ಕರ್ನಾಟಕ

karnataka

ಸಮಾಜದ ಶಾಂತಿ ಕದಡುವವರ ವಿರುದ್ಧ ಕ್ರಮ: ಗೃಹ ಸಚಿವ ಡಾ.ಜಿ.ಪರಮೇಶ್ವರ್

By

Published : Jun 1, 2023, 2:30 PM IST

ಭಜರಂಗದಳ ನಿಷೇಧ ಮಾಡುವ ವಿಚಾರ ಕುರಿತು ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

Etv Bharat
Etv Bharat

ಬೆಂಗಳೂರು: ಭಜರಂಗದಳ ನಿಷೇಧ ಮಾಡುವ ವಿಚಾರಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿ, ನಮ್ಮ ಪ್ರಣಾಳಿಕೆಯನ್ನು ಸರಿಯಾಗಿ ನೋಡಬೇಕು. ಯಾರು ಸಮಾಜದ ಶಾಂತಿಯನ್ನು ಕದಡುತ್ತಾರೋ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಅಂತಾ ಹೇಳಿದ್ದೇವೆ ಅಷ್ಟೇ ಎಂದರು.

ವಿಧಾನಸೌಧದಲ್ಲಿಂದು ತಮ್ಮ ಕಚೇರಿ ಪೂಜೆ ನೆರವೇರಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವರು ಶಾಂತಿ ಕದಡುವುದಿಲ್ಲವೆಂದ ಮೇಲೆ ಅವರಿಗೆ ಯಾಕೆ ಆ ಕುರಿತು ಯೋಚನೆ. ಕಾನೂನನ್ನು ಉಲ್ಲಂಘಿಸುವುದಿಲ್ಲ ಎಂದ ಮೇಲೆ ಯಾಕೆ ಭಯ?. ಅದು ಅವರಿಗೆ ಅರ್ಥ ಆದರೆ ಸಾಕು. ನಮ್ಮ ಕಚೇರಿಯ ಪೂಜೆ ಮಾಡಿದ್ದೇವೆ. ಅನೇಕ ಜನ ಟೀಕೆ ಟಿಪ್ಪಣಿ ಮಾಡಬಹುದು. ದೇವರ ಹೆಸರಲ್ಲಿ ಪ್ರಮಾಣ ವಚನ ತೆಗೆದುಕೊಳ್ಳುತ್ತೇವೆ. ದೇವರನ್ನು ನೆನೆಸಿಕೊಂಡು ಕಚೇರಿ ಪೂಜೆ ಮಾಡಿದ್ದೇವೆ. ಇದು ನಮ್ಮೆಲ್ಲರಿಗೂ ಶಕ್ತಿ ಕೊಡುವಂಥದ್ದು ಎಂದರು.

ರಾಜ್ಯದ ಕಾನೂನು ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುವ ಗೃಹ ಖಾತೆ ಬಹಳ ಮುಖ್ಯ. ಇಲ್ಲಿ ಏನೇ ವಿದ್ಯಮಾನಗಳು ನಡೆದರೂ ಜನತೆಗೆ ಮುಟ್ಟುತ್ತದೆ. ಇಲ್ಲಿಂದ‌ ಒಳ್ಳೆಯ ಕೆಲಸಗಳಾಗಲಿ ಎಂದ ಅವರು, ಸಚಿವ ಸಂಪುಟ ಸಭೆಯಲ್ಲಿ ಐದು ಗ್ಯಾರಂಟಿ ಯೋಜನೆ ಬಗ್ಗೆ ಮಾಹಿತಿ ನೀಡಿದ್ದೇವೆ. ಈಗ ಏನೇ ಹೇಳಿದರೂ ಅಪ್ರಸ್ತುತವಾಗುತ್ತದೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಕೊಠಡಿ ಪೂಜೆ ನೆರವೇರಿಸಿದ ಕೆ.ಎಚ್.ಮುನಿಯಪ್ಪ : ವಿಧಾನಸೌಧದಲ್ಲಿ ಕೊಠಡಿ ಪೂಜೆ ನೆರವೇರಿಸಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ, ಜನ ಆಶೀರ್ವಾದ ಮಾಡಿದ್ದಾರೆ. 5 ಗ್ಯಾರಂಟಿಗಳ ಜಾರಿ ಖಚಿತ. ಇದರಲ್ಲಿ ಎರಡು ಮಾತಿಲ್ಲ.‌ 10 ಕೆಜಿ ಅಕ್ಕಿ ಕೊಡುವ‌ ಯೋಜನೆ ಬಗ್ಗೆ ನಾಳಿನ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡ್ತೇವೆ.‌ ಸಂಪುಟ ಸಭೆಯಲ್ಲಿ ಪೂರ್ಣ ಮಾಹಿತಿ ಸಿಗಲಿದೆ ಎಂದು ಹೇಳಿದರು. ಸದ್ಯ ನಾಗರಿಕರಿಗೆ 3 ಕೆಜಿ ಅಕ್ಕಿ ನೀಡಲು ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೇಶ ವಿಶಾಲವಾಗಿದೆ. ಅಕ್ಕಿ ಬೆಳೆಯುವ ರಾಜ್ಯಗಳು ಸಾಕಷ್ಟು ಇವೆ. ಕೇಂದ್ರ ಸರ್ಕಾರ ಏನು ಮಾಡುತ್ತೆ ನೋಡೋಣ ಎಂದರು.

