ಕರ್ನಾಟಕ

karnataka

ಜಿ20 ಸಂಬಂಧ ಸರ್ವಪಕ್ಷಗಳ ಸಭೆ: ಪ್ರಧಾನಿ ಮೋದಿಗೆ ದೇವೇಗೌಡರು ನೀಡಿದ ಸಲಹೆಗಳಿವು..

By

Published : Dec 6, 2022, 3:32 PM IST

ಭಾರತವು ಜಿ20 ಶೃಂಗ ರಾಷ್ಟ್ರಗಳ ಒಕ್ಕೂಟದ ಅಧ್ಯಕ್ಷತೆ ವಹಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯಚಟುವಟಿಕೆಗಳ ಕುರಿತು ಸೋಮವಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ನವ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು. ಈ ಸಭೆಯಲ್ಲಿ ಜೆಡಿಎಸ್‌ ವರಿಷ್ಠ ನಾಯಕ ಹೆಚ್‌.ಡಿ.ದೇವೇಗೌಡರು ಭಾಗಿಯಾಗಿದ್ದರು.

KN_BNG
ದೇವೇಗೌಡರ ಆರೋಗ್ಯ ವಿಚಾರಿಸಿದ ಮೋದಿ

ಬೆಂಗಳೂರು: ಭೌಗೋಳಿಕ ಸಂಘರ್ಷಮಯ ವಾತಾವರಣದ ನಡುವೆಯೂ ಆಹಾರ, ರಸಗೊಬ್ಬರ, ವೈದ್ಯಕೀಯ ಉತ್ಪನ್ನಗಳ ಸರಬರಾಜನ್ನು ರಾಜಕೀಯಮುಕ್ತಗೊಳಿಸಲು ಪ್ರಯತ್ನಿಸಬೇಕೆಂದು ಮಾಜಿ ಪ್ರಧಾನಿ, ಜೆಡಿಎಸ್‍ ವರಿಷ್ಠ ಹೆಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದ್ದಾರೆ. ಭಾರತವು ಜಿ20 ಕೂಟದ ಅಧ್ಯಕ್ಷತೆ ವಹಿಸಿಕೊಂಡ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಸಲು ನಿನ್ನೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕರೆಯಲಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ದೇವೇಗೌಡರು ಪಾಲ್ಗೊಂಡಿದ್ದು, ಕೆಲವು ಸಲಹೆಗಳನ್ನು ನೀಡಿದರು. ಆ ಸಲಹೆಗಳ ಅಂಶಗಳನ್ನು ಅವರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಜಿ20 ಶೃಂಗದ ಅಧ್ಯಕ್ಷತೆಗಾಗಿ ಪ್ರಧಾನಿ ಅವರನ್ನು ಅಭಿನಂದಿಸಿರುವ ಗೌಡರು, ನಮ್ಮ ದೇಶಕ್ಕೆ ಸಿಕ್ಕಿರುವ ಈ ಅವಕಾಶ ಗಮನಾರ್ಹವಾದದ್ದು. ವಿಶ್ವದ ಆರ್ಥಿಕತೆ, ತಾಂತ್ರಿಕತೆ, ತಂತ್ರಜ್ಞಾನ, ವಿಜ್ಞಾನ, ಸಾಮಾಜಿಕ ಮತ್ತು ಪರಿಸರ ವೇದಿಕೆಗಳಲ್ಲಿ ನಮ್ಮ ಕೊಡುಗೆಗಳು ಅಪಾರವಾಗಿವೆ ಎಂದರು.

ಸೌಹಾರ್ದತೆಯ ಕಾರ್ಯಸೂಚಿ ಪ್ರಸ್ತುತಪಡಿಸಿ: ನಮ್ಮದು ಯುವ ಭಾರತ. ಈ ಅಧ್ಯಕ್ಷೀಯ ಅವಧಿಯು ಕ್ರಿಯಾತ್ಮಕ ಮತ್ತು ಶಕ್ತಿಯ ಏಕೀಕೃತ ಅರಿವಿಗೆ ಅವಕಾಶ ಮಾಡಿಕೊಡಲಿದೆ ಎಂಬ ವಿಶ್ವಾಸವಿದೆ. ಜಗತ್ತಿಗೆ ಪ್ರಧಾನಿ ಅವರು ಸೌಹಾರ್ದತೆಯ ಕಾರ್ಯಸೂಚಿಯನ್ನು ಪ್ರಸ್ತುತಪಡಿಸಬೇಕು. ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಜಗತ್ತಿನ ಸಮೀಪಕ್ಕೆ ಕೊಂಡೊಯ್ಯುವ ಮಾತುಗಳನ್ನಾಡಬೇಕು. ಪರಸ್ಪರ ದೇಶಗಳನ್ನು ಮತ್ತಷ್ಟು ಸಹಕಾರ ಮತ್ತು ಹತ್ತಿರವಾಗಿಸುವ ಕ್ರಮಗಳು ಸ್ವಾಗತಾರ್ಹ.

