ಕರ್ನಾಟಕ

karnataka

ವ್ಯಾಕ್ಸಿನೇಷನ್‌ ಮಾಡಿಸದೇ ದತ್ತು ಪಡೆದ ನಾಯಿ ಮರಿ ಸಾವಿಗೆ ಕಾರಣವಾದ ವ್ಯಕ್ತಿ ವಿರುದ್ಧ ಎಫ್ಐಆರ್

By

Published : Apr 26, 2023, 4:43 PM IST

ದತ್ತು ಪಡೆದ ನಾಯಿ ಮರಿಗೆ ವ್ಯಾಕ್ಸಿನೇಷನ್ ಮಾಡಿಸದೆ ಸಾವಿಗೆ ಕಾರಣನಾದ ವ್ಯಕ್ತಿಯ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಯಿ ಮರಿ
ನಾಯಿ ಮರಿ

ಬೆಂಗಳೂರು : ದತ್ತು ಪಡೆದ ನಾಯಿ ಮರಿಗೆ ವ್ಯಾಕ್ಸಿನೇಷನ್‌ ಮಾಡಿಸದೇ ಅದರ ಸಾವಿಗೆ ಕಾರಣವಾದ ವ್ಯಕ್ತಿಯ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವಿ ಸಿಂಗ್ ಎಂಬುವವರ ವಿರುದ್ಧ ಪೂರ್ಣಿಮಾ ಪ್ರಕಾಶ್ ಎಂಬುವವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.

ಪ್ರಾಣಿ ಪ್ರಿಯರಾದ ಪೂರ್ಣಿಮಾ ಪ್ರಕಾಶ್ ಇದೇ ವರ್ಷ ಜನವರಿಯಲ್ಲಿ ತಾವು ರಕ್ಷಿಸಿದ್ದ ನಾಯಿ ಮರಿಯೊಂದನ್ನ ರವಿ ಸಿಂಗ್ ದತ್ತು ಪಡೆದಿದ್ದರು. ಮಾರ್ಚ್ ತಿಂಗಳಿನಲ್ಲಿ‌ ಪೂರ್ಣಿಮಾ ಅವರು ನಾಯಿ ಮರಿಯ ಕುರಿತು ವಿಚಾರಿಸಿದಾಗ ಆರೋಗ್ಯವಾಗಿ, ಫ್ರೆಂಡ್ಲಿಯಾಗಿದೆ, ವ್ಯಾಕ್ಸಿನೇಷನ್‌ ಮಾಡಿಸಿದ್ದೇನೆ ಎಂದು ರವಿ ಸಿಂಗ್ ಹೇಳಿದ್ದಾರೆ. ಇದಾದ ಬಳಿಕ ನಾಯಿ ಮರಿಗೆ ವ್ಯಾಕ್ಸಿನೇಷನ್‌ ಮಾಡಿಸದಿರುವುದನ್ನ ಗಮನಿಸಿದ ಪೂರ್ಣಿಮಾ, ವಿಚಾರಿಸಿದಾಗ, ವ್ಯಾಕ್ಸಿನೇಷನ್‌ ಮಾಡಿಸಿರುವುದಕ್ಕೆ ಯಾವುದೇ ದಾಖಲೆಗಳನ್ನ ರವಿ ಸಿಂಗ್ ನೀಡಿಲ್ಲ. ಅಪರಿಚಿತ ಆಸಾಮಿಗಳು ನಾಯಿ ಮರಿಯನ್ನ ತೆಗೆದುಕೊಂಡು ಹೋಗಿದ್ದಾರೆ ಎಂದು ಉತ್ತರಿಸಿದ್ದಾರೆ‌.

ನಾಯಿ ಮರಿಗೆ ವ್ಯಾಕ್ಸಿನೇಷನ್‌ ಮಾಡಿಸದೇ ಹಿಂಸೆ ಕೊಟ್ಟು, ಅದರ ಸಾವಿಗೆ ಕಾರಣವಾದ ರವಿ ಸಿಂಗ್ ವಿರುದ್ಧ ಪೂರ್ಣಿಮಾ ಪ್ರಕಾಶ್ ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದು, ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 428 ರಡಿ ಪ್ರಕರಣ ದಾಖಲಾಗಿದೆ.

ಮುದ್ದಿನ ನಾಯಿ ಕ್ಯಾಂಡಿ ಸಾವು; ಬಿಕ್ಕಿ ಬಿಕ್ಕಿ ಅಳುತ್ತ ಕುಳಿತ ಕಲಬುರಗಿ ಕುಟುಂಬ : ಸಾಕು ನಾಯಿ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಅದರ ಒಡನಾಟ, ಪ್ರೀತಿ, ಎಲ್ಲರೊಂದಿಗೆ ಬೆರೆಯುವ ಗುಣದಿಂದ ಕುಟುಂಬ ಸದಸ್ಯರಲ್ಲಿ ತಾನು ಕೂಡ ಓರ್ವನಂತೆ ಎಂದು ಬದುಕುತ್ತದೆ. ಮನೆಮಂದಿಗೆಲ್ಲಾ ಆ ಮೂಕ ಪ್ರಾಣಿ ತೋರಿಸುವ ಪ್ರೀತಿ ಅಪಾರ. ಆದರೆ, ಮುದ್ದಿನ ನಾಯಿಯನ್ನ ಕಳೆದುಕೊಂಡರೆ ಆಗುವ ದುಃಖ ಅಷ್ಟಿಷ್ಟಲ್ಲ. ಇಂತಹ ಪ್ರೀತಿಯ ಶ್ವಾನ ಹೃದಯಾಘಾತದಿಂದ ಸಾವಿಗೀಡಾದ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ (ಅಕ್ಟೋಬರ್​ 15-2022)ರಂದು ಕಲಬುರಗಿಯಲ್ಲಿ ನಡೆದಿದೆ.

ನ್ಯೂ ರಾಘವೇಂದ್ರ ಕಾಲೋನಿಯಲ್ಲಿರುವ ಮೋಹನ್ ಕುಲಕರ್ಣಿ ಎಂಬುವರ ಮನೆಯಲ್ಲಿ ಪ್ರೀತಿಯ ಶ್ವಾನ ಕಳೆದುಕೊಂಡ ಶೋಕ ಮಡುಗಟ್ಟಿತ್ತು. ಕುಲಕರ್ಣಿ ಕುಟುಂಬ ಕಳೆದ ಆರು ವರ್ಷದ ಹಿಂದೆ ನಾಯಿಮರಿ ತಂದು ಕ್ಯಾಂಡಿ ಅಂತ ಹೆಸರಿಟ್ಟು ಸಾಕಿದ್ದರು. ಹೆಸರಿಗೆ ತಕ್ಕಂತೆ ಕ್ಯಾಂಡಿ ನೋಡಲು ಮುದ್ದು ಮುದ್ದಾಗಿತ್ತು. ಆರು ವರ್ಷದಿಂದ ಕುಟುಂಬದೊಂದಿಗೆ ಬೆರೆತಿತ್ತು. ಬಂಧು ಬಳಗದವರು ಮನೆಗೆ ಬಂದ್ರೆ‌ ಅವರನ್ನು ಗುರುತಿಸಿ ಪ್ರೀತಿ ತೋರಿಸುತಿತ್ತು. ಮನೆಯವರು ಹೊರಗೆ ಹೊರಟರೆ ಮಕ್ಕಳಂತೆ ಬೆನ್ನು ಹತ್ತುತ್ತಿತ್ತು. ಬೈಕ್ ಮೇಲೆ ಕುಳಿತು ಎಲ್ಲೆಂದರಲ್ಲಿ ಸುತ್ತಾಡುವ ಮೂಲಕ ಕುಟುಂಬದ ಅಚ್ಚುಮೆಚ್ಚಿನ ಸದಸ್ಯನಾಗಿತ್ತು.

ಮನೆಯ ಮಗನಂತೆ ಸಾಕಿದ ಕ್ಯಾಂಡಿ, ಇದೀಗ ಹೃದಯಾಘಾತದಿಂದ ಸಾವನ್ನಪ್ಪಿದೆ. ಕ್ಯಾಂಡಿ ಸಾವಿನಿಂದ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಮೃತ ಶ್ವಾನದ ದೇಹದ ಮುಂದೆ ಕುಳಿತ ಹಿರಿಯರು, ಮಕ್ಕಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕ್ಯಾಂಡಿ ಅಗಲಿಕೆ ವಿಚಾರ ತಿಳಿದು ಬಂಧು ಬಳಗದವರು ಕೂಡಾ ಮನೆಗೆ ಆಗಮಿಸಿದ್ದು, ಭಾವುಕರಾಗಿದ್ದರು.

ಇದನ್ನೂ ಓದಿ:ಮುದ್ದಿನ ನಾಯಿ ಕ್ಯಾಂಡಿ ಸಾವು: ಬಿಕ್ಕಿ ಬಿಕ್ಕಿ ಅಳುತ್ತಾ ಕುಳಿತ ಕಲಬುರಗಿ ಕುಟುಂಬ

ABOUT THE AUTHOR

...view details