ನಾವು ಪ್ರಣಾಳಿಕೆಯಲ್ಲಿ ಬಜರಂಗದಳ ಮತ್ತು ಪಿಎಫ್‌ಐಗೆ ಸಂಬಂಧಿಸಿದಂತೆ ಹೇಳಿದ್ದೆವು. ಒಂದು ವೇಳೆ, ಅವರು ಶಾಂತಿಗೆ ಭಂಗ ತಂದರೆ, ನಾವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಅಗತ್ಯವಿದ್ದರೆ ಅವರನ್ನು ನಿಷೇಧಿಸುವ ಮಟ್ಟಕ್ಕೂ ಹೋಗುತ್ತೇವೆ ಎಂದು ಹೇಳಿದ್ದೆವು. ಅದನ್ನು ಬಿಟ್ಟರೆ ಈ ಬಗ್ಗೆ ಚರ್ಚೆ ನಡೆದಿಲ್ಲ. ಕೆಲವರು ವೈಯಕ್ತಿಕವಾಗಿ ತಮ್ಮ ಅಭಿಪ್ರಾಯ ಹೇಳಿರಬಹುದು ಎಂದು ಜಿ.ಪರಮೇಶ್ವರ್‌ ಇತ್ತೀಚೆಗೆ ಹೇಳಿದ್ದರು.

ಸಮಾಜಕ್ಕೆ ವಿರುದ್ಧವಾದ, ಸಮಾಜದಲ್ಲಿ ಶಾಂತಿ ಕದಡುವ ಎಲ್ಲವೂ ಜನವಿರೋಧಿ ಶಾಸನಗಳು ಅಥವಾ ನಿಯಮಗಳನ್ನು ಪರಿಶೀಲಿಸಲಾಗುವುದು. ಪೂರ್ಣ ಪ್ರಮಾಣದ ಸರ್ಕಾರ ರಚನೆಯಾಗಿಲ್ಲ. ಖಾತೆ ಹಂಚಿಕೆ ಆದ ಮೇಲೆ, ಯಾರು ಸಚಿವರಾಗುತ್ತಾರೋ ಅವರು ನಿಷೇಧ ವಿಷಯಗಳ ಬಗ್ಗೆ ಅಭ್ಯಾಸ ಮಾಡುತ್ತಾರೆ. ನಂತರ ಸಂಪುಟದಲ್ಲಿ ತೀರ್ಮಾನ ಆಗಬೇಕು. ಒಬ್ಬೊಬ್ಬರೇ ಹೇಳಿಕೆ ಕೊಟ್ಟ ತಕ್ಷಣ ತೀರ್ಮಾನ ಆಗುವುದಿಲ್ಲ ಎಂದು ಸಚಿವರು ತಿಳಿಸಿದ್ದರು.

ಇದನ್ನೂ ಓದಿ:ಲೋಕಾಯುಕ್ತ ದಾಳಿ: ಭ್ರಷ್ಟ ಅಧಿಕಾರಿಗಳ ಬಳಿ ದೊರೆತ ಸಂಪತ್ತು ಎಷ್ಟು ಗೊತ್ತೇ?

ABOUT THE AUTHOR

...view details