ಕರ್ನಾಟಕ

karnataka

ಬೇರೆ ಪಕ್ಷದಲ್ಲಿ ಆಂತರಿಕ ಯುದ್ಧ ಆಗುತ್ತಿದ್ದರೆ ಆಂಬ್ಯುಲೆನ್ಸ್, ಸ್ಟ್ರೆಚರ್ ಸ್ಥಳಕ್ಕೆ ಬರಬೇಕಿತ್ತು: ಡಿ ವಿ ಸದಾನಂದ ಗೌಡ

By

Published : Jun 27, 2023, 8:01 PM IST

ನಮ್ಮಲ್ಲಿ ಅಂತರ್​ಯುದ್ಧ ಬಹಳ ಕಡಿಮೆಯಾಗುತ್ತಿದೆ ಎಂದು ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಅವರು ತಿಳಿಸಿದ್ದಾರೆ.

ಮಾಜಿ ಸಿಎಂ ಡಿ ವಿ ಸದಾನಂದ ಗೌಡ
ಮಾಜಿ ಸಿಎಂ ಡಿ ವಿ ಸದಾನಂದ ಗೌಡ

ಮಾಜಿ ಸಿಎಂ ಡಿ ವಿ ಸದಾನಂದ ಗೌಡ

ಬೆಂಗಳೂರು : ಬೇರೆ ಪಕ್ಷದಲ್ಲಿ ಆಂತರಿಕ ಯುದ್ಧ ಆಗುತ್ತಿದ್ದರೆ ಆಂಬ್ಯುಲೆನ್ಸ್, ಸ್ಟ್ರೆಚರ್ ಸ್ಥಳಕ್ಕೆ ಬರಬೇಕಿತ್ತು ಎಂದು ಮಾಜಿ ಸಿಎಂ ಡಿ ವಿ ಸದಾನಂದ ಗೌಡ ತಿಳಿಸಿದರು.

ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಅಂತರ್ ಯುದ್ಧ ವಿಚಾರವಾಗಿ ಪ್ರತಿಕ್ರಿಯಿಸುತ್ತ, ನಮ್ಮಲ್ಲಿ ಬಹಳ ಕಡಿಮೆ ಆಗುತ್ತಿದೆ. ಬೇರೆ ಪಕ್ಷದಲ್ಲಿ ಆಗಿರುತ್ತಿದ್ದರೆ ಆಂಬ್ಯುಲೆನ್ಸ್, ಸ್ಟ್ರೆಚರ್ ಸ್ಥಳಕ್ಕೆ ಬರಬೇಕಿತ್ತು. ಆದರೆ ಬಿಜೆಪಿಯಲ್ಲಿ ಹಾಗೆ ಆಗಿಲ್ಲ. ಮನಸ್ಸಿನಲ್ಲಿ ಪ್ರತಿಯೊಬ್ಬನಿಗೂ ನೋವಿದೆ. ನಿರೀಕ್ಷೆಗಿಂತ ತದ್ವಿರುದ್ಧ ಫಲಿತಾಂಶ ಬಂದಿರುವಾಗ ಕೆಲವರಿಗೆ ಆಕ್ರೋಶ ಬರುತ್ತೆ. ಕೆಲವರಿಗೆ ಭಾವನಾತ್ಮಕವಾಗಿದೆ. ಭಾವನೆಗಳು ಈ ರೀತಿ ಹೊರಬರುವುದು ಸ್ವಾಭಾವಿಕ. ಇದೇನು ದೊಡ್ಡ ಸಂಗತಿ ಅಂತಾ ನಾನು ತಿಳಿದುಕೊಳ್ಳುತ್ತಿಲ್ಲ. ನಮ್ಮ ಪಕ್ಷದೊಳಗೆ ಅಲ್ಲಿ ಇಲ್ಲಿ ಸಣ್ಣಪುಟ್ಟ ವಿಚಾರಗಳು ಇನ್ನಷ್ಟು ಕಾನ್ಫಿಡೆನ್ಸ್ ಆಗಿ ನಡೆಯಬೇಕಿತ್ತು ಎಂದರು.

