ಕರ್ನಾಟಕ

karnataka

ಪಿಎಸ್ಐ ನೇಮಕಾತಿ ಮರು ಪರೀಕ್ಷೆಗೆ ಸಿದ್ಧ- ಕೋರ್ಟ್ ಅನುಮತಿಗೆ ಕಾಯುತ್ತಿದ್ದೇವೆ: ಡಿಜಿಪಿ ಪ್ರವೀಣ್ ಸೂದ್

By

Published : Jan 29, 2023, 8:03 AM IST

ಅಕ್ರಮ ನಡೆದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ 545 ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಹುದ್ದೆಗಳ ಮರು ಪರೀಕ್ಷೆ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಪ್ರತಿಕ್ರಿಯಿಸಿದ್ದಾರೆ.

dgp praveen sood
ಡಿಜಿಪಿ ಪ್ರವೀಣ್ ಸೂದ್

ಬೆಂಗಳೂರು: ಪಿಎಸ್‌ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ನಾವು ಸಿದ್ಧ. ಆದರೆ, ನ್ಯಾಯಾಲಯದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ. ಸಿಎಆರ್-ಡಿಎಆರ್ ಆರ್‌ಎಸ್‌ಐ, ಕೆಎಸ್‌ಆರ್‌ಪಿ ಸ್ಪೆಷಲ್ ಆರ್‌ಎಸ್‌ಐ, ಕೆಎಸ್‌ಐಎಸ್‌ಎಫ್ ಪಿಎಸ್‌ಐ ಹುದ್ದೆಗಳಿಗೆ ಭಾನುವಾರ ಲಿಖಿತ ಪರೀಕ್ಷೆ ನಡೆಸುತ್ತಿರುವ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, '545 ಪಿಎಸ್‌ಐ ಹುದ್ದೆಗಳಿಗೂ ಮರು ಪರೀಕ್ಷೆ ನಡೆಸಲು ನಾವು ಸಿದ್ಧರಿದ್ದೇವೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗುವವರೆಗೂ ಮರು ಪರೀಕ್ಷೆಗೆ ನಿರ್ಬಂಧವಿದೆ. ನಾವು ನ್ಯಾಯಾಲಯದ ತೀರ್ಪಿಗೆ ಬದ್ಧ. 545 ಪಿಎಸ್‌ಐ ಹುದ್ದೆಗಳ ಮರು ಪರೀಕ್ಷೆ ನಡೆಸಿದ ಬಳಿಕ 402 ಪಿಎಸ್‌ಐ ಹುದ್ದೆಗಳಿಗೆ ಪರೀಕ್ಷೆ ನಡೆಸಲಿದ್ದೇವೆ' ಎಂದು ತಿಳಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಹಗರಣವೇನು?: 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದ್ದ ಅವ್ಯವಹಾರ ಕಳೆದ ವರ್ಷದ ಅತಿದೊಡ್ಡ ಚರ್ಚಾ ವಿಷಯವಾಗಿತ್ತು. ರಾಜ್ಯ ಸರ್ಕಾರ, ಪರೀಕ್ಷಾ ಫಲಿತಾಂಶ ರದ್ದುಗೊಳಿಸಿ ಪ್ರಕರಣವನ್ನು ಸಿಐಡಿ ತನಿಖೆ ವಹಿಸಿತ್ತು. ಅಕ್ರಮದಲ್ಲಿ ಭಾಗಿಯಾದ ಆರೋಪದಡಿ ನೇಮಕಾತಿ ವಿಭಾಗದ ಎಡಿಜಿಪಿ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಅಭ್ಯರ್ಥಿಗಳು ಸೇರಿ 50ಕ್ಕೂ ಅಧಿಕ ಆರೋಪಿಗಳನ್ನು ಇದುವರೆಗೂ ಬಂಧಿಸಲಾಗಿದೆ.

ಇದನ್ನೂ ಓದಿ:ಪಿಎಸ್‌ಐ ಅಕ್ರಮದ ಆರೋಪಿಗಳ ವಿಚಾರಣೆ: ಇಡಿಗೆ ನೀಡಿದ್ದ ಅನುಮತಿ ರದ್ದುಪಡಿಸಿದ ಹೈಕೋರ್ಟ್

ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಪೀಠ: ಪೊಲೀಸ್ ಸಬ್‌ ಇನ್ಸ್​ಪೆಕ್ಟರ್ ನೇಮಕಾತಿ ಹಗರಣ ಸಂಬಂಧ ಈವರೆಗೂ ದಾಖಲಾಗಿರುವ ಎಫ್‌ಐಆರ್ ಮತ್ತು ತನಿಖೆಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಬೇರೊಂದು ಪೀಠದ ಮುಂದೆ ಪಟ್ಟಿ ಮಾಡುವಂತೆ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರ ನೇತೃತ್ವದ ಪೀಠ ಹೈಕೋರ್ಟ್‌ನ ರಿಜಿಸ್ಟ್ರಾರ್‌ಗೆ ಕಳೆದ ಮೂರು ದಿನಗಳ ಹಿಂದೆ ಸೂಚನೆ ನೀಡಿದೆ.

ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ.ಅಶೋಕ್ ಎಸ್. ಕಿಣಗಿ ನೇತೃತ್ವದ ಪೀಠ, "ಈ ಪೀಠದ ಮುಂದೆ ವಿಚಾರಣೆ ಬೇಡ. ನಾವಿಬ್ಬರೂ ಇಲ್ಲದಿರುವ ಪೀಠದ ಮುಂದೆ ಅರ್ಜಿ ಪಟ್ಟಿ ಮಾಡಬೇಕು" ಎಂದಷ್ಟೇ ಹೇಳಿ ವಿಚಾರಣೆಯಿಂದ ಹಿಂದೆ ಸರಿದರು.

ಇದನ್ನೂ ಓದಿ:ಪಿಎಸ್‌ಐ ನೇಮಕಾತಿ ಅಕ್ರಮ: ಅಮೃತ್ ಪಾಲ್‌ಗೆ ಜಾಮೀನು ನಿರಾಕರಣೆ

ABOUT THE AUTHOR

...view details