ಕರ್ನಾಟಕ

karnataka

ಕೆಟ್ಟ ಆರ್ಥಿಕ ನೀತಿಯ ನಿರಾಶಾದಾಯಕ ಚುನಾವಣಾ ಬಜೆಟ್: ಸಿದ್ದರಾಮಯ್ಯ

By

Published : Feb 17, 2023, 4:08 PM IST

ಕಳೆದ ಬಾರಿ ಬಜೆಟ್​ನಲ್ಲಿ 600 ಭರವಸೆಗಳನ್ನು ಕೊಟ್ಟಿದ್ದರು. ಶೇ 90 ರಷ್ಟನ್ನು ಈಡೇರಿಸಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು.

ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಇದೊಂದು ಸಾಲದ ಸುಳಿಗೆ ಸಿಲುಕಿರುವ ಬಜೆಟ್. ಕೆಟ್ಟ ಆರ್ಥಿಕ ನೀತಿಯಿಂದ ಕೂಡಿದೆ. ಇವರ ಕೆಟ್ಟ ಆರ್ಥಿಕ ನೀತಿಯಿಂದ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿ ಸಾಲದ‌ ಸುಳಿಗೆ ಸಿಲುಕಿಸಿದ್ದಾರೆ. ಅತ್ಯಂ‌ತ ನಿರಾಶಾದಾಯಕ ಚುನಾವಣಾ ಬಜೆಟ್ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬಜೆಟ್ ಟೀಕಿಸಿದ್ದಾರೆ.

ಬಜೆಟ್ ಕಲಾಪದಲ್ಲಿ ಭಾಗವಹಿಸಿದಂತೆ ಕಿವಿ ಮೇಲೆ ಹೂ ಇಟ್ಟುಕೊಂಡೇ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಬಜೆಟ್ ಮಂಡಿಸಿದ್ದಾರೆ. 2023-24ರ ಮುಂಗಡಪತ್ರ ಮಂಡಿಸಿದ್ದಾರೆ. ಇದು ಬಿಜೆಪಿ ಸರ್ಕಾರದ ಚುನಾವಣಾ ಬಜೆಟ್. ನಾನು ಕೊನೆಯ ಬಜೆಟ್ ಮಂಡಿಸಿದಾಗ 5 ವರ್ಷದಲ್ಲಿ ಏನು ಮಾಡಿದ್ದೆ? ಮುಂದೆನೂ ಮಾಡುತ್ತೇನೆ ಎಂಬುದನ್ನು ಹೇಳಿದ್ದೆ. ಆದರೆ ಇವರು ಹಾಗೆ ಮಾಡಿಲ್ಲ. 200 ಹೊಸ ಕಾರ್ಯಕ್ರಮ ಘೋಷಿಸಿದ್ದಾರೆ. ಬಹಳ ಅಂದರೆ 10 ದಿನಗಳಷ್ಟೇ ಬಾಕಿ ಇರೋದು. ಆಡದೇ ಮಾಡುವವನು ರೂಡಿಯೊಳಗುತ್ತಮನು, ಆಡಿ ಮಾಡುವವನು ಮಧ್ಯಮನು, ತಾನಾಡಿಯೂ ಮಾಡದವನು‌ ಅಧಮನು ಇದು ಸರ್ವಜ್ಞನ ವಚನ. ಈ ಸರ್ಕಾರಕ್ಕೆ ಇದು ಸರಿಯಾಗಿ ಅನ್ವಯವಾಗುತ್ತದೆ ಎಂದು ಟೀಕಿಸಿದರು.