ರಾಜಕೀಯವಾಗಿ ಕೌಂಟರ್ ಮಾಡುವುದು ನಮಗೆ ಆಗಲಿಲ್ಲ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಕ್ಷೇತ್ರದಲ್ಲಿ ಜೆಡಿಎಸ್, ಕಾಂಗ್ರೆಸ್ ಹೊಂದಾಣಿಕೆ ರಾಜಕೀಯ ಆಗಿದೆ. ಹೊಂದಾಣಿಕೆ ಅಂದರೆ ಬಿಜೆಪಿಯಲ್ಲಿ ಆಗಿದೆ ಅಂತಾ ಅಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿ ವಿರುದ್ಧ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂತಾ ಅರ್ಥ. ಬಿಜೆಪಿಗಿಂತ ಜಾಸ್ತಿ ರಾಜಕೀಯ ಸ್ಟ್ರಾಟಜಿ ಮಾಡುವುದರಲ್ಲಿ ನಮ್ಮ ವಿರೋಧಿಗಳು ಯಶಸ್ವಿಯಾಗಿದ್ದಾರೆ ಅಂತಾ ನಾನು ರಾಜ್ಯದ ನಾಯಕನಾಗಿ ಒಪ್ಪಿಕೊಳ್ಳುತ್ತೇನೆ. ರಾಜಕೀಯವಾಗಿ ಕೌಂಟರ್ ಮಾಡುವುದು ನಮಗೆ ಆಗಲಿಲ್ಲ ಎಂದರು.

ಹೊಂದಾಣಿಕೆ ರಾಜಕಾರಣಕ್ಕೆ ಎರಡು ಮೂರು ಕಾರಣಗಳಿವೆ. ಹಾಸನದಲ್ಲಿ, ಸಿ ಟಿ ರವಿ ಕ್ಷೇತ್ರದಲ್ಲಿ ನಾವು ಹೊಂದಾಣಿಕೆ ರಾಜಕಾರಣ ನೋಡಬಹುದು. ಸಿ ಟಿ ರವಿ ಕ್ಷೇತ್ರದಲ್ಲಿ ಜೆಡಿಎಸ್ ನವರಿಗೆ ಹಾಲಿನ ಅಭಿಷೇಕ ಮಾಡಿದರು. ನಮ್ಮ ಪಕ್ಷದಲ್ಲಿ ಕೂಡಾ ಅಲ್ಲಿ ಇಲ್ಲಿ ಆಗಿರಲಿಕ್ಕಿಲ್ಲ ಎಂದು ನಾನು ಹೇಳಲ್ಲ. ನಮ್ಮಲ್ಲಿ ಅಂತಹದ್ದಕ್ಕೆ ಸ್ಕೋಪ್ ಗಳಿಲ್ಲ. ಎಲ್ಲೋ ವೈಯಕ್ತಿಕ ಕಾರಣಗಳಿಗೆ ಮಾಡಿದ್ದರೆ ಅದು ದೊಡ್ಡ ಸಂಗತಿ ಅಲ್ಲ, ಇದು ಆಗಬಾರದಿತ್ತು. ಜಿಲ್ಲಾ ವರದಿ ಬಂದ ಬಳಿಕ ನಿಜವಾಗಿ ತಪ್ಪಿತಸ್ಥರು ಇದ್ದರೆ ಟ್ರೀಟ್​ಮೆಂಟ್ ಕೊಡಲು ಪಕ್ಷ ಹಿಂದೆ ಮುಂದೆ ನೋಡಲ್ಲ. ಹೊಂದಾಣಿಕೆ ಆಗಿದೆ ಅಂತಾ ನನಗೆ ಅನ್ನಿಸುತ್ತಿಲ್ಲ. ಕೆಲವರ ಮನಸ್ಸಿನಲ್ಲಿ ಭಾವನೆಗಳಿರಬಹುದು. ಹೊಂದಾಣಿಕೆ ಆಗಿದೆ ಅಂತಾ ನಾನು ಹೇಳುವಂತಹದ್ದಲ್ಲ ಎಂದು ತಿಳಿಸಿದರು.

