ಕರ್ನಾಟಕ

karnataka

ಕಲ್ಯಾಣ ಕರ್ನಾಟಕ ಉತ್ಸವ: ಕಳೆದ ಮೂರು ವರ್ಷದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಮಾತ್ರ ಆಮೆಗತಿ

By

Published : Sep 17, 2022, 4:05 PM IST

Updated : Sep 17, 2022, 4:12 PM IST

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಕೋಟಿ ಅನುದಾ‌ನ ಹಂಚಿಕೆ ಮಾಡಲಾಗುತ್ತದೆ. ಆದರೆ, ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಮಾತ್ರ ಆಮೆಗತಿಯಲ್ಲೇ ಸಾಗುತ್ತಿದೆ.

development-works-progress-is-slow-in-kalyana-karnataka
ಕಲ್ಯಾಣ ಕರ್ನಾಟಕ ಉತ್ಸವ: ಕಳೆದ ಮೂರು ವರ್ಷದಲ್ಲಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಮಾತ್ರ ಆಮೆಗತಿ

ಬೆಂಗಳೂರು: ಕಲಬುರಗಿಯಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಮಾಡಿದೆ. ಆದರೆ, ಕಲ್ಯಾಣ ಕರ್ನಾಟಕದ ಕಲ್ಯಾಣ ಕಾರ್ಯಕ್ರಮಗಳು ಮಾತ್ರ ಕಳೆದ ಮೂರು ವರ್ಷಗಳಲ್ಲಿ ಕುಂಟುತ್ತಾ ಸಾಗುತ್ತಿದೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಮ್ಮ ಪರಮೋಚ್ಛ ಆದ್ಯತೆ ಎಂಬುದು ಎಲ್ಲ ಪಕ್ಷಗಳು ಮತ್ತು ಸರ್ಕಾರಗಳ ಜಪ. ಈ ಭಾಗದ ಜಿಲ್ಲೆಗಳಲ್ಲಿ ನಂಜುಡಪ್ಪ ವರದಿ ಪ್ರಕಾರ ಇಲಾಖೆಗಳಿಗೆ ಅನುದಾನ‌ ನೀಡಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಬೊಮ್ಮಾಯಿ ಸರ್ಕಾರ 3 ಸಾವಿರ ಕೋಟಿ ರೂ. ನೀಡಲು ನಿರ್ಧರಿಸಿದೆ.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹೆಸರಲ್ಲಿ ಸಾವಿರಾರು ಕೋಟಿ ಅನುದಾ‌ನ ಹಂಚಿಕೆ ಮಾಡಲಾಗುತ್ತದೆ. ಆದರೆ, ಅಭಿವೃದ್ಧಿ ಕಾಮಗಾರಿಗಳ‌ ಪ್ರಗತಿ ಮಾತ್ರ ಆಮೆಗತಿಯಲ್ಲೇ ಸಾಗುತ್ತಿದೆ. ಬಿಜೆಪಿ ಸರ್ಕಾರ ಬಂದ‌ ಬಳಿಕ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕಾಮಗಾರಿಗಳ ಸ್ಥಿತಿಗತಿ ಏನಿದೆ ಎಂಬ ಮಾಹಿತಿ ಇಲ್ಲಿದೆ.

ಕಲ್ಯಾಣಕ್ಕೆ ಹಂಚಿಕೆಯಾದ ಅನುದಾನ:ಬೀದರ್ ಜಿಲ್ಲೆಯಲ್ಲಿ ಬರುವ ಐದು ತಾಲೂಕುಗಳಿಗೆ 2019-20ರಲ್ಲಿ 193.71 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. 2020-21ರಲ್ಲಿ 145.85 ಕೋಟಿ ರೂ. ಹಾಗೂ 2021-22ರಲ್ಲಿ 185.84 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ.

