ಕರ್ನಾಟಕ

karnataka

ಜ. 26ರಂದು ಸಿಎಂ ಭಾಷಣ ಮುಗಿಯುತ್ತಿದ್ದಂತೆ ಬೆಂಗಳೂರಲ್ಲಿ ರೈತರ ಪರೇಡ್: ಕೋಡಿಹಳ್ಳಿ ಚಂದ್ರಶೇಖರ್

By

Published : Jan 24, 2021, 2:26 PM IST

ಗಣರಾಜ್ಯೋತ್ಸವದಂದು ಮುಖ್ಯಮಂತ್ರಿಗಳ ಕಾರ್ಯಕ್ರಮ ಮುಗಿದ ನಂತರ ಬೆಂಗಳೂರು ಮತ್ತು ನೆಲಮಂಗಲದ ನಡುವೆ ಇರುವ ನೈಸ್ ಜಂಕ್ಷನ್ ನಿಂದ ನಮ್ಮ ಪರೇಡ್ ಪ್ರಾರಂಭವಾಗಲಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಒಂದು ವೇಳೆ ಹೆದ್ದಾರಿಯಲ್ಲಿ ನಮ್ಮನ್ನು ತಡೆಯುವ ಪ್ರಯತ್ನ ನಡೆಸಿದರೆ ಆ ಹೆದ್ದಾರಿಗಳು ಬಂದ್ ಆಗಲಿವೆ ಎಂದು ಸರ್ಕಾರಕ್ಕೆ ಅವರು ಎಚ್ಚರಿಕೆ ರವಾನಿಸಿದ್ದಾರೆ.

farmer parade start after cm speech said kodihalli chandrashekhar
ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಟಿ

ಬೆಂಗಳೂರು: ರೈತವಿರೋಧಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ರೈತರು ನಡೆಸುವ ಪರೇಡ್ ಬೆಂಬಲಿಸಿ ಬೆಂಗಳೂರಿನಲ್ಲಿಯೂ ರೈತರ ಪರೇಡ್ ನಡೆಸುವುದಾಗಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಟಿ
ಪ್ರೆಸ್​ಕ್ಲಬ್​ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನವರಿ 26ರಂದು ಗಣರಾಜ್ಯೋತ್ಸವ ದಿನದ ಧ್ವಜಾರೋಹಣ ನೆರವೇರಿಸಿ ನಾಡಿಗೆ ಸಂದೇಶವನ್ನು ನೀಡುವವರೆಗೆ ನಾವು ಯಾವುದೇ ಪರೇಡ್ ಇತ್ಯಾದಿಗೆ ಮುಂದಾಗಲ್ಲ, ರಸ್ತೆಗಿಳಿಯುವುದಿಲ್ಲ ಎಂದು ತಿಳಿಸಿದ್ರು. ಯಾವುದೇ ಕಚೇರಿಗಳನ್ನು ಅತಿಕ್ರಮಣ ಮಾಡುವುದು, ಮುತ್ತಿಗೆ ಹಾಕುವುದು ಯಾವುದು ನಮ್ಮ ಕಾರ್ಯಕ್ರಮವಲ್ಲ, ಕಲ್ಲು ಎಸೆಯುವ ಬೆಂಕಿ ಹಚ್ಚುವ ಕಾರ್ಯಕ್ರಮ ಇರುವುದಿಲ್ಲ ನಮ್ಮದು ಅಹಿಂಸಾತ್ಮಕವಾದ ಕಾರ್ಯಕ್ರಮವಾಗಿರಲಿದೆ ಎಂದು ಸ್ಪಷ್ಟಪಡಿಸಿದರು.
ಗಣರಾಜ್ಯೋತ್ಸವದಂದು ಮುಖ್ಯಮಂತ್ರಿಗಳ ಕಾರ್ಯಕ್ರಮ ಮುಗಿದ ನಂತರ ಬೆಂಗಳೂರು ಮತ್ತು ನೆಲಮಂಗಲದ ನಡುವೆ ಇರುವ ನೈಸ್ ಜಂಕ್ಷನ್​ನಿಂದ ನಮ್ಮ ಪರೇಡ್ ಪ್ರಾರಂಭವಾಗಲಿದೆ. ಟ್ರ್ಯಾಕ್ಟರ್​ಗಳು, ಟ್ರಕ್​ಗಳು, ಕಾರುಗಳು, ಬಸ್ಸುಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯನ್ನು ನಾವು ಹೊಂದಿದ್ದೇವೆ. ಎಂಟರಿಂದ ಹತ್ತು ಸಾವಿರ ವಾಹನಗಳು ಪರೇಡ್​ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ದೊಡ್ಡ ಪ್ರಮಾಣದಲ್ಲಿ ರೈತರು ಈ ಪರೇಡ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ನೈಸ್ ಜಂಕ್ಷನ್​ನಿಂದ ಹೊರಡುವ ಪರೇಡ್ ಗೊರಗುಂಟೆಪಾಳ್ಯ, ಯಶವಂತಪುರ ಮತ್ತು ಮಲ್ಲೇಶ್ವರಂನ ಸರ್ಕಲ್ ಮಾರಮ್ಮ ವೃತ್ತದಿಂದ ಮಲ್ಲೇಶ್ವರಂ, ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್, ಆನಂದರಾವ್ ಸರ್ಕಲ್ ಮೂಲಕ ಫ್ರೀಡಂ ಪಾರ್ಕ್ ತಲುಪಿ ಅಲ್ಲಿ ಪರೇಡ್ ಮುಕ್ತಾಯಗೊಳ್ಳಲಿದೆ. ರೈತರು, ಕಾರ್ಮಿಕ ಸಂಘಟನೆಗಳು, ದಲಿತ ಸಂಘಟನೆಗಳು, ಮಹಿಳಾ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕೋಡಿಹಳ್ಳಿ ಮಾಹಿತಿ ನೀಡಿದರು.
ಈಗಾಗಲೇ ದೆಹಲಿಯಲ್ಲಿ ರೈತರ ಪರೇಡ್​ಗೆ ಅನುಮತಿ ನೀಡಿದ್ದಾರೆ. ಹಾಗಾಗಿ ಇಲ್ಲಿಯೂ ರೈತರ ಪರೇಡ್​ಗೆ ಸರ್ಕಾರ ಅಡ್ಡಿಪಡಿಸುವುದಿಲ್ಲ ಎನ್ನುವ ನಂಬಿಕೆ ಇದೆ. ಒಂದು ವೇಳೆ ಹೆದ್ದಾರಿಯಲ್ಲಿ ನಮ್ಮನ್ನು ತಡೆಯುವ ಪ್ರಯತ್ನ ನಡೆಸಿದರೆ ಆ ಹೆದ್ದಾರಿಗಳು ಬಂದ್ ಆಗಲಿವೆ ಎನ್ನುವುದು ಸರ್ಕಾರಕ್ಕೆ ತಿಳಿದಿರಲಿ ಎನ್ನುವ ಎಚ್ಚರಿಕೆ ರವಾನಿಸಿದರು. ಕೇಂದ್ರ ಸರ್ಕಾರ ಈವರೆಗೂ 11 ಬಾರಿ ಸಭೆ ನಡೆಸಿದರೂ ಯಶಸ್ವಿಯಾಗಿಲ್ಲ. ವಿಫಲವಾಗಿದೆ. ಮೂರೂ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಲೇಬೇಕು, ಎರಡು ವರ್ಷ ಜಾರಿ ಮಾಡಲ್ಲ ಎಂದರೆ, ನಂತರ ಜಾರಿ ಮಾಡುತ್ತಾರೆ ಎಂದೇ ಅರ್ಥ. ಹಾಗಾಗಿ ಕಾಯ್ದೆ ವಾಪಸ್ ಪಡೆಯುವವರೆಗೂ ಹೋರಾಟ ನಡೆಯಲಿದೆ. ಈಗಲೂ ಸರ್ಕಾರ ನಿರ್ಧಾರ ಬದಲಿಸದೇ ಇದ್ದಲ್ಲಿ ಹೋರಾಟ ಮತ್ತೊಂದು ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಬೆಂಗಳೂರಿಗೆ ಸೀಮಿತ:ಜನವರಿ 26 ರಂದು ರೈತರ ಪರೇಡ್ ಕೇವಲ ಬೆಂಗಳೂರಿಗೆ ಸೀಮಿತವಾಗಿದೆ. ರಾಜ್ಯದ ಇತರ ಕಡೆ ನಡೆಯಲ್ಲ ಆದರೆ ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪ ಬದಲಿಸಿಕೊಂಡ ನಂತರ ಜಿಲ್ಲಾ ಕೇಂದ್ರಗಳಲ್ಲೂ ಹೋರಾಟ ನಡೆಸುವ ಕುರಿತು ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್​ ತಿಳಿಸಿದ್ರು.

ABOUT THE AUTHOR

...view details