ಕರ್ನಾಟಕ

karnataka

ಗಣಪತಿ ಹಬ್ಬದ ನಂತರ ನಾಡಿನ ಉದ್ದಗಲ ಪ್ರವಾಸ: ಬಿ.ಎಸ್‌.ಯಡಿಯೂರಪ್ಪ

By ETV Bharat Karnataka Team

Published : Sep 17, 2023, 1:10 PM IST

ಗಣಪತಿ ಹಬ್ಬದ ಬಳಿಕ ರಾಜ್ಯ ಪ್ರವಾಸ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬೆಂಗಳೂರಿನಲ್ಲಿ ಹೇಳಿದರು.

ಬಿಎಸ್​ವೈ ಯಡಿಯೂರಪ್ಪ
ಬಿಎಸ್​ವೈ ಯಡಿಯೂರಪ್ಪ

ಬೆಂಗಳೂರು:"ರಾಜ್ಯ ಸರ್ಕಾರದ ವೈಫಲ್ಯ, ಜನವಿರೋಧಿ ನೀತಿ ಖಂಡಿಸಿ ಜನಜಾಗೃತಿ ಮೂಡಿಸಲು ಗಣಪತಿ ಹಬ್ಬದ ನಂತರ ರಾಜ್ಯ ಪ್ರವಾಸ ಆರಂಭಿಸುತ್ತೇನೆ. ಇಂದು ಕುರುಡುಮಲೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ವಾಪಸ್ ಬರುತ್ತೇನೆ" ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ ಧವಳಗಿರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾಡಿನ ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ. ಇವತ್ತು ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ದರ್ಶನ ಮಾಡಲು ನಾವೆಲ್ಲ ಒಟ್ಟಾಗಿ ಹೋಗುತ್ತಿದ್ದೇವೆ. ಇಂದು ನಮ್ಮೆಲ್ಲರ ಪ್ರೀತಿಯ ನಾಯಕ, ದೇಶದ ನೆಚ್ಚಿನ ಪ್ರಧಾನಿಗಳಾದ ನರೇಂದ್ರ ಮೋದಿಯವರ ಹುಟ್ಟುಹಬ್ಬ. ಮೋದಿಯವರ ಆರೋಗ್ಯ ವೃದ್ಧಿಸಲಿ. ಅವರು ಮತ್ತೆ ಈ ದೇಶದ ಪ್ರಧಾನಿ ಆಗಲಿ ಎಂದು ಪ್ರಾರ್ಥಿಸಲು ಹೋಗುತ್ತಿದ್ದೇನೆ" ಎಂದರು‌.

"ರಾಜ್ಯ ಸರ್ಕಾರ ಬರಗಾಲದ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಪಕ್ಷ ಬಲ ಪಡಿಸುವ ದೃಷ್ಟಿಯಿಂದ, ಸರ್ಕಾರದ ವೈಫಲ್ಯತೆಗಳನ್ನು ಜನತೆಗೆ ತಿಳಿಸುವ ದೃಷ್ಟಿಯಿಂದ ನಾವೆಲ್ಲ ಒಟ್ಟಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇವೆ" ಎಂದು ಹೇಳಿದರು.

"ಕುರುಡುಮಲೆ ಗಣಪನ ದರ್ಶನ ಪಡೆದು, ಅಲ್ಲಿಂದ ನಾಡಿನ ಉದ್ದಗಲಕ್ಕೂ ಪ್ರವಾಸ ಶುರು ಮಾಡುತ್ತೇವೆ. ಇವತ್ತಿಂದ ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ಗಣಪತಿ ಹಬ್ಬದ ನಂತರ ಪ್ರವಾಸ ಮಾಡುವಂತೆ ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ" ಎಂದು ತಿಳಿಸಿದರು.

"ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿದ್ದಾರೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲ. ಕುಡಿಯುವ ನೀರಿಗೆ ಹಾಹಾಕಾರ ಆಗುತ್ತದೆ. ನೀರು ಬಿಡಬೇಡಿ ಅಂತ ನಾವೂ ಕೂಡ ಹೇಳಿದ್ದೇವೆ. ಆದರೂ ಸಹ ತಮಿಳುನಾಡು ರಾಜ್ಯವನ್ನು ತೃಪ್ತಿಪಡಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೀರು ಬಿಟ್ಟಿದ್ದಾರೆ. ಸರ್ಕಾರದ ಈ ನಿಲುವನ್ನು ಖಂಡಿಸುತ್ತೇನೆ. ಈಗಾಗಲೇ ಹತ್ತಾರು ಬಾರಿ ಹೇಳಿದ್ದೇವೆ. ನಮಗೆ ಕುಡಿಯಲು ನೀರಿಲ್ಲ, ಜಲಾಶಯಗಳು ಖಾಲಿಯಾಗಿವೆ. ಇಂತಹ ಪರಿಸ್ಥಿತಿಯಲ್ಲಿ ನೀರು ಬಿಟ್ಟರೆ ಅವರಿಗೆ ಎಷ್ಟರ ಮಟ್ಟಿಗೆ ಶೋಭೆ ತರುತ್ತದೆ ಅಂತ ಅರ್ಥ ಆಗುತ್ತಿಲ್ಲ. ಇದೆಲ್ಲವನ್ನೂ ಪ್ರತಿಭಟಿಸುವುದು ನಮ್ಮ ಕರ್ತವ್ಯ. ಸರ್ಕಾರ ಈಗಲೂ ಎಚ್ಚೆತ್ತಿಲ್ಲ. ಈಗಲೂ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಒಂದು ಹನಿ ನೀರು ಬಿಡದೇ ನಮ್ಮ ರಾಜ್ಯದ ಹಿತವನ್ನು ಸರ್ಕಾರ ಕಾಪಾಡಲಿ" ಎಂದು ಆಗ್ರಹಿಸಿದರು.

ಇದನ್ನೂ ಓದಿ:ಕುರುಡುಮಲೆ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ, ಬಿಎಸ್​ವೈ ಪ್ರಚಾರ ಆರಂಭಿಸಲಿದ್ದಾರೆ: ಸಂಸದ ಎಸ್.ಮುನಿಸ್ವಾಮಿ

ABOUT THE AUTHOR

...view details