ಕರ್ನಾಟಕ

karnataka

Basavaraja Bommai: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 22 ಸ್ಥಾನ ಗೆಲ್ಲುವುದು ಕನಸಿನ ಮಾತು: ಬೊಮ್ಮಾಯಿ

By

Published : Aug 7, 2023, 10:53 PM IST

Basavaraja Bommai: ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ದೆಹಲಿಗೆ ಕರೆದಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದೆಹಲಿ/ಬೆಂಗಳೂರು :2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 22 ಸ್ಥಾನ ಗೆಲ್ಲುವುದು ಕನಸಿನ ಮಾತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದೆಹಲಿಯಲ್ಲಿಂದು ಮಾಧ್ಯಮಗಳಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ 1996ರಿಂದ ಲೋಕಸಭೆ ದೊಡ್ಡ ಪ್ರಮಾಣದಲ್ಲಿ ಗೆದ್ದಿಲ್ಲ. 2018ರಲ್ಲಿ ನಾವು ರಾಜ್ಯದಲ್ಲಿ ಅಧಿಕಾರದಲ್ಲಿ ಇರಲಿಲ್ಲ. ಆದರೆ, ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೆವು. ಲೋಕಸಭೆಗೆ ವಿಚಾರಗಳು ಬೇರೆ ಇರುತ್ತವೆ. ನಾವು 25 ಸ್ಥಾನಗಳನ್ನು ಉಳಿಸಿಕೊಳ್ಳಲು ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ನನಗೆ ಹೈಕಮಾಂಡ್ ಬುಲಾವ್ ನೀಡಿಲ್ಲ :ಇದೇ ವೇಳೆ ಹೈಕಮಾಂಡ್ ಬುಲಾವ್ ನೀಡಿಲ್ಲ ಎಂದು ತಿಳಿಸಿದ ಬೊಮ್ಮಾಯಿ,ನಾನು ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ದೆಹಲಿಗೆ ಆಗಮಿಸುವಂತೆ ಸಂಸದರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ್ದೆ. ಪ್ರತಿಪಕ್ಷದ ನಾಯಕನ ಸ್ಥಾನದ ಕುರಿತು ಹೈಕಮಾಂಡ್ ಸೂಕ್ತ ನಿರ್ಣಯವನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಬಿಜೆಪಿ ರಾಷ್ಟ್ರೀಯ ಪಕ್ಷ, ಸೋಲು-ಗೆಲುವು ಸಹಜ. ಇದರಲ್ಲಿ ರಾಜ್ಯ ನಾಯಕರ ಮೇಲೆ ಬೇಸರ ಮಾಡಿಕೊಳ್ಳುವುದು ಏನೂ ಇಲ್ಲ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಪ್ರಯತ್ನ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೂ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಚಲುವರಾಯಸ್ವಾಮಿ ವಿರುದ್ಧ ಭ್ರಷ್ಟಾಚಾರದ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪತ್ರದ ಬಗ್ಗೆ ಮಾಹಿತಿ ಇಲ್ಲ. ರಾಜ್ಯಪಾಲರಿಂದ ಪತ್ರ ಬಂದ ಬಳಿಕ ಕ್ರಮ ವಹಿಸಬೇಕು. ರಾಜಭವನ ಪತ್ರ ಬರೆದಿದೆಯೋ ಇಲ್ಲವೋ ಸ್ಪಷ್ಟಪಡಿಸಬೇಕು. ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ ಎಂದು ಹೇಳಿದರು.

ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಬಸನಗೌಡ ಪಾಟೀಲ್ ಯತ್ನಾಳ್, ಅಶ್ವತ್ಥನಾರಾಯಣ್, ಆರ್​.ಅಶೋಕ್, ಸುನೀಲ್ ಕುಮಾರ್ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಈ ಸಂಬಂಧ ಯತ್ನಾಳ್ ಸೇರಿದಂತೆ ಹಲವರ ಜೊತೆ ಹೈಕಮಾಂಡ್ ನಾಯಕರು ಮಾತುಕತೆಯನ್ನೂ ನಡೆಸಿದ್ದಾರೆ. ರಾಜ್ಯ ನಾಯಕರ ಅಭಿಪ್ರಾಯ ಕೂಡ ಸಂಗ್ರಹಿಸಿದ್ದಾರೆ. ಆದರೂ ಹೆಸರು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬೊಮ್ಮಾಯಿ ಪರ ಯಡಿಯೂರಪ್ಪ ಒಲವಿರುವ ಹಿನ್ನೆಲೆಯಲ್ಲಿ ಕೇಂದ್ರ ಬುಲಾವ್ ನೀಡಿ ದೆಹಲಿಗೆ ಕರೆಸಿಕೊಂಡಿದೆ ಎಂಬ ಮಾಹಿತಿ ಭಾನುವಾರ ಲಭ್ಯವಾಗಿತ್ತು.

ಈಗಾಗಲೇ ಹಾವೇರಿ ಹಾಲಿ ಸಂಸದ ಶಿವಕುಮಾರ್ ಉದಾಸಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಹೀಗಾಗಿ, ಹೊಸ ಅಭ್ಯರ್ಥಿ ಆಯ್ಕೆ ಮಾಡಬೇಕಿದೆ. ಹೊಸಬರ ಪ್ರಯೋಗಕ್ಕಿಂತ ಬೊಮ್ಮಾಯಿ ಅವರನ್ನೇ ಕಣಕ್ಕಿಳಿಸಿದರೆ ಕ್ಷೇತ್ರ ಉಳಿಸಿಕೊಳ್ಳಬಹುದು ಎನ್ನುವುದು ಹೈಕಮಾಂಡ್ ಲೆಕ್ಕಾಚಾರ. ಆದರೆ, ಈ ಬಗ್ಗೆ ಯಾವ ರೀತಿಯ ಚರ್ಚೆ ನಡೆದಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ :Basavaraja Bommai: ಬಸವರಾಜ ಬೊಮ್ಮಾಯಿಗೆ ಹೈಕಮಾಂಡ್ ಬುಲಾವ್: ಇಂದೇ ದೆಹಲಿಗೆ

ABOUT THE AUTHOR

...view details