ಕರ್ನಾಟಕ

karnataka

ಅಸಂಘಟಿತ ಕಾರ್ಮಿಕರಿಗೆ ಕೋವಿಡ್ ಪರಿಹಾರ: ಷರತ್ತು ಸಡಿಲಿಕೆ ಬಗ್ಗೆ ಹೈಕೋರ್ಟ್​​​ಗೆ ಮಾಹಿತಿ

By

Published : Jul 14, 2021, 2:59 PM IST

ಫಲಾನುಭವಿ ಗೃಹ ಕೂಲಿ ಕಾರ್ಮಿಕರು ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರದ ಜೊತೆಗೆ ಯಾವುದೇ ಅಧಿಕಾರಿ ಅಥವಾ ತಾವು ಕೆಲಸ ನಿರ್ವಹಿಸುತ್ತಿರುವ ಮಾಲೀಕರಿಂದ ಉದ್ಯೋಗ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬಹುದು. ಈ ಮೊದಲು ತಲಾ 150 ರಿಂದ 250 ರೂಪಾಯಿವರೆಗೆ ಸೇವಾ ಸಿಂಧು ಪೋರ್ಟಲ್‌ಗಳಲ್ಲಿ ಶುಲ್ಕ ವಿಧಿಸಲಾಗುತ್ತಿತ್ತು.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಲಾಕ್​​​ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ 11 ವರ್ಗದ ಅಸಂಘಟಿತ ಕಾರ್ಮಿಕರು ತಲಾ 2 ಸಾವಿರ ರೂಪಾಯಿ ಪರಿಹಾರಕ್ಕೆ ಅರ್ಜಿ ಸಲ್ಲಿಸುವ ವೇಳೆ ಅನುಸರಿಸಬೇಕಾದ ಷರತ್ತು ಹಾಗೂ ಮಾರ್ಗಸೂಚಿಗಳನ್ನು ಸರಳೀಕರಿಸಿದ್ದೇವೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​​​ಗೆ ಮಾಹಿತಿ ನೀಡಿದೆ.

ರಾಜ್ಯದ ಮನೆಗೆಲಸದವರಿಗೂ ಕೋವಿಡ್ ಪರಿಹಾರ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರದ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಅರ್ಜಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಮೆಮೊ ಸಲ್ಲಿಸಿ, ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಬರುವ ಕಾರ್ಮಿಕರಿಂದ 25 ರೂಪಾಯಿ ಸೇವಾ ಶುಲ್ಕ ಹೊರತುಪಡಿಸಿ ಇನ್ಯಾವುದೇ ಹಣ ಪಡೆಯದಂತೆ ಎಲ್ಲಾ ಸಿಎಸ್‌ಸಿಗಳಿಗೆ ಇ-ಆಡಳಿತದ ಮುಖ್ಯಸ್ಥರು ಜೂನ್ 30ರಂದು ನಿರ್ದೇಶಿಸಿದ್ದಾರೆ. ಹಾಗೆಯೇ ಅರ್ಜಿ ಸಲ್ಲಿಸುವ ಕಾರ್ಮಿಕರಿಂದ 25 ರೂ. ಶುಲ್ಕ ಬಿಟ್ಟು ಯಾವುದೇ ಹಣ ಪಡೆಯದಂತೆ ಕಾರ್ಮಿಕ ಇಲಾಖೆ ಆಯುಕ್ತರು ಪತ್ರ ಬರೆದಿದ್ದಾರೆ.

ಅಲ್ಲದೆ, ಫಲಾನುಭವಿ ಗೃಹ ಕೂಲಿ ಕಾರ್ಮಿಕರು ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರದ ಜೊತೆಗೆ ಯಾವುದೇ ಅಧಿಕಾರಿ ಅಥವಾ ತಾವು ಕೆಲಸ ನಿರ್ವಹಿಸುತ್ತಿರುವ ಮಾಲೀಕರಿಂದ ಉದ್ಯೋಗ ಪ್ರಮಾಣ ಪತ್ರ ಪಡೆದು ಅರ್ಜಿ ಸಲ್ಲಿಸಬಹುದು. ಮೊಬೈಲ್ ಸಂಖ್ಯೆ ಹೊಂದಿರುವುದನ್ನು ಕಡ್ಡಾಯಗೊಳಿಸದೇ ಐಚ್ಛಿಕಗೊಳಿಸುವ ಮೂಲಕ ಮಾರ್ಗಸೂಚಿ/ಷರತ್ತುಗಳನ್ನು ಸರಳೀಕರಿಸಲಾಗಿತ್ತು. ಇದೀಗ ಈ ವಿನಾಯ್ತಿಯನ್ನು ಇತರೆ 10 ವರ್ಗಗಳ ಅಸಂಘಟಿತ ಕಾರ್ಮಿಕರಿಗೂ ಅನ್ವಯಿಸಲಾಗಿದೆ ಎಂದು ವಿವರಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ

ರಾಜ್ಯ ಸರ್ಕಾರ ಘೋಷಿಸಿರುವ 2 ಸಾವಿರ ಕೋವಿಡ್ ಪರಿಹಾರ ನೆರವು ಹಣಕ್ಕೆ ಅರ್ಜಿ ಸಲ್ಲಿಸಲು ಬರುವ ಕಾರ್ಮಿಕರಿಂದ ತಲಾ 150 ರಿಂದ 250 ರೂಪಾಯಿವರೆಗೆ ಸೇವಾ ಸಿಂಧು ಪೋರ್ಟಲ್‌ಗಳಲ್ಲಿ ಶುಲ್ಕ ವಿಧಿಸುತ್ತಿರುವ ಕುರಿತು ಕಾನೂನು ಸೇವಾ ಪ್ರಾಧಿಕಾರ ಹೈಕೋರ್ಟ್ ಗಮನಕ್ಕೆ ತಂದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಹೈಕೋರ್ಟ್ ಹಣ ಪಡೆಯದಂತೆ ಹಾಗೂ ಅರ್ಜಿ ಸಲ್ಲಿಸಲು ಇರುವ ಕಠಿಣ ಷರತ್ತುಗಳನ್ನು ಸಡಿಲಿಸುವಂತೆ ಹಾಗೂ ಹಣ ಪಡೆಯುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತ್ತು.

ಇದನ್ನೂ ಓದಿ:ಹೊನ್ನಾವರ ಬಂದರು ವಿಸ್ತರಣೆಯಾದರೆ ಆಮೆ ಸಂತತಿಗೆ ಅಪಾಯ: ಪರಿಶೀಲಿಸಲು High Court ನಿರ್ದೇಶನ

ABOUT THE AUTHOR

...view details