ಅವರಿಂದಾಗಿಯೇ ಸೋಲು ಎಂಬುದನ್ನು ನಾನು ಒಪ್ಪಲ್ಲ: ಕೆ ಎಸ್ ಈಶ್ವರಪ್ಪ ಭಾರಿ ಹಿರಿಯರು. ಅವರ ಬಗ್ಗೆ ನಾನು ಹೆಚ್ಚು ಮಾತಾಡಲು ಇಷ್ಟಪಡಲ್ಲ. ವಲಸಿಗರಿಂದ ಶಿಸ್ತು ಕಡಿಮೆಯಾಯ್ತು ಎಂಬ ಅವರ ಮಾತನ್ನು ನಾನು ಪೂರ್ಣವಾಗಿ ಒಪ್ಪಲ್ಲ. ಮನೆಗೆ ಸೊಸೆಯನ್ನು ಕರೆಸಿಕೊಂಡು ಬಂದ ಮೇಲೆ ಮನೆಯವರು ಅಂತಾ ಸ್ವೀಕರಿಸಬೇಕು. ಸೋತ ತಕ್ಷಣ ಅವರ ಮೇಲೆ ಆರೋಪ ಹಾಕುವುದು ನನಗೆ ಸರಿಯೆನ್ನಿಸುತ್ತಿಲ್ಲ. ನನ್ನ ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಬಂದ ಮೂರು ಜನ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಬೇರೆ ಪಕ್ಷದಿಂದ ಬಂದವರಿಂದ ಹಿನ್ನೆಡೆಯಾಯ್ತು ಎಂಬುದನ್ನು ಒಂದೆರಡು ಇದ್ದರೆ ಆಂತರಿಕವಾಗಿ ಚರ್ಚೆ ಮಾಡಬೇಕು. ಅವರಿಂದಾಗಿಯೇ ಸೋಲು ಎಂಬುದನ್ನು ನಾನು ಒಪ್ಪಲ್ಲ. ಬಂದವರೂ ಸೋತಿದ್ದಾರಲ್ಲಾ?.‌ಅವರನ್ನು ಅವರೇ ಸೋಲಿಸಿಕೊಳ್ಳುತ್ತಾರಾ? ಎಂದು ಪ್ರಶ್ನಿಸಿದರು.

ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ, ಹೊಂದಾಣಿಕೆ ಎಲ್ಲವನ್ನೂ ಕೇಂದ್ರ ಬಿಜೆಪಿ ಮಾಡುತ್ತದೆ. ಕರ್ನಾಟಕಕ್ಕೆ ಪ್ರತ್ಯೇಕ ಹೊಂದಾಣಿಕೆ ಸೂತ್ರ ಮಾಡಲಾಗಲ್ಲ. ಇಷ್ಟರವರೆಗೆ ಯಾವುದೇ ಹೊಂದಾಣಿಕೆ ಮಾತುಗಳು ಆಗಿದ್ದು ನನ್ನ ಗಮನಕ್ಕೆ ಬಂದಿಲ್ಲ ಎಂದರು.

ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಚಂಡೆ ಪೆಟ್ಟಿಗೆ ಹಾರಲು ಕುಣಿಯಲು ಬರದವರು ರಂಗಸ್ಥಳವೇ ಸರಿಯಿಲ್ಲ ಎನ್ನುವ ಸ್ಥಿತಿ ಕಾಂಗ್ರೆಸ್ ನವರದ್ದು. ಭರವಸೆ ಕೊಟ್ಟಿದ್ದನ್ನು ಮಾಡಲಾಗದೇ ಏನು ಮಾಡೋದು ಅಂತಾ ಅವರಿಗೆ ಗೊತ್ತಾಗುತ್ತಿಲ್ಲ. 13 ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರಿಗೆ ಈ ರೀತಿ ಮುಂದಾಲೋಚನೆ ಇಲ್ಲ ಅಂತಾದರೆ ಅವರಿಗೆ ಏನಾಗಿದೆ ಗೊತ್ತಿಲ್ಲ ಎಂದು ತಿಳಿಸಿದರು.

