ಕರ್ನಾಟಕ

karnataka

ಬಿಜೆಪಿ ಶಾಸಕ ಮಾಡಾಳ್ ವಿರುದ್ಧ ಶಿಸ್ತು ಕ್ರಮ.. ಹೈಕಮಾಂಡ್​ನಿಂದ ಕಾದು ನೋಡುವ ತಂತ್ರ

By

Published : Mar 8, 2023, 9:29 PM IST

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗದಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗಲಿದೆ ಎಂಬ ಆತಂಕ ಬಿಜೆಪಿಯಲ್ಲಿ ಮೂಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಾಸಕ ಮಾಡಾಳ್ ವಿರುಪಾಕ್ಷಪ್ಪ
ಶಾಸಕ ಮಾಡಾಳ್ ವಿರುಪಾಕ್ಷಪ್ಪ

ಬೆಂಗಳೂರು : ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಪಕ್ಷದ ಹೈಕಮಾಂಡ್ ಕಾದು ನೋಡುವ ತಂತ್ರ ಅನುಸರಿಸತೊಡಗಿದೆ.

ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರರಾದ ಕೆಎಎಸ್ ಅಧಿಕಾರಿ ಮಾಡಾಳ್ ಪ್ರಶಾಂತ್ ಅವರನ್ನು ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಪ್ರಕರಣದಲ್ಲಿ ಖೆಡ್ಡಾಗೆ ಕೆಡವಿದ ಘಟನೆ ಕುರಿತು ರಾಜ್ಯ ಬಿಜೆಪಿ ಪಕ್ಷ ಮತ್ತು ಮುಖ್ಯಮಂತ್ರಿಗಳಿಂದ ಹೈಕಮಾಂಡ್ ಮಾಹಿತಿ ಪಡೆದು ಕೊಂಡಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಶಾಸಕರಾಗಿರುವ ವಿರುಪಾಕ್ಷಪ್ಪ ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಹೈಕಮಾಂಡ್​​​ಗೆ ಜಿಜ್ಞಾಸೆ ಮೂಡಿದೆ.

ಪ್ರಧಾನಿ ನರೇಂದ್ರ ಮೋದಿ

ವಿರೋಧ ಪಕ್ಷಗಳು ಲಾಭ ಪಡೆಯುವ ಆತಂಕ ಬಿಜೆಪಿಯಲ್ಲಿ: ರಾಜ್ಯ ಬಿಜೆಪಿ ಘಟಕ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕ ಮಾಡಾಳ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ಹೇಳಲಾಗಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಭ್ರಷ್ಟಾಚಾರ ಪ್ರಕರಣದ ಆರೋಪದಲ್ಲಿ ಸಿಲುಕಿರುವ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಮೇಲೆ ಶಿಸ್ತು ಕ್ರಮ ಜರುಗಿಸದಿದ್ದರೆ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ವಿರೋಧ ಪಕ್ಷಗಳು ವಿಧಾನಸಭೆ ಚುನಾವಣೆಯಲ್ಲಿ ಇದರ ರಾಜಕೀಯ ಲಾಭ ಪಡೆಯಬಹುದು ಎನ್ನುವ ಆತಂಕ ಬಿಜೆಪಿಯಲ್ಲಿ ಮೂಡಿದೆ.

ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ ಎನ್ನುವ ವದಂತಿಗಳು ರಾಜಕೀಯ ವಲಯದಲ್ಲಿ ಈಗಾಗಲೇ ಹರಿದಾಡತೊಡಗಿವೆ. ಆದರೆ ವಾಸ್ತವವಾಗಿ ಶಿಸ್ತು ಕ್ರಮದ ಭಾಗವಾಗಿ ಇದುವರೆಗೆ ಯಾವುದೇ ಕ್ರಮವನ್ನು ಶಾಸಕ ಮಾಡಾಳ್ ವಿರುದ್ಧ ಜರುಗಿಸಲಾಗಿಲ್ಲ. ಮಾಡಾಳ್ ವಿರುಪಾಕ್ಷಪ್ಪನವರನ್ನು ಬಂಧಿಸಬೇಕೆಂದು ಆಗ್ರಹಿಸಿ ಆಡಳಿತ ಪಕ್ಷ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದೆ. ಈ ನಡುವೆ ಕಾಂಗ್ರೆಸ್ ಪಕ್ಷವು ನಾಳೆ 9 ರಂದು ರಾಜ್ಯಾದ್ಯಂತ ಬೆಳಗ್ಗೆ 9 ರಿಂದ 11 ರವರೆಗೆ ಎರಡು ತಾಸುಗಳ ಅವಧಿಗೆ ಕರೆ ನೀಡಿದ್ದ ಕರ್ನಾಟಕ ಬಂದ್ ಅನ್ನು ಕೊನೇ ಕ್ಷಣದಲ್ಲಿ ರದ್ದು ಮಾಡಿರುವುದು ಶಿಸ್ತು ಕ್ರಮ ವಿಳಂಬಕ್ಕೆ ಮತ್ತೊಂದು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪ್ರಧಾನಿ ನರೇಂದ್ರ ಮೋದಿ

ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾದ್ರೆ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಸಾಧ್ಯತೆ: ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಬಗ್ಗೆ ಆರಂಭದಲ್ಲಿಯೇ ಕಠಿಣವಾದ ಉಚ್ಛಾಟನೆಯಂತಹ ಶಿಸ್ತು ಕ್ರಮ ತಗೆದುಕೊಳ್ಳುವುದು ಬಿಜೆಪಿ ಹೈಕಮಾಂಡ್ ಗೂ ಅಂದುಕೊಂಡಷ್ಟು ಸುಲಭವಾಗಿಲ್ಲ. ಚನ್ನಗಿರಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ಮಾಡಾಳ್ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದಾರೆ. ಅಷ್ಟೇ ಅಲ್ಲ ಬಿಜೆಪಿಗೆ ಬೆಂಬಲವಾಗಿ ನಿಂತಿರುವ ಪ್ರಬಲ ಲಿಂಗಾಯತ ಸಮುದಾಯಕ್ಕೆ ಮಾಡಾಳ್ ಸೇರಿದವರಾಗಿದ್ದರಿಂದ ವಿಧಾನಸಭೆ ಚುನಾವಣೆ ಹತ್ತಿರವಿರುವಾಗ ಶಿಸ್ತು ಕ್ರಮಕ್ಕೆ ಮುಂದಾದರೆ, ಚುನಾವಣೆ ವೇಳೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳನ್ನೂ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 25 ರಂದು ದಾವಣಗೆರೆಗೆ ಪಕ್ಷದ ಪರ ಚುನಾವಣೆ ಪ್ರಚಾರಕ್ಕೆ ಆಗಮಿಸಲಿದ್ದು, ಅಷ್ಟರೊಳಗೆ ಮಾಡಾಳ್ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆ ಅಥವಾ ಬೇಡವೇ ಎನ್ನುವ ಬಗ್ಗೆ ಹೈಕಮಾಂಡ್ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ. ಈ ನಡುವೆ ಲೋಕಾಯುಕ್ತ ತನಿಖೆ ಬಗ್ಗೆ ವರದಿ ಮತ್ತು ನ್ಯಾಯಾಲಯಗಳಲ್ಲಿ ನಡೆಯುವ ವಿಚಾರಣೆಯನ್ನು ಹೈಕಮಾಂಡ್ ಗಮನಿಸಿ ಸೂಕ್ತ ನಿರ್ಣಯಕ್ಕೆ ಬರಲಿದೆ ಎಂದು ಹೇಳಲಾಗಿದೆ.

ಶಿಸ್ತು ಕ್ರಮಕ್ಕೆ ಮಾಡಾಳ್ ಸ್ವಾಗತ :ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಉಚ್ಛಾಟನೆಯೂ ಸೇರಿದಂತೆ ಯಾವುದೇ ಶಿಸ್ತು ಕ್ರಮ ತಮ್ಮ ವಿರುದ್ಧ ಜರುಗಿಸಿದರೂ ಅದನ್ನ ಸ್ವಾಗತಿಸುವುದಾಗಿ ಹೇಳಿದ್ದಾರೆ. ಆದರೆ ಈ ವರೆಗೆ ಅಂತಹ ಯಾವುದೇ ಕ್ರಮ ತಗೆದುಕೊಳ್ಳಲಾಗಿಲ್ಲ. ಮತ್ತು ನೋಟಿಸ್ ಸಹ ನೀಡಲಾಗಿಲ್ಲವೆಂದು ಮಾಡಾಳ್ ಸ್ಪಷ್ಟಪಡಿಸಿದ್ದಾರೆ.

ಹೈಕೋರ್ಟ್ ನಲ್ಲಿ ಮಾಡಾಳ್ ವಿರುಪಾಕ್ಷಪ್ಪನವರಿಗೆ ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಹೈಕಮಾಂಡ್ ತಕ್ಷಣದ ತೀರ್ಮಾನದ ಬದಲಿಗೆ ಕಾದು ನೋಡಿ ಸೂಕ್ತವಾದ ನಿರ್ಧಾರಕ್ಕೆ ಬರಲು ಯೋಚಿಸುತ್ತಿದೆ. ಈ ಬೆಳವಣಿಗೆಯಿಂದ ಮಾಡಾಳ್ ವಿರುಪಾಕ್ಷಪ್ಪ ಅವರು ಪಕ್ಷದ ಶಿಸ್ತು ಕ್ರಮ ಮತ್ತು ಲೋಕಾಯುಕ್ತ ಬಂಧನದ ತೂಗು ಕತ್ತಿಯಿಂದ ಸದ್ಯಕ್ಕೆ ಪಾರಾದಂತಾಗಿದೆ.

ಇದನ್ನೂ ಓದಿ :ನಾಳೆ ಲೋಕಾಯುಕ್ತರ ಮುಂದೆ ಮಾಡಾಳ್ ವಿರೂಪಾಕ್ಷಪ್ಪ ಹಾಜರ್​ ಸಾಧ್ಯತೆ.. ಶಾಸಕರ ನಿವಾಸಕ್ಕೆ‌ ಲೋಕಾಯುಕ್ತ ಪೊಲೀಸರ ಭೇಟಿ : ದಾಖಲಾತಿ ಪರಿಶೀಲನೆ

ABOUT THE AUTHOR

...view details