ಕರ್ನಾಟಕ

karnataka

ಐಟಿ ದಾಳಿಯಲ್ಲಿ ಸಿಕ್ಕಿರುವುದು ಬಿಜೆಪಿ ಹಣ, ಬಿಜೆಪಿ ಭ್ರಷ್ಟಾಚಾರದ ಹಿಮಾಲಯ: ಡಿ.ಕೆ.ಶಿವಕುಮಾರ್

By ETV Bharat Karnataka Team

Published : Oct 17, 2023, 3:25 PM IST

Updated : Oct 17, 2023, 3:33 PM IST

ಐಟಿ ದಾಳಿಯಲ್ಲಿ ಸಿಕ್ಕಿರುವ ಹಣಕ್ಕೂ, ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ.

dcm-d-k-shivakumar-reaction-on-bjp-party-over-it-raid
ಐಟಿ ದಾಳಿಯಲ್ಲಿ ಸಿಕ್ಕಿರೋದು ಬಿಜೆಪಿ ಹಣ, ಭ್ರಷ್ಟಾಚಾರಕ್ಕೆ ಬಿಜೆಪಿಯೇ ಅಡಿಪಾಯ: ಡಿಸಿಎಂ ಡಿ ಕೆ ಶಿವಕುಮಾರ್

ಐಟಿ ದಾಳಿ; ಬಿಜೆಪಿ ವಿರುದ್ಧ ಡಿಕೆಶಿ ವಾಗ್ದಾಳಿ

ಬೆಂಗಳೂರು: "ಕಳೆದ ಮೂರು ದಿನಗಳಿಂದ ನಡೆದ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿಯಲ್ಲಿ ಕೆಲವು ಡೈರಿ, ಪುಸ್ತಕಗಳು ಪತ್ತೆಯಾಗಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಈ ದಾಖಲೆಗಳು ಬಹಿರಂಗಗೊಂಡರೆ, ದಾಳಿಯಲ್ಲಿ ಸಿಕ್ಕಿರುವ ಹಣ ಯಾರಿಗೆ ಸಂಬಂಧಿಸಿದ್ದು ಎಂಬ ಸತ್ಯಾಂಶ ಹೊರಬರುತ್ತದೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿಂದು ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, "ರಾಜ್ಯದಲ್ಲಿ ಆಗಿರುವ ಭ್ರಷ್ಟಾಚಾರಗಳನ್ನು ಮಾಡಿರುವುದು ಬಿಜೆಪಿ" ಎಂದು ಟೀಕಿಸಿದರು.

"ಇಡೀ ಭ್ರಷ್ಟಾಚಾರಕ್ಕೆ ಬಿಜೆಪಿಯೇ ಅಡಿಪಾಯ. ಅದು ಭ್ರಷ್ಟಾಚಾರದ ಹಿಮಾಲಯ ಇದ್ದಂತೆ. ಹೀಗಾಗಿ ಕರ್ನಾಟಕದ ಜನತೆ ಅವರನ್ನು ಅಧಿಕಾರದಿಂದ ಕಿತ್ತೆಸೆದಿದ್ದಾರೆ. ಈಗ ನಡೆದಿರುವ ಐಟಿ ದಾಳಿಯಲ್ಲಿ ಸಿಕ್ಕಿರುವ ಹಣ ಬಿಜೆಪಿಗೆ ಸೇರಿದ್ದು, ಈ ಹಣಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡಿರುವುದು ಬಿಜೆಪಿ ಸರ್ಕಾರ. ಇದು ಬಿಜೆಪಿಯ ಪಾಪದ ಕೂಸು" ಎಂದರು.