ತನಿಖೆ ಮಾಡಲು ಪೂರ್ತಿ ಹಕ್ಕಿದೆ: ಕಾಂಗ್ರೆಸ್ ಸರ್ಕಾರದಿಂದ ಬಿಜೆಪಿ ಸರ್ಕಾರ ಅವಧಿಯ ಅಕ್ರಮಗಳ ಕುರಿತ ತನಿಖೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರಿಗೆ ಒಳ್ಳೆಯ ಆಡಳಿತ ಕೊಡುತ್ತೇವೆ ಎಂಬ ಧೈರ್ಯವೇ ಇಲ್ಲ. ಅದಕ್ಕಾಗಿ ಹಳೆಯದ್ದನ್ನು ಕೆಣಕುವ ಕೆಲಸ ಮಾಡುತ್ತಿದ್ದಾರೆ. ಅವರು ತನಿಖೆ ಮಾಡಲು ಪೂರ್ತಿ ಹಕ್ಕಿದೆ, ಮಾಡಲಿ ಎಂದರು.

ಬಿಜೆಪಿ ಸಭೆಗಳಲ್ಲಿ ನಾಯಕರ, ಕಾರ್ಯಕರ್ತರ ಆಕ್ರೋಶ ವ್ಯಕ್ತವಾಗುತ್ತಿರುವ ವಿಚಾರವಾಗಿ ಮಾತನಾಡುತ್ತಾ, ನಡೆಯುತ್ತಿರುವ ವಿದ್ಯಮಾನ ಮನಸ್ಸಿಗೆ ನೋವುಂಟು ಮಾಡಿದೆ. ಸೋತಾಗ ಆವೇಶಗಳು, ಉದ್ವೇಗಗಳು ಸ್ವಾಭಾವಿಕ. ಬಾಹ್ಯವಾಗಿ ಈ ರೀತಿಯ ಚರ್ಚೆಗಳಿಂದ ಸಂಘಟನೆಯಲ್ಲಿ ವೇಗವಾಗಿ ಮುಂದೆ ಹೋಗಲು ಕಷ್ಟವಾಗಬಹುದು. ಇದೆಲ್ಲವನ್ನೂ ಪಕ್ಷದ ಮಟ್ಟದಲ್ಲಿ ಕುಳಿತು ಪರಿಹಾರ ಮಾಡಲು ಹಿರಿಯರು ಅನ್ನಿಸಿಕೊಂಡವರು ನಾವೆಲ್ಲಾ ತಾಳ್ಮೆಯಿಂದ ಕೇಳಿಸಿಕೊಂಡು ಆತ್ಮಸ್ಥೈರ್ಯ ತುಂಬಬೇಕಿದೆ ಎಂದು ತಿಳಿಸಿದರು.

ಇದೆಲ್ಲಾ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮಾಧ್ಯಮಗಳಿಗೆ ಇನ್ನೂ ಒಂದು ತಿಂಗಳು ನಮ್ಮಿಂದ ಆಹಾರ ಕಡಿಮೆ ಇಲ್ಲ. ಒಂದು ತಿಂಗಳು ಕಳೆದ ಬಳಿಕ ನಾವೆಷ್ಟು ಬಲಿಷ್ಠರಾಗುತ್ತೇವೆ ಎಂದರೆ ಎಲ್ಲಾ ತಪ್ಪು ತಿದ್ದಿಕೊಂಡು ಮುಂದೆ ಹೋಗುತ್ತೇವೆ. ನಮ್ಮಲ್ಲೇ ಒಂದಷ್ಟು ಜನ ವೈಯಕ್ತಿಕ ಕೋಪ ತಾಪಗಳನ್ನು ಇಲ್ಲಿ ಜೋಡಣೆ ಮಾಡುವ ಕೆಲಸ ಮಾಡಿರಬಹುದು ಎಂದು ತಿಳಿಸಿದರು.

ಇದನ್ನೂ ಓದಿ:ಬಿಜೆಪಿ ಆಡಳಿತದ ಎಲ್ಲ ಹಗರಣಗಳನ್ನು ಎಸ್​​ಐಟಿ ತನಿಖೆಗೆ ಒಳಪಡಿಸಲು ಚರ್ಚೆ: ಸಚಿವ ರಾಮಲಿಂಗಾ ರೆಡ್ಡಿ

ABOUT THE AUTHOR

...view details