ಕರ್ನಾಟಕ

karnataka

ಗ್ರಾಹಕನಂತೆ ಚಿನ್ನದಂಗಡಿಗೆ ಬಂದು ಮೆಲ್ಲನೆ ಸರ ಜೇಬಿಗಿಳಿಸಿ ಕಾಲ್ಕಿತ್ತ ಕಳ್ಳನ ಕೈಚಳಕ

By

Published : Apr 11, 2021, 3:44 PM IST

ಸಿಲಿಕಾನ್ ಸಿಟಿಯ ಜ್ಯುವೆಲ್ಲರಿ ಶಾಪ್​ ಒಂದರಲ್ಲಿ ಕೈಚಳಕ ತೋರಿದ ಖದೀಮ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾನೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Gold Chain theft at Jewelry shop in Bengaluru
ಚಿನ್ನದ ಸರ ಎಗರಿಸಿದ ಖದೀಮ

ಬೆಂಗಳೂರು : ಚಿನ್ನದಂಗಡಿಗೆ ಗ್ರಾಹಕನ ಸೋಗಿನಲ್ಲಿ ಬಂದ ಖತರ್ನಾಕ್​ ಖದೀಮ ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾನೆ. ಈ ಘಟನೆ ಜಯನಗರ 4ನೇ ಬ್ಲಾಕ್​ನ ವರ್ಧಮಾನ್ ಜ್ಯುವೆಲ್ಲರಿ ಶಾಪ್​ನಲ್ಲಿ ನಡೆದಿದೆ.

ಜ್ಯುವೆಲ್ಲರಿ ಶಾಪ್​ಗೆ ಬಂದ ಖದೀಮ ಸರ ತೋರಿಸುವಂತೆ ಮಾಲೀಕನಿಗೆ ಹೇಳಿದ್ದಾನೆ‌‌. ಅಂಗಡಿ ಮಾಲೀಕ 96 ಸಾವಿರ ರೂಪಾಯಿ ಮೌಲ್ಯದ 19 ಗ್ರಾಂ. ತೂಕದ ಸರ ತೋರಿಸಿದ್ದಾರೆ. ಈ ವೇಳೆ ಸರ ಇದ್ದ ಬಾಕ್ಸ್ ಪಡೆದುಕೊಂಡ ಖದೀಮ, ಅದರಲ್ಲಿದ್ದ ಸರವನ್ನು ಮೆಲ್ಲನೆ ಜೀಬಿಗಿಳಿಸಿದ. ಬಳಿಕ ಮಾಲೀಕನ ಗಮನ ಬೇರೆಡೆಗೆ ಸೆಳೆದು ಬಾಕ್ಸ್​ ವಾಪಸ್ ಕೊಟ್ಟಿದ್ದಾನೆ. ಬಳಿಕ ಹಣ ಕಡಿಮೆಯಿದೆ ಎಟಿಎಂಗೆ ಹೋಗಿ ಬರುವುದಾಗಿ ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಕಳ್ಳನ ಕೃತ್ಯದ ಸಿಸಿಟಿವಿ ದೃಶ್ಯ

ಇದನ್ನೂ ಓದಿ: ಗೋಮಾಂಸ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರ ದಾಳಿ: 50 ಕೆ.ಜಿ ಮಾಂಸ ವಶಕ್ಕೆ

ಕೆಲ ಸಮಯದ ಬಳಿಕ ಅನುಮಾನ ಬಂದು ಅಂಗಡಿ ಮಾಲೀಕ ಬಾಕ್ಸ್ ತೆರೆದು ನೋಡಿದಾಗ ಸರ ಇಲ್ಲದಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಖದೀಮನ ಕೈಚಳಕ ಗೊತ್ತಾಗಿದೆ.

ಅಂಗಡಿ ಮಾಲೀಕ ಜಯನಗರ‌ ನಿವಾಸಿ ರೋಹಿತ್ ಜೈನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details