ಇವರ ಸಾಧನೆ ಏನೇನೂ ಇಲ್ಲ. ನಾವು ಎಸ್ಸಿ,ಎಸ್ಟಿಗೆ ಎಸ್ಸಿಪಿ, ಟಿಎಸ್ಪಿ ತಂದಿದ್ದೆವು. 36 ಸಾವಿರ ಕೋಟಿ ಅದಕ್ಕೆ ಮೀಸಲಿಟ್ಟಿದ್ದೆವು. ಇವರ ಬಜೆಟ್ ಗಾತ್ರ 3 ಲಕ್ಷ ಕೋಟಿ ಬಜೆಟ್ ಇದೆ. ಈಗಲೂ 30 ಸಾವಿರ ಕೋಟಿ ಎಸ್ಸಿಪಿ, ಟಿಎಸ್ಪಿ ಯೋಜನೆಗೆ ಕೊಟ್ಟಿಲ್ಲ. ಐವತ್ತು ಸಾವಿರ ಕೋಟಿ ಎಸ್ಸಿಪಿಟಿಎಸ್ಪಿಗೆ ಹಣ ಮೀಸಲಿಡಬೇಕಿತ್ತು. ಎಸ್ಸಿ ಎಸ್ಟಿಗೆ ಮಾಡಿದ ದೊಡ್ಡ ದ್ರೋಹ ಇದು. ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್. ಕಳೆದ ಬಾರಿ ಬಜೆಟ್​ನಲ್ಲಿ ಘೋಷಣೆ 600 ಭರವಸೆ ಕೊಟ್ಟಿದ್ದರು. 90 ರಷ್ಟು ಭರವಸೆ ಈಡೇರಿಸಿಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಸಾಲಗಾರರರಾದ ಜನರು: ಒಟ್ಟು ಸಾಲ 5,64,896 ಕೋಟಿ ಅಂತ ಹೇಳಿದ್ದಾರೆ. ನಾನು ಇದ್ದಾಗ 2,42,000 ಕೋಟಿ ಇತ್ತು. ಸಮ್ಮಿಶ್ರ ಸರ್ಕಾರ 41 ಸಾವಿರ ಕೋಟಿ ಸಾಲ ಮಾಡಿದ್ದರು. ಬಿಜೆಪಿ ಸರ್ಕಾರದಲ್ಲಿ 2,54,000 ‌ಕೋಟಿ‌ ಮಾಡಿದ್ದಾರೆ. ನಾವು ಐದು ವರ್ಷದಲ್ಲಿ ಒಂದು ಲಕ್ಷ ಕೋಟಿ ಸಾಲ ಮಾಡಿದ್ದೆವು. ಅತಿ ಹೆಚ್ಚು ಸಾಲ ಬಿಜೆಪಿ ಸರ್ಕಾರ ‌ಮಾಡಿದೆ. ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ. 34 ಸಾವಿರ ಕೋಟಿ ಸಾಲದ ಬಡ್ಡಿ ಕೊಡಬೇಕು.ಯದ್ವಾ ತದ್ವಾ ಸಾಲ ಮಾಡಿ, ಜನರನ್ನು ಸಾಲಗಾರರನ್ನಾಗಿ ಮಾಡಿದ್ದಾರೆ ಎಂದು ಹೆಚ್ಚು ಸಾಲದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮುಂದಿನ ವರ್ಷ 77 ಸಾವಿರ ಕೋಟಿ ಸಾಲ‌ ಮಾಡುತ್ತೇವೆ ಅಂತ ಹೇಳಿದ್ದಾರೆ. ಸಾಲದ ಪ್ರಮಾಣ ಶೇ. 95 ಜಾಸ್ತಿಯಾಗಿದೆ. ಸಾಲ, ಅಭಿವೃದ್ಧಿ ಬೆಳವಣಿಗೆ ಪ್ರಮಾಣಕ್ಕೆ ಹೊಡೆತ ಕೊಟ್ಟಿದೆ. ಹೀಗಾದರೆ ಅಭಿವೃದ್ಧಿ ಬೆಳವಣಿಗೆ ಇನ್ನೆಲ್ಲಿ ಸಾಧ್ಯವಾಗುತ್ತದೆ. ಮಕ್ಕಳು ಸಾಕೋ ಜವಾಬ್ದಾರಿ ಇಲ್ಲದೆ ಹೋದರೆ ಎಷ್ಟು ಮಕ್ಕಳನ್ನಾದರೂ ಹೆರಬಹುದು ಅನ್ನುವಂತಾಗಿದೆ ಇವರ ಬಜೆಟ್‌. ಅನುಷ್ಠಾನ ಮಾಡುವ ಜವಾಬ್ದಾರಿ ಇಲ್ಲ. ಹಾಗಾಗಿ ಎಷ್ಟು ಭರವಸೆ ಬೇಕಾದರೂ ಕೊಡಬಹುದು. ಚುನಾಯಿತ ಸರ್ಕಾರ ಪಾರದರ್ಶಕವಾಗಿರಬೇಕು. ಜನರಿಗೆ ಉತ್ತರದಾಯಿಕವಾಗಿರಬೇಕು. ಮತದಾರರಿಂದ ಯಾವುದನ್ನೂ ಮುಚ್ಚಿಡಬಾರದು ಎಂದು ಟೀಕಿಸಿದರು.