ಕಾಂಗ್ರೆಸ್ ಹೈಕಮಾಂಡ್ ನಡುಗುತ್ತಿದೆ ಎಂಬ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, "ನಡುಗುತ್ತಿರುವುದು ಕಾಂಗ್ರೆಸ್ ಹೈಕಮಾಂಡ್ ಅಲ್ಲ, ಬಿಜೆಪಿ ಹೈಕಮಾಂಡ್. ಈ ಭ್ರಷ್ಟಾಚಾರಕ್ಕೆಲ್ಲ ಅಡಿಪಾಯವೇ ಬಿಜೆಪಿಯ ಆರ್.ಅಶೋಕ್, ನಕಲಿ ಸ್ವಾಮಿ, ಲೂಟಿ ರವಿ. ಈ ಅಕ್ರಮಗಳ ಹಿಂದೆ ಇವರ ಹೆಸರಿದೆ. ಅವರು ಯಾರಿಂದ ತನಿಖೆ ಮಾಡಿಸುತ್ತಾರೋ ಮಾಡಿಸಲಿ. ಈ ವಿಚಾರವಾಗಿ ತನಿಖೆ ಆಗಲಿ. ಅದನ್ನೇ ನಾವು, ನಮ್ಮ ನಾಯಕರು ಹೇಳುತ್ತಿದ್ದೇವೆ. ಅವರ ಕಾಲದಲ್ಲಿ ಆಗಿರುವ ಬ್ರಹ್ಮಾಂಡ ಭ್ರಷ್ಟಾಚಾರವೇ ಇದಕ್ಕೆ ಅಡಿಪಾಯ" ಎಂದು ಆರೋಪಿಸಿದರು.

"ಆದಾಯ ತೆರಿಗೆ ಅಧಿಕಾರಿಗಳು ತಮ್ಮ ದಾಳಿ ಮುಗಿಸಿ ಅಧಿಕೃತ ಹೇಳಿಕೆ ಪ್ರಕಟಿಸಲಿ ಎಂದು ನಾವು ಇಷ್ಟು ದಿನ ಮಾತನಾಡಿರಲಿಲ್ಲ. ನಿನ್ನೆ ಐಟಿ ಅಧಿಕಾರಿಗಳು ಹೇಳಿಕೆ ಪ್ರಕಟಿಸಿದ್ದಾರೆ. ಐಟಿ, ಇಡಿ ಎಲ್ಲಾ ತನಿಖಾ ಸಂಸ್ಥೆಗಳು ಅವರ ಕೈಯಲ್ಲೇ ಇವೆ. ಈಗ ಎಲ್ಲಾ ದಾಖಲೆಗಳು ಅವರ ಬಳಿಯೇ ಇವೆ. ಅವುಗಳನ್ನು ಬಿಚ್ಚಿಡಲಿ" ಎಂದು ಸವಾಲೆಸೆದರು.

ಬಿಜೆಪಿಯು ಕಲೆಕ್ಷನ್ ಮಾಸ್ಟರ್ ಎಂಬ ಪೋಸ್ಟರ್ ಬಿಡುಗಡೆ ಮಾಡಿರುವ ವಿಚಾರವಾಗಿ ಮಾತನಾಡಿ, "ಹಿಮಾಲಯ ಪರ್ವತದ ಮೇಲೆನೇ ಇವರ ಭ್ರಷ್ಟಾಚಾರ. ಕೆಳಗಡೆಯಿಂದ ಹಿಮಾಲಯದವರೆಗೂ ಇಡೀ ದೇಶದಲ್ಲೇ ಭ್ರಷ್ಟಾಚಾರ ಇದೆ. ಹಿಂದೆ ಸಿಎಂ ಆಫೀಸ್ ನಲ್ಲೇ ಏನು ಏನು ನಡೆಯುತಿತ್ತು. ಎಷ್ಟು ಪರ್ಸೆಂಟೇಜ್ ಅನ್ನೋದನ್ನು ಶಾಸಕರ ಮತ್ತು ಮಾಜಿ ಮಂತ್ರಿಗಳಿಂದ ಹೇಳಿಸಲಾ ನಾನು?. ಈಗ ಬೇಡ ಸಮಯ ಬರುತ್ತದೆ. ಅವರಿಗೆ ಮುಹೂರ್ತ ಕೂಡುತ್ತೇನೆ" ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:ಕಾಂಗ್ರೆಸ್​ನ ಎಟಿಎಂ ಕಲೆಕ್ಷನ್ ