ಕರ್ನಾಟಕ

karnataka

ನಾವು ಜಾರಿಗೆ ತಂದಿದ್ದ ಕಾರ್ಮಿಕ ಸ್ನೇಹಿ ಕಾನೂನು ಕಿತ್ತು ಹಾಕಿದ್ದೇ ಈ ಸರ್ಕಾರದ ಸಾಧನೆ: ಖರ್ಗೆ ಗರಂ

By

Published : May 1, 2023, 3:58 PM IST

ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

governments-achievement-is-to-scrap-the-labor-friendly-law-kharge
ನಾವು ಜಾರಿಗೆ ತಂದಿದ್ದ ಕಾರ್ಮಿಕ ಸ್ನೇಹಿ ಕಾನೂನನ್ನು ಕಿತ್ತು ಹಾಕಿದ್ದೇ ಈ ಸರ್ಕಾರದ ಸಾಧನೆ: ಖರ್ಗೆ

ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು

ಬೆಂಗಳೂರು:ಕಾರ್ಮಿಕರಿಗೆ ಅನುಕೂಲವಾಗುವ ಮಾದರಿಯ ಹಲವು ಕಾನೂನುಗಳನ್ನು ನಾವು ತಂದಿದ್ದೆವು. ಆದರೆ ಈಗಿನ ಸರ್ಕಾರ ಇದನ್ನು ಒಂದೊಂದಾಗಿ ಕಿತ್ತುಹಾಕುವ ಕಾರ್ಯ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕಾರ್ಮಿಕರ ದಿನ ಅತ್ಯಂತ ಮಹತ್ವದ್ದು, ಎಲ್ಲ ಶ್ರಮಿಕರಿಗೆ ಒಂದು ಮಹತ್ವದ ದಿನ. ರಾಜ್ಯದ ಹಾಗೂ ದೇಶದ ಮತ್ತು ಪ್ರಪಂಚದ ಕಾರ್ಮಿಕ ವರ್ಗಕ್ಕೆ ನನ್ನ ಶುಭಾಶಯ ಸಲ್ಲಿಸಲು ಬಯಸುತ್ತೇನೆ. ಅವರ ಶ್ರಮದಿಂದ ಇಡೀ ಪ್ರಪಂಚ ಇಂದು ನಿಂತಿದೆ. ನಾವು ಸುಖ, ಶಾಂತಿ ನೆಮ್ಮದಿಯಿಂದ ಬದುಕಿರುವಲ್ಲಿ ಅವರೇ ಕಾರಣ. ಕಾರ್ಮಿಕ ಸಂಘಟನೆ ಭಾರತದಲ್ಲಿ ಪ್ರಥಮವಾಗಿ ಮಹಾತ್ಮ ಗಾಂಧಿ 'ಮಜ್ದೂರ್ ಸಂಘ' ಎಂಬ ಹೆಸರಲ್ಲಿ ಪ್ರಾರಂಭಿಸಿದರು. ನಂತರ ಇಂಟಕ್ ಸ್ಥಾಪನೆ ಆಯಿತು. ಕಾರ್ಮಿಕರ ಪರವಾಗಿ ಕೆಲಸ ಮಾಡುವ ಮಹತ್ವದ ಸಂಘಟನೆ ಆಗಿದೆ.

ಸಾಕಷ್ಟು ಜನ ಇಂತಹ ಸಂಘಟನೆ ಕಡೆ ಲಕ್ಷ್ಯ ಕೊಡುತ್ತಿಲ್ಲ. ಇದರಿಂದ ದೇಶದಲ್ಲಿ ಅನೇಕ ಒಳ್ಳೆಯ ಕಾನೂನು ನಾವು ತಂದಿದ್ದು, ಅದನ್ನು ಈಗ ಒಂದೊಂದಾಗಿ ಮೊಟಕುಗೊಳಿಸುವ ಕಾರ್ಯ ಆಗುತ್ತಿದೆ. ಹೆಚ್ಚಾಗಿ ಶ್ರೀಮಂತರ ಪರ, ಉದ್ಯಮಿಗಳ ಅನುಕೂಲಕ್ಕೆ ಬೇಕಾಗುವಂತ ಕಾನೂನು ರಚನೆ ಮಾಡಲಾಗುತ್ತಿದೆ. ಯಾವುದು ನ್ಯಾಯವಾಗಿದೆ ಅದನ್ನು ನಾವು ಒಪ್ಪಲ್ಲ. ಆದರೆ ಯಾವುದು ಸರಿಯಲ್ಲ ಅನ್ನುವುದನ್ನು ಅರಿಯಬೇಕು. ಆಧುನಿಕ ಪ್ರಪಂಚದಲ್ಲಿ ಮಾನಸಿಕ, ದೈಹಿಕ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಂದರ್ಭ ಎದುರಾದಾಗ ಸರ್ಕಾರ ಅಂತಹ ಕಾನೂನಿಗೆ ಕೈ ಹಾಕಬಾರದು ಎಂದರು.

