 6:59 PM IST

Updated : Nov 22, 2023, 8:52 PM IST

162 ಕೋಟಿ ಖರ್ಚು ಮಾಡಿ ಜಾತಿಗಣತಿ ವರದಿ ತಯಾರಿಸಲಾಗಿದೆ. ವರದಿ ಪಡೆಯದಿರಲು ಒಕ್ಕಲಿಗರ ಸಂಘ ಮನವಿ ಸಲ್ಲಿಸಿದೆ. ವರದಿ ಬಂದ ಬಳಿಕ ಅವರ ಸಂಶಯಗಳು ನಿವಾರಣೆ ಆಗಲಿವೆ. ಡಿಸೆಂಬರ್​ನಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

CM Siddaramaiah spoke to the media.
ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮದವರ ಜೊತೆ ಮಾತನಾಡಿದರು.

ಬೆಂಗಳೂರು: ಜಾತಿ ಜನಗಣತಿ ವರದಿ ಪಡೆಯದಿರಲು ಒಕ್ಕಲಿಗರ ಸಂಘ ಮನವಿ ಸಲ್ಲಿಸಿದ್ದು, ವರದಿ ಕೊಡುವ ಮುನ್ನ ಏಕೆ ವಿರೋಧಿಸುತ್ತಿದ್ದೀರಿ. ವರದಿ‌ ಕೈ ಸೇರಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ನಂತರ ಮಾಧ್ಯಮದವರ ಪ್ರಶ್ನೆಗೆ‌ ಉತ್ತರಿಸಿದ ಅವರು, ಜಾತಿ ಗಣತಿ ವರದಿ ಇನ್ನೂ ನಮ್ಮ ಕೈ ಸೇರಿಲ್ಲ. ಕೊಟ್ಟ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು. ಮೂಲ ಪ್ರತಿ ಕಾಣೆಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜಾತಿಗಣತಿ ವರದಿ ಬಗ್ಗೆ ನನಗೆ ಗೊತ್ತಿಲ್ಲ. ಈ ಹಿಂದೆ ಅವರು ನನ್ನನ್ನು ಭೇಟಿಯಾಗಿ ವರದಿ ಸಲ್ಲಿಸುತ್ತಾರೆ ಎಂದು ತಿಳಿಸಿದ್ದರು. ಅಲ್ಲಿಯ ವರೆಗೆ ಅವಧಿ ವಿಸ್ತರಣೆ ಮಾಡಬೇಕು ಎಂದು ಮನವಿ ಮಾಡಿದ್ದರು ಎಂದು ತಿಳಿಸಿದ್ದರು.

ಡಿಸೆಂಬರ್​ನಲ್ಲಿ ವರದಿ ಸಲ್ಲಿಸುವ ನಿರೀಕ್ಷೆ: ವರದಿ ಯಾವಾಗ ಕೊಡುತ್ತಾರೋ ಅಲ್ಲಿಯವರೆಗೆ ಅವಧಿ ವಿಸ್ತರಣೆಯಾಗುತ್ತದೆ. 162 ಕೋಟಿ ಖರ್ಚು ಮಾಡಿ ವರದಿ ತಯಾರಿಸಲಾಗಿದೆ. ವರದಿ ಬಂದ ನಂತರ ಅವರ ಸಂಶಯಗಳು ನಿವಾರಣೆಯಾಗಲಿದೆಯೋ ಇಲ್ಲವೋ ನೋಡೋಣ. ವರದಿಯಲ್ಲಿ ಏನಿದೆ ಎಂದು ತಿಳಿದಿಲ್ಲ. ಡಿಸೆಂಬರ್​ನಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದರು.

ಜಾತಿ ಗಣತಿ ವರದಿ ಬಗ್ಗೆ ಡಿಸಿಎಂ ನನ್ನೊಂದಿಗೆ ಏನನ್ನೂ ಮಾತನಾಡಿಲ್ಲ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಸ್ಪಷ್ಟ ಪಡಿಸಿದರು. ನಿಗಮ ಮಂಡಳಿಗಳ ನೇಮಕಾತಿಗೆ ಸಂಬಂಧಿಸಿದಂತೆ ಪೂರ್ವಭಾವಿ ಚರ್ಚೆಯಾಗಿದ್ದು ಯಾರನ್ನು ಮಾಡಬೇಕೆಂಬ ಬಗ್ಗೆ ಅಂತಿಮಗೊಳಿ ಸಿಲ್ಲ ಎಂದು ತಿಳಿಸಿದರು.

ಜಾತಿ ಗಣತಿ ವಿಚಾರದಲ್ಲಿ ಪಕ್ಷದ ನಿಲುವಿಗೆ ಬದ್ಧ: ಜಾತಿಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು. ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ, ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್​ ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು ಎಂದು ಅನೇಕ ಸಮುದಾಯಗಳು ಆಗ್ರಹ ಮಾಡಿವೆ. ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವರು ಹೋರಾಟ ಮಾಡುತ್ತಿದ್ದಾರೆ.

ಈ ಹೋರಾಟದಲ್ಲಿ ಪಕ್ಷಭೇದ ಮರೆತು ಹೋರಾಟ ಮಾಡಲಾಗುತ್ತಿದೆ. ಕೆಲ ಸಮುದಾಯ ಹಾಗೂ ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ನಮ್ಮನ್ನು ಸಂಪರ್ಕಿಸಿಲ್ಲ. ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿವೆ ಎಂದರು.

ಇದನ್ನೂಓದಿ:ಜಾತಿ‌ ಗಣತಿ ವರದಿ ಬಗ್ಗೆ ಸಿಎಂ ದ್ವಂದ್ವ ನಿಲುವು, ವರದಿ ಕುರಿತು ಚರ್ಚೆಯಾಗಬೇಕು: ಸುನೀಲ್ ಕುಮಾರ್

Last Updated : Nov 22, 2023, 8:52 PM IST

ABOUT THE AUTHOR

...view details