ಕರ್ನಾಟಕ

karnataka

ಬಿಎಸ್​ವೈ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ: ಗೇಟ್​ವರೆಗೂ ಬಂದು ಸ್ವಾಗತ ಕೋರಿದ ಯಡಿಯೂರಪ್ಪ

By

Published : Jun 1, 2023, 4:25 PM IST

Updated : Jun 1, 2023, 7:04 PM IST

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಗುರುವಾರ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದರು.

deputy-chief-minister-dk-shivakumar-visits-bs-yeddyurappa-residence
ಬಿಎಸ್​ವೈ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ: ಗೇಟ್​ವರೆಗೂ ಬಂದು ಸ್ವಾಗತ ಕೋರಿದ ಯಡಿಯೂರಪ್ಪ

ಬಿಎಸ್​ವೈ ನಿವಾಸಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ

ಬೆಂಗಳೂರು:ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭೇಟಿ ನೀಡಿ ಕೆಲಕಾಲ ಮಾತುಕತೆ ನಡೆಸಿದರು. ಬಹಳ ವರ್ಷಗಳಿಂದಲೂ ಉಭಯ ನಾಯಕರ ನಡುವೆ ಉತ್ತಮ ಒಡನಾಟವಿದ್ದು, ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಆತ್ಮೀಯತೆ ಹೊಂದಿದ ನಾಯಕರಾದ ಯಡಿಯೂರಪ್ಪ ಭೇಟಿ ಮಾಡಿದ ಶಿವಕುಮಾರ್ ಆಶೀರ್ವಾದ ಪಡೆದುಕೊಂಡರು.

ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸ ಧವಳಗಿರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಿದರು. ನಿವಾಸಕ್ಕೆ ಆಗಮಿಸಿದ ಡಿಸಿಎಂಗೆ ಗೇಟ್ ಬಳಿ ಬಂದು ಹೂಗುಚ್ಛ ನೀಡಿದ ಬಿಎಸ್​ವೈ ಆತ್ಮೀಯವಾಗಿ ಬರಮಾಡಿಕೊಂಡರು. ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಹೂಗುಚ್ಛ ನೀಡಿ ಗೌರವ ಸಲ್ಲಿಕೆ ಮಾಡಿ ನಿವಾಸಕ್ಕೆ ಪ್ರವೇಶಿಸಿದರು.

ಉಭಯ ನಾಯಕರ ನಡುವೆ ಹಲವಾರು ವರ್ಷಗಳಿಂದ ಉತ್ತಮ ಒಡನಾಟವಿದೆ. ಯಡಿಯೂರಪ್ಪ ಮೊದಲ ಬಾರಿಗೆ ಮುಖ್ಯಮಂತ್ರಿ ಆದ ವೇಳೆಯಿಂದ ಇಲ್ಲಿಯವರೆಗೂ ಒಳ್ಳೆಯ ಒಡನಾಟವಿದೆ. ಪರಸ್ಪರ ಟೀಕೆ ಮಾಡಿದರೂ ಅದು ಚೌಕಟ್ಟು ಮೀರಿದ ಉದಾಹರಣೆ ಕಡಿಮೆ, ಪರಸ್ಪರ ವಿರೋಧ ಪಕ್ಷದಲ್ಲಿದ್ದರೂ ವೈಯಕ್ತಿ ಬಾಂಧವ್ಯ ಉತ್ತಮವಾಗಿಯೇ ಬೆಳೆಸಿಕೊಂಡು ರಾಜಕೀಯ ಮೀರಿದ ಒಡನಾಟ ಹೊಂದಿದ್ದಾರೆ. ಅಧಿಕಾರಕ್ಕೆ ಬಂದ ನಂತರ ಮಾಜಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡುವುದು ವಾಡಿಕೆ, ಆದರೆ ಡಿಸಿಎಂ ಆಗಿರುವ ಡಿಕೆ ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿದ್ದಾರೆ.

ಸೌಹಾರ್ದಯುತ ಮಾತುಕತೆ:ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸುಮಾರು 25 ನಿಮಿಷಗಳ ಕಾಲ ಯಡಿಯೂರಪ್ಪ ಜೊತೆ ಸೌಹಾರ್ದಯುತ ಮಾತುಕತೆ ನಡೆಸಿದರು. ಸದ್ಯ ಗ್ಯಾರಂಟಿಗಳ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ತೀವ್ರ ಜಟಾಪಟಿ ನಡೆಯುತ್ತಿದ್ದು, ಅದರ ನಡುವೆಯೇ ಉಭಯ ನಾಯಕರ ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಗ್ಯಾರಂಟಿಗಳ ಜಾರಿಗೆ ಬಿಜೆಪಿ ಒತ್ತಡ ಹೇರುತ್ತಿದ್ದು, ಹೋರಾಟದ ಎಚ್ಚರಿಕೆ ನೀಡಿದೆ. 5 ಗ್ಯಾರಂಟಿಗಳಲ್ಲಿ ಮೂರು ಗ್ಯಾರಂಟಿಗಳನ್ನು ಈಗ ಜಾರಿ ಮಾಡಿ, ಇನ್ನೆರಡಕ್ಕೆ ಸಮಯ ಪಡೆಯುವ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಿದೆ. ಇದಕ್ಕೆ ಸಹಕರಿಸಬೇಕು ಎನ್ನುವ ಕುರಿತು ಯಡಿಯೂರಪ್ಪಗೆ ಡಿ.ಕೆ ಶಿವಕುಮಾರ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ಸರ್ಕಾರದ ಕಾಮಗಾರಿಗಳ ತನಿಖೆಗೆ ಆದೇಶ ನೀಡಿದೆ. ಇದು ದ್ವೇಷದ ರಾಜಕಾರಣ ಎಂದು ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಯಡಿಯೂರಪ್ಪ ಮತ್ತು ಡಿಕೆ ಶಿವಕುಮಾರ್ ಭೇಟಿ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಆದರೆ ಈ ಭೇಟಿ ಕುರಿತು ಪ್ರತಿಕ್ರಿಯೆ ನೀಡಲು ಉಭಯ ನಾಯಕರು ನಿರಾಕರಿಸಿದರು. ಭೇಟಿ ಬಳಿಕ ಡಿಕೆ ಶಿವಕುಮಾರ್ ಅವರನ್ನು ಮನೆಯ ಗೇಟ್​​ವರೆಗೂ ಬಂದು ಯಡಿಯೂರಪ್ಪ ಬೀಳ್ಕೊಟ್ಟರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಲು ನಿರಾಕರಿಸಿದ ಡಿ.ಕೆ ಶಿವಕುಮಾರ್ ಮಾಧ್ಯಮ ಪ್ರತಿನಿಧಿಗಳತ್ತ ಕೈ ಮುಗಿದು ಯಾವುದೇ ಪ್ರತಿಕ್ರಿಯೆ ನೀಡದೇ ನಿರ್ಗಮಿಸಿದರು. ಇತ್ತ ಯಡಿಯೂರಪ್ಪ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ ತಮ್ಮ ನಿವಾಸದೊಳಗೆ ತೆರಳಿದರು.

ಇದನ್ನೂ ಓದಿ :ತಮಿಳುನಾಡಿನವರಿಗೆ ಹೃದಯ ಶ್ರೀಮಂತಿಕೆ ಇರಲಿ: ಡಿಸಿಎಂ ಡಿ.ಕೆ.ಶಿವಕುಮಾರ್​

Last Updated : Jun 1, 2023, 7:04 PM IST

ABOUT THE AUTHOR

...view details