ಒತ್ತಾಯದಿಂದ ದಿನಕ್ಕೆ 12 ಗಂಟೆ ಕಾರ್ಯನಿರ್ವಹಿಸುವ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಇಂಗ್ಲೆಂಡ್​ ನಂತಹ ರಾಷ್ಟ್ರದಲ್ಲಿ ಕೇವಲ 8 ಗಂಟೆ ಕನಿಷ್ಠ ಕಾಲಾವಧಿ ಇದೆ. ಆದರೆ, ದೇಶದಲ್ಲಿ ಈ ಬದಲಾವಣೆ ಆಗಬೇಕು. ನಮ್ಮ ಅವಧಿಯಲ್ಲಿ ಕಾರ್ಮಿಕರಿಗೆ ಸಾಕಷ್ಟು ಆರೋಗ್ಯ ಸೌಲಭ್ಯ ಕಲ್ಪಿಸಿದ್ದೆವು. ಆದರೆ, ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸವಲತ್ತು ಹೆಚ್ಚಿಸಿಲ್ಲ. ಕಾರ್ಮಿಕರ ಬಗ್ಗೆ ಈಗಿನ ಸರ್ಕಾರಕ್ಕೆ ಕಾಳಜಿ ಇಲ್ಲ. ಅವರಿಗೆ ಹೆಚ್ಚು ಅನುದಾನ ಮೀಸಲಿಡುತ್ತಿಲ್ಲ. ಅವರಿಗಾಗಿ ಮೀಸಲಿಟ್ಟ ಹಣವನ್ನು ಷೇರು ಮಾರುಕಟ್ಟೆ ಮೇಲೆ ಹೂಡುತ್ತಿದ್ದಾರೆ. ಆದರೆ, ಷೇರು ಬಿದ್ದು ಹೋಗಿದೆ ಎಂದು ಹೇಳಲಾಗದು. ಕಾರ್ಮಿಕರ ಭವಿಷ್ಯ ನಿಧಿಯಲ್ಲಿರುವ ಹಣಕ್ಕೆ ಒಂದು ಪರ್ಸೆಂಟ್ ಬಡ್ಡಿ ಕಡಿಮೆ ಕೊಡಿ, ಆದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅವರ ಭವಿಷ್ಯ ಅಸ್ಥಿರಗೊಳಿಸುವುದು ಬೇಡ ಎಂದರು.

ಹಿಂದೆ ನಮ್ಮ ಸರ್ಕಾರದಲ್ಲಿ ಕಾರ್ಮಿಕರ ಬಳಕೆ ಹೆಚ್ಚಾಗುತ್ತಿತ್ತು. ಆದರೆ, ಈಗ ಯಂತ್ರಗಳ ಬಳಕೆ ಮಾಡಿ, ಕಾರ್ಮಿಕರ ಬಳಕೆ ಕಡಿಮೆ ಮಾಡಲಾಗಿದೆ. ಕೇಂದ್ರ ಸರ್ಕಾರ ಬಡವರಿಗೆ, ಶ್ರಮಿಕರಿಗೆ ತೊಂದರೆ ಕೊಡುವ ನಾಲ್ಕು ಕಾನೂನನ್ನು ಸರ್ಕಾರ ತಂದಿದ್ದು, ಇದನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಹೇಳಿದರು. ಬಿಜೆಪಿ ಸರ್ಕಾರ ಬಡವರ ಪರವಾಗಿಲ್ಲ. ಬಡವರಿಗೆ ಪ್ರಗತಿಪರವಾಗಿರುವ ಯಾವುದೇ ಕಾನೂನಿದ್ದರೂ ತೆಗೆದುಹಾಕುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತಂದ ಎಲ್ಲ ಕಾನೂನನ್ನು ಇಲ್ಲಿಯೂ ಜಾರಿಗೆ ತರಲಾಗುತ್ತದೆ. ಕಾರ್ಮಿಕರ ಪರವಾದ ನಿಲುವು ಕೈಗೊಳ್ಳುತ್ತಿಲ್ಲ.

ನಾನು ಕಾರ್ಮಿಕ ಸಚಿವನಾಗಿದ್ದೆ. ಆಗ ಕಾರ್ಮಿಕ ಪರ ಕಾನೂನು ತಂದಿದ್ದೆವು. ರಾಷ್ಟ್ರ ‌ಸ್ವಾಸ್ತ್ಯ ಭೀಮಾಯೋಜನಾ, ಹೆಲ್ತ್ ಕೇರ್ ತಂದಿದ್ದೆ. ಕಾರ್ಮಿಕ ವಿಭಾಗ ಪವರ್ ಫುಲ್ ಸಂಘಟನೆ. ಕೋವಿಡ್​ ನಂತರ ಕಾರ್ಮಿಕರ ಸತ್ಯಾನಾಶವಾಗಿದೆ. ಕೋವಿಡ್​​​ ನಂತರ ಸರ್ಕಾರದಿಂದ ಕಾರ್ಮಿಕ ಸ್ನೇಹಿ ಕಾನೂನು ತರುವ ನಿರೀಕ್ಷೆ ಇತ್ತು. ಆದರೆ ಮಾರಕವಾಗುವ ಕಾನೂನು ತರಲಾಗಿದೆ. ಇದನ್ನು ನಾನು ರಾಜ್ಯಸಭೆಯಲ್ಲಿ ತೀವ್ರವಾಗಿ ಖಂಡಿಸುತ್ತೇನೆ. ದೇಶ ಉದ್ಧಾರ ಮಾಡುವ ಯಾವ ಕೆಲಸವನ್ನೂ ಅವರು ಇದುವರೆಗೂ ಮಾಡಿಯೂ ಇಲ್ಲ, ಮಾಡುವುದೂ ಇಲ್ಲ. ಇವರಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ:ಟ್ವಿಟರ್​ನಲ್ಲಿ ಪೇ ಸಿಎಂ ಬಳಿಕ ’ಕ್ರೈ‘ಪಿಎಂ ಟ್ರೆಂಡಿಂಗ್​: ರಾಜಕೀಯ ಅಖಾಡದಲ್ಲಿ ಜೋರಾದ ಏಟು- ಎದಿರೇಟು

ABOUT THE AUTHOR

...view details