ವಾಸಿಸುವವನೆ ಮನೆ ಒಡೆಯ : ಮೋದಿ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ‌. ಬಂಜಾರ ಸಮುದಾಯಕ್ಕೆ ಹಕ್ಕು ಪತ್ರ ನೀಡಿದ್ದಾರೆ. ಅದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ‌. ಕಾಗೋಡು ತಿಮ್ಮಪ್ಪ ಕಂದಾಯ ಮಂತ್ರಿಗಳಿದ್ದಾಗ ಗೊಲ್ಲರಹಟ್ಟಿ, ತಾಂಡಗಳನ್ನ ಕಂದಾಯ ಗ್ರಾಮ ಮಾಡಿದ್ದೇವೆ. ನಾವು ವಾಸಿಸುವವನೆ ಮನೆ ಒಡೆಯ ಎಂದು ಮಾಡಿದ್ದೆವು. ನಮ್ಮ ಕೆಲಸವನ್ನು ಇವರು ಹೈಜಾಕ್ ಮಾಡಿದ್ದಾರೆ ಎಂದರು.

ನಾವು ಮಾಡಿರುವ ಸಾಧನೆಯನ್ನು ಅವರು ಮಾಡಿದ್ದು ಎಂದು ಬೆನ್ನು ತಟ್ಟಿಕೊಳ್ಳುವ ಕೆಲಸ ಮಾಡಿದ್ದಾರೆ. ಇದು ಅತ್ಯಂತ ನಿರಾಶಾದಾಯಕ ಬಜೆಟ್, ಚುನಾವಣಾ ಬಜೆಟ್ ಆಗಿದೆ. ಬದ್ದವೆಚ್ಚ ಎಷ್ಟು ಎಂದು ಹೇಳಿಲ್ಲ, ಬದ್ದವೆಚ್ಚ ಕಡಿಮೆ. ಆದರೆ ಅಭಿವೃದ್ಧಿ ಕೆಲಸಗಳಿಗೆ ಹಣ ಸಿಗುತ್ತದೆ. ಬದ್ದವೆಚ್ಚ 92% ಗೆ ಹೋದರೆ ಅಭಿವೃದ್ಧಿಗೆ ಹಣ ಸಿಗಲ್ಲ, ನಮ್ಮ ಕಾಲದಲ್ಲಿ ಶೇ.70-72 ಇತ್ತು. ಬದ್ದವೆಚ್ಚ ಕಡಿಮೆ ಮಾಡುವ ಪ್ರಯತ್ನ ಮಾಡಿಲ್ಲ, ಜಿಎಸ್ಟಿ ಹೊಸದಾಗಿ ಹಾಕಿದ್ದಕ್ಕೆ ತೆರಿಗೆ ಹೆಚ್ಚು ಬಂದಿದೆ.

