ಕರ್ನಾಟಕ

karnataka

ಬಿಜೆಪಿಗೆ ಚುನಾವಣಾ ಆಯೋಗದ ಶಾಕ್: ಸಿಎಂ ಇದ್ದಾಗಲೇ ದಾಳಿ ನಡೆಸಿ ಕೇಸರಿ ತೋರಣ ತೆರವು

By

Published : Apr 3, 2023, 3:19 PM IST

Updated : Apr 3, 2023, 3:48 PM IST

ಬಿಜೆಪಿ ಆರಂಭಿಸಿದ ನೂತನ ಮಾಧ್ಯಮ ಕೇಂದ್ರದ ಮೇಲೆ ಚುನಾವಣಾ ಆಯೋಗದ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಪಕ್ಷದ ಕಚೇರಿ ಹೊರಗಡೆ ಹಾಕಿದ್ದ ಕೇಸರಿ ತೋರಣಗಳನ್ನು ತೆರವುಗೊಳಿಸಿದರು.

election-commission-officials-removed-saffron-swag-at-bjp-office
ನೂತನ ಮಾಧ್ಯಮ ಕೇಂದ್ರ ಆರಂಭಿಸಿದ ಬಿಜೆಪಿಗೆ ಚುನಾವಣಾ ಆಯೋಗದ ಶಾಕ್: ಸಿಎಂ ಇದ್ದಾಗಲೇ ದಾಳಿ ನಡೆಸಿ ಕೇಸರಿ ತೋರಣ ತೆರವು

ಬಿಜೆಪಿಗೆ ಚುನಾವಣಾ ಆಯೋಗದ ಶಾಕ್: ಸಿಎಂ ಇದ್ದಾಗಲೇ ದಾಳಿ ನಡೆಸಿ ಕೇಸರಿ ತೋರಣ ತೆರವು

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮಾಧ್ಯಮ ಕೇಂದ್ರದ ಉದ್ಘಾಟನೆಗೆ ನೀತಿ ಸಂಹಿತೆ ಬಿಸಿ ತಟ್ಟಿದ್ದು, ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದ ಕಾರ್ಯಕ್ರಮದ ನಡುವೆಯೇ ಚುನಾವಣಾಧಿಕಾರಿಗಳು ದಾಳಿ ನಡೆಸಿ ಮಾಧ್ಯಮ ಕೇಂದ್ರದ ಮುಂದೆ ಕಟ್ಟಿದ್ದ ಕೇಸರಿ ತೋರಣಗಳನ್ನು ತೆರವುಗೊಳಿಸಿದ ಘಟನೆ ನಡೆಯಿತು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ದತೆ ನಡೆಸುತ್ತಿರುವ ರಾಜ್ಯ ಬಿಜೆಪಿ ಇಂದು ಮಲ್ಲೇಶ್ವರದ 13ನೇ ಅಡ್ಡರಸ್ತೆಯಲ್ಲಿ ನೂತನ ಮಾಧ್ಯಮ ಕೇಂದ್ರ ಆರಂಭಿಸಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಮಾಧ್ಯಮ ಕೇಂದ್ರ ಉದ್ಘಾಟನೆ ಮಾಡಿದರು. ಬಳಿಕ ಮಾಧ್ಯಮ ಕೇಂದ್ರವನ್ನು ವೀಕ್ಷಣೆ ಮಾಡಿದರು.

ಈ ವೇಳೆ ಏಕಾಏಕಿ 15ಕ್ಕೂ ಹೆಚ್ಚಿನ ಚುನಾವಣಾಧಿಕಾರಿಗಳ ತಂಡ ನೂತನ ಮಾಧ್ಯಮ ಕೇಂದ್ರದ ಮೇಲೆ ದಾಳಿ ನಡೆಸಿತು. ಜೊತೆಗೆ ಕೇಸರಿ ತೋರಣ ಕಟ್ಟಿ ಸಂಭ್ರಮಕ್ಕೆ ಮುಂದಾಗಿದ್ದ ಬಿಜೆಪಿ ಮುಖಂಡರಿಗೆ ಚುನಾವಣಾ ಆಯೋಗ ಶಾಕ್ ನೀಡಿತು. ಮಾಧ್ಯಮ ಕೇಂದ್ರದ ಮುಂದೆ ಕಟ್ಟಲಾಗಿದ್ದ ಕೇಸರಿ ತೋರಣ ತೆರವುಗೊಳಿಸಿದ ಚುನಾವಣಾ ಅಧಿಕಾರಿಗಳು ಈ ಸಂಬಂಧ ಮಾಹಿತಿ ದಾಖಲಿಸಿಕೊಂಡರು. ಕೇಸರಿ ತೋರಣ ಕಟ್ಟುವುದು ನೀತಿ ಸಂಹಿತೆ ಉಲ್ಲಂಘನೆ ವ್ಯಾಪ್ತಿಗೆ ಬರಲಿದೆ ಎಂದು ಮಾಹಿತಿ ನೀಡಿದ ಚುನಾವಣಾ ಆಯೋಗದ ಅಧಿಕಾರಿಗಳು ತೋರಣ ತೆರವು ಮಾಡಿದರು.

ನೂತನ ಮಾಧ್ಯಮ ಕಚೇರಿ ಉದ್ಘಾಟಿಸಿ ಮೊದಲ ಸುದ್ದಿಗೋಷ್ಠಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಡುತ್ತಿರುವಾಗಲೇ ದಾಳಿ ನಡೆಸಿದ ಅಧಿಕಾರಿಗಳು ಕಚೇರಿ ಹೊರಗಿನ ಕೇಸರಿ ತೋರಣ ಹಾಗೂ ಫ್ಲೆಕ್ಸ್ ಗಳ ತೆರವು ಮಾಡಿದ್ದು ವಿಶೇಷವಾಗಿತ್ತು.

ಮೇ 10 ರಂದು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಈ ಬಾರಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

ಜನರಿಗೆ ವಿತರಿಸಲು ಇಟ್ಟಿದ್ದ ದಿನಸಿ ಕಿಟ್​​ಗಳ ವಶ : ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ಚೆಕ್​ಪೋಸ್ಟ್​ಗಳನ್ನು ಸ್ಥಾಪಿಸಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಸೋಮವಾರ ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಗೋದಾಮಿಗೆ ದಾಳಿ ನಡೆಸಿದ್ದರು. ಈ ವೇಳೆ ಜನರಿಗೆ ವಿತರಿಸಲು ಇಟ್ಟಿದ್ದ ಸುಮಾರು 10 ಲಕ್ಷ ರೂ ಮೌಲ್ಯದ ದಿನಸಿ ಕಿಟ್​ಗಳನ್ನು ವಶಕ್ಕೆ ಪಡೆದಿದ್ದರು. ಈ ಕಿಟ್​ಗಳಲ್ಲಿ ಅಕ್ಕಿ, ಬೇಳೆ, ಶ್ಯಾವಿಗೆ, ಸಕ್ಕರೆ ಸೇರಿದಂತೆ ವಿವಿಧ ದಿನಸಿ ವಸ್ತುಗಳನ್ನು ಒಳಗೊಂಡ ಸುಮಾರು 500 ಬ್ಯಾಗ್​ಗಳು ಸಿಕ್ಕಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.

ತುಮಕೂರಿನಲ್ಲಿ ಬಟ್ಟೆ, ಬಲ್ಬ್​ಗಳ ವಶಕ್ಕೆ :ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಬಟ್ಟೆಗಳನ್ನು ಚುನಾವಣಾ ಸಂಚಾರಿ ಜಾಗೃತ ದಳದ ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದರು. ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ರಜತಾದ್ರಿಪುರದ ಟೋಲ್ ಬಳಿ ಓಮಿನಿ ವಾಹನವನ್ನು ತಪಾಸಣೆ ನಡೆಸಿದಾಗ ₹3 ಲಕ್ಷ ರೂಪಾಯಿ ಬೆಲೆ ಬಾಳುವ ವಿವಿಧ ಮಾದರಿಯ ಬಟ್ಟೆಗಳು ಪತ್ತೆಯಾಗಿದ್ದವು. ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಇನ್ನೊಂದೆಡೆ, ಲಕ್ಷಾಂತರ ಮೌಲ್ಯದ ಎಲ್ ಇಡಿ ಬಲ್ಬ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ :ರಾಜ್ಯ ರಾಜಕಾರಣಕ್ಕೆ ಬರಲಿದ್ದಾರಾ ಸಂಸದೆ ಸುಮಲತಾ? ಬಿಜೆಪಿ ಪ್ಲ್ಯಾನ್ ಏನು?

Last Updated : Apr 3, 2023, 3:48 PM IST

ABOUT THE AUTHOR

...view details