ಕರ್ನಾಟಕ

karnataka

ಪೂರ್ಣಗೊಂಡ ಬಿಬಿಎಂಪಿ ಕಾಮಗಾರಿಗಳ ಶೇ.50 ರಷ್ಟು ಹಣ ಬಿಡುಗಡೆಗೆ ತೀರ್ಮಾನ: ಡಿ.ಕೆ ಶಿವಕುಮಾರ್

By ETV Bharat Karnataka Team

Published : Sep 4, 2023, 10:59 PM IST

ಬಿಬಿಎಂಪಿಯಲ್ಲಿ ಪೂರ್ಣಗೊಂಡಿರುವ ಕೆಲಸಗಳಿಗೆ ಆದ್ಯತೆ ಮೇರೆಗೆ ಶೇ. 50ರಷ್ಟು ಹಣ ಬಿಡುಗಡೆ ಮಾಡಿ, ಬಾಕಿ ಹಣವನ್ನು ಸಮಿತಿಯ ವರದಿ ಬಂದ ನಂತರ ಬಿಡುಗಡೆಗೆ ತೀರ್ಮಾನಿಸಲಾಗುವುದು ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

ಡಿಸಿಎಂ ಡಿ ಕೆ ಶಿವಕುಮಾರ್
ಡಿಸಿಎಂ ಡಿ ಕೆ ಶಿವಕುಮಾರ್

ಡಿಸಿಎಂ ಡಿ. ಕೆ ಶಿವಕುಮಾರ್

ಬೆಂಗಳೂರು :ಪೂರ್ಣಗೊಂಡ ಬಿಬಿಎಂಪಿ ಕಾಮಗಾರಿಗಳ ಶೇ. 50ರಷ್ಟು ಹಣ ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು. ಸಿಎಂ ಗೃಹಕಚೇರಿ ಕೃಷ್ಣಾ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪೂರ್ಣಗೊಂಡಿರುವ ಕೆಲಸಗಳಿಗೆ ಆದ್ಯತೆ ಮೇರೆಗೆ ಶೇ.50ರಷ್ಟು ಹಣ ಬಿಡುಗಡೆ ಮಾಡಿ, ಬಾಕಿ ಹಣ ಸಮಿತಿಯ ವರದಿ ಬಂದ ನಂತರ ಬಿಡುಗಡೆಗೆ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.

ಒಂದು ಗಂಟೆ ಕಾಲ ಪಾದಯಾತ್ರೆ : ಇದೇ ಸೆ.7ಕ್ಕೆ ಭಾರತ್ ಜೋಡೊ ಯಾತ್ರೆಗೆ 1 ವರ್ಷ ತುಂಬುತ್ತದೆ. ಇದರ ನೆನಪಿಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದು ಗಂಟೆಗಳ ಕಾಲ ಪಾದಯಾತ್ರೆ ಹಮ್ಮಿಕೊಳ್ಳಬೇಕು ಎಂದು ನಿರ್ಧರಿಸಿದ್ದೇವೆ. ಸಂಜೆ 5 ರಿಂದ 6 ಗಂಟೆಯ ತನಕ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮನಗರ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅಲ್ಲಿ ಅವರು ಹೆಜ್ಜೆ ಹಾಕಲಿದ್ದಾರೆ. ಪಾದಯಾತ್ರೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಬೇಕು ಎಂದು ಯೋಚನೆ ಇತ್ತು. ನಾಗರಿಕರಿಗೆ ಟ್ರಾಫಿಕ್ ಸಮಸ್ಯೆ ಆಗುತ್ತದೆ ಎಂದು ಕೈಬಿಡಲಾಯಿತು. ಸೆ.7 ರಂದು ಕ್ಯಾಬಿನೆಟ್ ಸಭೆ ಇರುವ ಕಾರಣ ಜಿಲ್ಲಾ ಮಂತ್ರಿಗಳು ಆಯಾಯ ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ ಎಂದರು.

ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಬೇಕು ಎಂದು ಸತೀಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆಯೇ ಎನ್ನುವ ಪ್ರಶ್ನೆಗೆ “ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಆ ವಿಚಾರವಾಗಿ ಯಾವುದೇ ತೀರ್ಮಾನ ಸದ್ಯಕ್ಕಿಲ್ಲ. ಆಡಳಿತ ದೃಷ್ಟಿಯಿಂದ ಸುಲಭ ಆಗುತ್ತದೆ ಎಂದು ಮನವಿ ನೀಡಿದ್ದಾರೆ. ರಾಮನಗರ, ಗದಗ, ಚಾಮರಾಜನಗರ ನಾಲ್ಕು ಮತ್ತು ಕೊಡಗು ಎರಡು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿವೆ. ಯಾರೂ ಗಾಬರಿ ಮಾಡಿಕೊಳ್ಳುವ ಅಗತ್ಯವಿಲ್ಲ. ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ” ಎಂದು ಉತ್ತರಿಸಿದರು.

ತೇಜಸ್ವಿನಿ ಅವರ ಜತೆ ರಾಜಕೀಯ ಚರ್ಚೆ ಇಲ್ಲ: ತೇಜಸ್ವಿನಿ ಅನಂತಕುಮಾರ್ ಅವರ ಭೇಟಿ ರಾಜಕೀಯ ವಿಚಾರಗಳಿಗೆ ಆಗಿದೆಯೇ ಎನ್ನುವ ಪ್ರಶ್ನೆಗೆ “ಸಾಧ್ಯವೇ ಇಲ್ಲ, ನಮ್ಮ ನಡುವೆ ಯಾವುದೇ ರಾಜಕೀಯ ವಿಚಾರಗಳು ಚರ್ಚೆಗೆ ಬಂದಿಲ್ಲ. ರಾಜಕೀಯ ವಿಚಾರ ಮಾತನಾಡಿದ್ದೇವೆ ಎಂದು ಯಾರಾದರೂ ಹೇಳಿದ್ದರೆ ಅದು ಸುಳ್ಳು. ತೇಜಸ್ವಿನಿ ಅವರು ಅನಂತ್‌ಕುಮಾರ್‌ ಅವರ ಜನ್ಮದಿನ, ಅನ್ನಭಾಗ್ಯ ವಿಚಾರಗಳ ಬಗ್ಗೆ ನನ್ನ ಜತೆ ಚರ್ಚೆ ಮಾಡಿದರು. ರಾಜಕೀಯ ವಿಚಾರಗಳನ್ನು ಚರ್ಚೆ ಮಾಡಲಾಯಿತು ಎಂಬುದು ಸುಳ್ಳು ಸುದ್ದಿ" ಎಂದು ಪುನರುಚ್ಚರಿಸಿದರು.

ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ: ಕಳೆದ 3 ತಿಂಗಳಿನಲ್ಲಿ 122 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎಲ್ಲಿದೆ ಆ ವರದಿ ನನಗೆ ನೀಡಿ. ಎಲ್ಲಾ ಸುಳ್ಳು ಸುದ್ದಿ, ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದರು.

ಜನರಿಗೆ ಕುಡಿಯಲು ನೀರು ಸಿಗುತ್ತಿಲ್ಲ ಎನ್ನುವ ಬಿಜೆಪಿಯವರ ಆರೋಪಕ್ಕೆ ಉತ್ತರಿಸಿದ ಅವರು, ಕೇವಲ ಆರೋಪ ಮಾಡುವುದಷ್ಟೇ ಅವರ ಕೆಲಸ. ಮಾಡಲಿ ಬಿಡಿ. ಅವರು ಇರುವುದೇ ಆರೋಪ ಮಾಡಲು. ನಾವು ಕುಡಿಯುವ ನೀರಿನ ವಿಚಾರದಲ್ಲಿ ಬೆಂಗಳೂರಿಗೆ ಮೊದಲ ಆದ್ಯತೆ ನೀಡಿದ್ದೇವೆ. ಜೊತೆಗೆ ಇತರೆಡೆಯೂ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಎಲ್ಲೆಲ್ಲಿ ತೊಂದರೆ ಉಂಟಾಗಿದೆಯೊ ಅಲ್ಲೆಲ್ಲಾ ತುರ್ತಾಗಿ ಪರ್ಯಾಯ ನೀರಿನ ವ್ಯವಸ್ಥೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ :ಕಾವೇರಿ: ವಾಸ್ತವಾಂಶ ಬಂದು ನೋಡುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿದ್ದೇವೆ- ಡಿ.ಕೆ.ಶಿವಕುಮಾರ್

ABOUT THE AUTHOR

...view details