0 ಟ್ಯಾಕ್ಸ್ ಇತ್ತು. ಈಗ 5-18 % ರಷ್ಟು ಟ್ಯಾಕ್ಸ್ ಇದೆ. ಮಜ್ಜಿಗೆ, ಮೊಸರು, ಸೇರಿದಂತೆ ಕೆಲ ವಸ್ತುಗಳ‌ ಮೇಲೆ ತೆರಿಗೆ ಹಾಕಿದ್ದಾರೆ‌. ಇದೆಲ್ಲವೂ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ. ಇದೊಂದು ಸಾಲದ ಸುಳಿಗೆ ಸಿಲುಕಿರುವ ಬಜೆಟ್. ಕೆಟ್ಟ ಆರ್ಥಿಕ ನೀತಿಯಿಂದ ಕೂಡಿದೆ. ಅಸಲು ಮತ್ತು ಬಡ್ಡಿ 42 ಸಾವಿರ ಕೋಟಿ. ಈಗ ಬಡ್ಡಿನೇ 34 ಸಾವಿರ ಕೋಟಿ ಆಗಿದೆ. ಆರ್ಥಿಕವಾಗಿ ಸರ್ಕಾರವನ್ನ ದಿವಾಳಿ‌ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ರೈತರಿಗೆ ಹೆಚ್ಚಿನ ಹೊರೆ: ಬಂಡವಾಳ ವೆಚ್ಚ 64 ಸಾವಿರ ಕೋಟಿ ಅಂದಿದ್ದಾರೆ. ಈ ಬಜೆಟ್​ನಿಂದ ಜನರ ಸಮಸ್ಯೆ ಬಗೆಹರಿಯಲ್ಲ. ರೈತರ ಆದಾಯ ದುಪ್ಪಟ್ಟು ಅಂದರು. ಆದರೆ ಕಾರ್ಯಕ್ರಮ ಕೊಟ್ಟಿಲ್ಲ. ರಸಗೊಬ್ಬರ ಸಬ್ಸಿಡಿ 50 ಸಾವಿರ ಕೋಟಿ ಕೇಂದ್ರ ಕಡಿಮೆ ಮಾಡಿದೆ. ಇದು ರೈತರಿಗೆ ಹೆಚ್ಚಿನ ಹೊರೆಯಾಗುತ್ತದೆ. ಕೇಂದ್ರಕ್ಕೆ ನಮ್ಮಿಂದ 4.75 ಲಕ್ಷ ಕೋಟಿ ರೂ. ತೆರಿಗೆ ವಸೂಲಾಗುತ್ತದೆ. ಅದರಲ್ಲಿ ಕೇಂದ್ರದಿಂದ ನಮಗೆ 34,596 ಬರಬಹುದು ಎಂದಿದ್ದಾರೆ.

ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ರಚಿಸಿಲ್ಲ. ಆ ಬಗ್ಗೆ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ. ನಾನು ಸಿಎಂ ಆಗಿದ್ದಾಗ 6ನೇ ವೇತನ ಆಯೋಗ ರಚನೆ ಮಾಡಿದ್ದೆ. ಜೊತೆಗೆ ಅದರ ಅನುಷ್ಠಾನಕ್ಕೆ 10,100 ರೂ. ಮಂಜೂರು ಮಾಡಿದ್ದೆ. ಆದರೆ ಇವರು ಪ್ರಸ್ತಾಪವನ್ನೇ ಮಾಡಿಲ್ಲ. ಅತ್ಯಂ‌ತ ನಿರಾಶಾದಾಯಕವಾದಂತಹ ಚುನಾವಣಾ ಬಜೆಟ್ ಇದು ಎಂದರು.

ಇದನ್ನೂ ಓದಿ :ಬೊಮ್ಮಾಯಿ ಜೋಳಿಗೆಯಲ್ಲಿ ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ ಸಿಕ್ಕಿದ್ದೇನು..?

ABOUT THE AUTHOR

...view details