ಆರ್ಥಿಕಾಭಿವೃದ್ಧಿಯ ಜತೆ ವಿಶ್ವಕ್ಕೆ ಪ್ರಸ್ತುತ ಸಾಮಾಜಿಕ, ಆಧ್ಯಾತ್ಮಿಕ ಮತ್ತು ಪರಿಸರ ಶ್ರೇಯೋಭಿವೃದ್ಧಿಯ ಅಗತ್ಯವಿದೆ. ಇತ್ತೀಚಿನ ದಿನಗಳಲ್ಲಿ ಸೇನೆ ಮತ್ತು ಆರ್ಥಿಕ ಶಿಸ್ತಿನ ವೈಭವೀಕರಣಗಳು ಸೃಷ್ಟಿಸಿರುವ ಸಮಸ್ಯೆಗಳಿಗೆ ಸಾಂಸ್ಕೃತಿಕ ಪರಿಸರವು ಪರಿಹಾರ ಒದಗಿಸಬಲ್ಲುದು ಎಂದಿರುವ ಅವರು, ಆಹಾರ, ರಸಗೊಬ್ಬರ, ವೈದ್ಯಕೀಯ ಉತ್ಪನ್ನಗಳ ಸರಬರಾಜನ್ನು ಮಾನವ ನಿರ್ಮಿತ ಸಂಕಷ್ಟಗಳಿಂದ ಧಕ್ಕೆಗೆ ಒಳಗಾಗದಂತೆ ಕಾಪಾಡಲು ದಿಟ್ಟ ಮತ್ತು ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಯುದ್ಧದ ಕಾಲವಲ್ಲ ಎಂಬ ಮೋದಿ ಅಭಿಪ್ರಾಯ ಸತ್ಯ: ರಷ್ಯಾ ಮತ್ತು ಉಕ್ರೇನ್ ಯುದ್ಧ ಸಂದರ್ಭದಲ್ಲಿ ಶಾಂತಿಪಾಲನೆಗಾಗಿ ಪ್ರಧಾನಿಯವರ ಪ್ರಯತ್ನಗಳಿಗೆ ನಾನು ಸಹಮತ ವ್ಯಕ್ತಪಡಿಸುತ್ತೇನೆ. ಇದು ಯುದ್ಧದ ಕಾಲವಲ್ಲ ಎಂಬ ಅಭಿಪ್ರಾಯ ಸತ್ಯವಾದದು. ನಾವು ಸ್ವಾತಂತ್ರ್ಯವನ್ನು ಅಹಿಂಸೆ ಮತ್ತು ಮಹಾತ್ಮ ಗಾಂಧೀಜಿ ಅವರ ಮಾರ್ಗದ ಮೂಲಕ ಪಡೆದಿದ್ದೇವೆ.

ವಿಶ್ವವೇ ಒಂದು ಕುಟುಂಬ ಎಂಬ ಸಿದ್ಧಾಂತದಂತೆ ಹಲವಾರು ಒಳಿತುಗಳನ್ನು ಆರಂಭಿಸಲಿವೆ. ಜಿ20 ಅಧ್ಯಕ್ಷೀಯ ಅವಧಿಯಲ್ಲಿ ಉತ್ತಮ ನಿರ್ಧಾರಗಳು ಹೊರಬೀಳಲಿ. ಜಿ20 ಅಧ್ಯಕ್ಷೀಯತೆಯ ಹಿನ್ನೆಲೆಯಲ್ಲಿ ನಡೆದ ಸರ್ವಪಕ್ಷ ಸಭೆ ಬಳಿಕ ಪ್ರಧಾನಿ ನರೇಂದ್ರ ಮೋದಿ ನನ್ನ ಆರೋಗ್ಯ ವಿಚಾರಿಸಿದರು. ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ದೇವೇಗೌಡರು ಸ್ಮರಿಸಿದ್ದಾರೆ.

ಇದನ್ನೂ ಓದಿ:2023ಕ್ಕೆ ನೂರಕ್ಕೆ ನೂರು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ: ಸಿಎಂ ಬೊಮ್ಮಾಯಿ‌

ABOUT THE AUTHOR

...view details