ಕರ್ನಾಟಕ

karnataka

ಮಂಗಳೂರು ಆಟೋ ರಿಕ್ಷಾ ಸ್ಫೋಟ ಭಯೋತ್ಪಾದಕ ಕೃತ್ಯ: ಡಿಜಿಪಿ ಪ್ರವೀಣ್​ ಸೂದ್

By

Published : Nov 20, 2022, 9:40 AM IST

Updated : Nov 20, 2022, 10:36 AM IST

ಮಂಗಳೂರಿನ ಗರೋಡಿ ಬಳಿ ನಡೆದ ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣದಲ್ಲಿ ರಾಜ್ಯ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಘಟನೆ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ ಎಂದು ಡಿಜಿಪಿ ಪ್ರವೀಣ್​ ಸೂದ್ ತಿಳಿಸಿದ್ದಾರೆ.

dgp-praveen-sood-tweet-on-mangaluru-auto-explode-case
ಮಂಗಳೂರು ಆಟೋ ರಿಕ್ಷಾ ಸ್ಫೋಟ ಭಯೋತ್ಪಾದಕ ಕೃತ್ಯ: ಡಿಜಿಪಿ ಪ್ರವೀಣ್​ ಸೂದ್

ಮಂಗಳೂರು:ನಗರದ ಗರೋಡಿ ಬಳಿ ಶನಿವಾರ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟವು ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿಯೇ ನಡೆದ ಭಯೋತ್ಪಾದಕ ಕೃತ್ಯ ಎಂದು ಡಿಜಿಪಿ ಪ್ರವೀಣ್​ ಸೂದ್​ ಹೇಳಿದ್ದಾರೆ.

ಘಟನೆ ಬಗ್ಗೆ ಟ್ವೀಟ್​ ಮಾಡಿರುವ ಅವರು, 'ಸ್ಫೋಟವು ಆಕಸ್ಮಿಕವಲ್ಲ, ಉದ್ದೇಶಪೂರ್ವಕವಾಗಿ ನಡೆದಿದೆ. ಗಂಭೀರ ಹಾನಿ ಉಂಟು ಮಾಡುವ ಉದ್ದೇಶದಿಂದ ಭಯೋತ್ಪಾದಕ ಕೃತ್ಯ ಎಸಗಲಾಗಿದೆ. ಕರ್ನಾಟಕ ರಾಜ್ಯ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಘಟನೆ ಬಗ್ಗೆ ಆಳವಾದ ತನಿಖೆ ನಡೆಸುತ್ತಿದ್ದಾರೆ' ಎಂದು ಟ್ವೀಟ್​ ಮಾಡಿದ್ದಾರೆ.

ಡಿಜಿಪಿ ಪ್ರವೀಣ್​ ಸೂದ್ ಟ್ವೀಟ್​

ಗರೋಡಿ ಬಳಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಆಟೋದಲ್ಲಿ ಶನಿವಾರ ಸಂಜೆ 5.30ರ ಸುಮಾರಿಗೆ ಸ್ಫೋಟವಾಗಿತ್ತು. ರಿಕ್ಷಾದಲ್ಲಿ ವ್ಯಕ್ತಿಯೊಬ್ಬರು ಕುಕ್ಕರ್​ನೊಂದಿಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಭೇಟಿ ನೀಡಿ ಪರಿಶೀಲಿಸಿದ್ದರು. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಶೋಧ ಕಾರ್ಯ ನಡೆಸಿತ್ತು.

ಆಟೋ ರಿಕ್ಷಾ ಸ್ಫೋಟ ಸಿಸಿಟಿವಿ ವಿಡಿಯೋ

ಸ್ಫೋಟದ ಬಗ್ಗೆ ಪ್ರತಿಕ್ರಿಯಿಸಿದ್ದ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಆಟೋದಲ್ಲಿದ್ದ ಪ್ರಯಾಣಿಕನ ಬ್ಯಾಗ್​​ನಿಂದ ಬೆಂಕಿ ಕಾಣಿಸಿಕೊಂಡಿದೆ‌ ಎಂದು ಆಟೋ ಚಾಲಕ ಹೇಳಿಕೆ ನೀಡಿದ್ದಾರೆ. ಆಟೋ ಚಾಲಕ ಮತ್ತು ಪ್ರಯಾಣಿಕನಿಗೆ ಬೆಂಕಿ ತಗುಲಿ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?:ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, 'ಮಂಗಳೂರು ಆಟೋ ಸ್ಫೋಟದ ಬಗ್ಗೆ ರಾಜ್ಯ ಪೊಲೀಸರು ತೀವ್ರ ತನಿಖೆ ಆರಂಭಿಸಿದ್ದಾರೆ. ಇದು ಭಯೋತ್ಪಾದನೆಗೆ ಸಂಬಂಧಿತ ಘಟನೆಯಾಗಿರಬಹುದು ಎಂಬ ಶಂಕೆ ಇದೆ. ಭಯೋತ್ಪಾದಕ ಸಂಘಟನೆಗಳ ಲಿಂಕ್ ಇರುವ ಸೂಚನೆಗಳು ಕಂಡುಬರುತ್ತಿದೆ. ರಾಜ್ಯ ಪೊಲೀಸರ ಜೊತೆಗೆ ಕೇಂದ್ರದ ತನಿಖಾ ತಂಡಗಳೂ ಕೈಜೋಡಿಸಲಿವೆ' ಎಂದು ಹೇಳಿದ್ದಾರೆ.

ಅಲ್ಲದೆ, ಆಟೋದಲ್ಲಿನ ಸ್ಫೋಟದಿಂದ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಆತ ಮಾತನಾಡುವ ಸ್ಥಿತಿಯಲ್ಲಿಲ್ಲ. ಈ ಹಿಂದೆಯೂ ಕೂಡ ಇಂತಹದೇ ಅನೇಕ ಘಟನೆಗಳು ನಡೆದಿದ್ದು, ಅದರ ಹಿನ್ನೆಲೆಯಲ್ಲೇ ತನಿಖೆ ನಡೆಯಲಿದೆ. ಮುಂದಿನ ಒಂದೆರಡು ದಿನಗಳಲ್ಲಿ ಘಟನೆಯ ಸಂಪೂರ್ಣ ಹಿನ್ನೆಲೆ ತನಿಖೆಯಿಂದ ಹೊರಬೀಳಲಿದೆ ಎಂದಿದ್ದಾರೆ.

ಇದನ್ನೂ ಓದಿ:ಮಂಗಳೂರು: ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

Last Updated : Nov 20, 2022, 10:36 AM IST

ABOUT THE AUTHOR

...view details