ಕರ್ನಾಟಕ

karnataka

17 ಶಾಸಕರನ್ನು ಅಕ್ರಮ ದುಡ್ಡಿನಿಂದ ಬಿಜೆಪಿ ಖರೀದಿಸಿರುವುದು ನಿಜವಾಗಿದೆ: ಗುಂಡೂರಾವ್​

By

Published : Sep 12, 2021, 6:05 PM IST

ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷ ಸೇರುವಾಗ ನನಗೆ ಹಣದ ಆಫರ್ ಬಂದಿತ್ತು ಎಂಬ ಶ್ರೀಮಂತ ಪಾಟೀಲ್ ಹೇಳಿಕೆ ಇದೀಗ ಕಿಡಿ ಹೊತ್ತಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ದಿನೇಶ್ ಗುಂಡೂರಾವ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

dinesh-gundurao
ದಿನೇಶ್ ಗುಂಡೂರಾವ್​

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ 17 ಶಾಸಕರನ್ನು ಆಪರೇಷನ್ ಮಾಡಲು ಬಳಸಿದ ಹಣದ ಮೂಲ ಯಾವುದು ಎಂದು ಬಿಜೆಪಿ ಪಕ್ಷವನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಬಿಜೆಪಿ ಸೇರಲು ರಾಷ್ಟ್ರೀಯ ಬಿಜೆಪಿ ನಾಯಕರು ಹಣದ ಆಫರ್ ನೀಡಿದ ಬಗ್ಗೆ ಸ್ವತಃ ಒಪ್ಪಿಕೊಂಡಿದ್ದಾರೆ‌. 17 ಶಾಸಕರನ್ನು ಬಿಜೆಪಿ ಅಕ್ರಮ ದುಡ್ಡಿನಿಂದ ಖರೀದಿಸಿದೆ ಎಂಬುದು ಕೊನೆಗೂ ನಿಜವಾಗಿದೆ. ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರ ಅಕ್ರ‌ಮ ಸಂತಾನ. ಹಾಗಾದರೆ ಶಾಸಕರ ಖರೀದಿಗೆ ಬಳಕೆಯಾದ ಹಣದ ಮೂಲ‌ ಯಾವುದು? ಎಂದು ಪ್ರಶ್ನಿಸಿದ್ದಾರೆ.

ಅಕ್ರಮ ಹಣದ ತನಿಖೆ ನಡೆಸುವಿರಾ..?

ಆಪರೇಷನ್ ಕಮಲ ಎಂಬ ಅನಿಷ್ಟ ಸಂತತಿಯ ಸೃಷ್ಟಿಕರ್ತರಾದ ಬಿಜೆಪಿಯವರು 17 ಶಾಸಕರ ಖರೀದಿಗೆ ಕೋಟಿ ಕೋಟಿ ಸುರಿದಿರುವುದು ಸತ್ಯ. 'ನಾ ಕಾವೂಂಗಾ ನಾ ಕಾನೇ ದೂಂಗಾ' ಎಂದು ಪೋಸ್ ಕೊಡುವ ಮೋದಿಯವರೆ, ಕರ್ನಾಟಕದಲ್ಲಿ 17 ಶಾಸಕರ ಖರೀದಿಗೆ ಸುರಿದ ಅಕ್ರಮ ಹಣ ಯಾರು ತಿಂದು ವಿಸರ್ಜನೆ ಮಾಡಿದ ಹಣ ಎಂದು ಹೇಳುವಿರಾ? ಈ ಅಕ್ರಮ ಹಣ ಮೂಲದ ಬಗ್ಗೆ ತನಿಖೆ ನಡೆಸುವಿರಾ? ಎಂದು ಪ್ರಶ್ನಿಸಿದ್ದಾರೆ.

ಸಂವಿಧಾನಬದ್ಧವಾಗಿ ಚುನಾಯಿತವಾದ ಸರ್ಕಾರವನ್ನು ಸಂವಿಧಾನಬಾಹಿರವಾಗಿ ಕೆಡವುವ ಹೀನ ಸಂಸ್ಕೃತಿ ಬಿಜೆಪಿಯವರದ್ದು. ಪಕ್ಷಾಂತರ ನಿಷೇಧ ಕಾಯ್ದೆಗೆ ಮಸಿ ಬಳಿದ ಬಿಜೆಪಿ ದುಷ್ಟರ ಕೂಟವಿದ್ದಂತೆ. ರಾಜ್ಯದಲ್ಲಿ 17 ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದಿರುವ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಉಳಿಯುವ ಯಾವುದೇ ನೈತಿಕತೆಯಿಲ್ಲ. ಬಿಜೆಪಿಯವರ ಭ್ರಷ್ಟರ ಸರ್ಕಾರವಿದು ಎಂದಿದ್ದಾರೆ.

ಕೇಂದ್ರದ ವಿರುದ್ಧ ವಾಗ್ದಾಳಿ

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಕೇಂದ್ರ ಸರ್ಕಾರ ಅಡುಗೆ ಎಣ್ಣೆಗಳ ಆಮದು ಸುಂಕವನ್ನು ಶೇ.2.11ರಷ್ಟು ಇಳಿಸಿ, ಲೀಟರ್ ಎಣ್ಣೆಗೆ 4 ರೂಪಾಯಿ ಕಡಿಮೆ ಮಾಡಿದೆ. ಜನಸಾಮಾನ್ಯರಿಗೆ ಮೋದಿ ಸರ್ಕಾರ ಹಬ್ಬಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯಿದು. 80 ರೂಪಾಯಿ ಇದ್ದ ಅಡುಗೆ ಎಣ್ಣೆ ದರವನ್ನು 160 ರೂಪಾಯಿಗೆ ಏರಿಸಿದ್ದು ಇದೇ ಕೇಂದ್ರ ಸರ್ಕಾರ. ಈಗ 4 ರೂಪಾಯಿ ಇಳಿಸಿದ್ದೇ ಕೇಂದ್ರದ ಮಹಾನ್ ಸಾಧನೆ ಎಂದಿದ್ದಾರೆ.

ಇದನ್ನೂ ಓದಿ:ಹು-ಧಾ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್-ಉಪಮೇಯರ್: ಶೆಟ್ಟರ್

ABOUT THE AUTHOR

...view details