ಕಲಬುರಗಿ ಜಿಲ್ಲೆಯ ಏಳು ತಾಲೂಕುಗಳಿಗೆ 2019-20ರಲ್ಲಿ 363.96 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಅದೇ ರೀತಿ 2020-21ರಲ್ಲಿ 274.22 ಕೋಟಿ ರೂ. ಹಾಗೂ 2021-22ರಲ್ಲಿ 349.23 ಕೋಟಿ ರೂ. ಅನುದಾನ ನೀಡಲಾಗಿದೆ. ಯಾದಗಿರಿ ಜಿಲ್ಲೆಯ ಮೂರು ತಾಲೂಕುಗಳಿಗೆ 2019-20ರಲ್ಲಿ 151.67 ಕೋಟಿ ರೂ. ಅನುದಾನ ಹಂಚಿಕೆ ಮಾಡಿದ್ದರೆ, 2020-21ರಲ್ಲಿ 114.44 ಕೋಟಿ ರೂ. ಮತ್ತು 2021-22ರಲ್ಲಿ 145.72 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ರಾಯಚೂರಿನ ಐದು ತಾಲೂಕುಗಳಿಗೆ 2019-20ರಲ್ಲಿ 232.76 ಕೋಟಿ ರೂ. 2020-21ರಲ್ಲಿ 175.63 ಕೋಟಿ ರೂ. ಹಾಗೂ 2021-22ರಲ್ಲಿ 223.68 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಕೊಪ್ಪಳದ ನಾಲ್ಕು ತಾಲೂಕುಗಳಿಗೆ 2019-20ರಲ್ಲಿ 148 ಕೋಟಿ ರೂ. ಅನುದಾನ ಹಂಚಿಕೆಯಾಗಿದ್ದರೆ, 2020-21ರಲ್ಲಿ 112.17 ಕೋಟಿ ರೂ. ಮತ್ತು 2021-22ರಲ್ಲಿ 142.86 ಕೋಟಿ ರೂ. ಅನುದಾನ ನೀಡಲಾಗಿದೆ.

ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ: ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ಸಿಎಂ ಮಾಲಾರ್ಪಣೆ

ಬಳ್ಳಾರಿಯ ಎಂಟು ತಾಲೂಕುಗಳಿಗೆ 2019-20ರಲ್ಲಿ 214.74 ಕೋಟಿ ರೂ., 2020-21ರಲ್ಲಿ 162 ಕೋಟಿ ರೂ. ಮತ್ತು 2021-22ರಲ್ಲಿ 206.36 ಕೋಟಿ ರೂ. ಅನುದಾನ ಹಂಚಿಕೆ ಮಾಡಿರುವುದಾಗಿ ವಿಧಾನಸಭೆಯ ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿದೆ.

ಅಂದರೆ, 2019-21ರಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಗೆ ಒಟ್ಟಾರೆ 1,500 ಕೋಟಿ ರೂ. ಹಂಚಿಕೆಯಾಗಿದ್ದರೆ, 2020-21ರಲ್ಲಿ 1,131.86 ಕೋಟಿ ರೂ. ಹಾಗೂ 2021-22ರಲ್ಲಿ 1,492.97 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ.

ಕಾಮಗಾರಿ ಪ್ರಗತಿ ಹೇಗಿದೆ?:2019-20ರಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಒಟ್ಟು 4,047 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 3,575 ಕಾಮಗಾರಿಗಳು ಪೂರ್ಣಗೊಂಡಿದ್ದರೆ, 434 ಕಾಮಗಾರಿ ಪ್ರಗತಿಯಲ್ಲಿದೆ. ಸುಮಾರು ಇನ್ನೂ 38 ಕಾಮಗಾರಿಗಳು ಬಾಕಿ ಇವೆ.

2020-21ರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಟ್ಟು 2,260 ಕಾಮಗಾರಿಗಳನ್ನು ಅನುಮೋದನೆ ನೀಡಲಾಗಿತ್ತು. ಆ ಪೈಕಿ ಪೂರ್ಣಗೊಂಡಿರುವ ಕಾಮಗಾರಿಗಳ ಸಂಖ್ಯೆ 1,118 ಹಾಗೂ ಸುಮಾರು 965 ಕಾಮಗಾರಿಗಳು ಪ್ರಗತಿಯಲ್ಲಿವೆ. 177 ಕಾಮಗಾರಿಗಳು ಬಾಕಿ ಉಳಿದುಕೊಂಡಿವೆ.

2021-22ರಲ್ಲಿ ಒಟ್ಟು 2,199 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 473 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನು ಸುಮಾರು 1317 ಕಾಮಗಾರಿಗಳು ಪ್ರಗತಿಯಲ್ಲಿದ್ದು, 409 ಕಾಮಗಾರಿಗಳು ಬಾಕಿ ಉಳಿದಿದೆ. ಒಟ್ಟಾರೆ ಕಳೆದ ಮೂರು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ‌ ಭಾಗದಲ್ಲಿ 8,506 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 5166 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. 2716 ಕಾಮಗಾರಿಗಳು ಇನ್ನೂ ಪ್ರಗತಿಯಲ್ಲಿದ್ದರೆ, 624 ಕಾಮಗಾರಿಗಳು ಬಾಕಿ ಉಳಿದು ಕೊಂಡಿವೆ.

ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ: ಸಿಎಂ ಬೊಮ್ಮಾಯಿ ಅಭಿವೃದ್ಧಿ ಭಾಷಣ

Last Updated : Sep 17, 2022, 4:12 PM IST

ABOUT THE AUTHOR

...view details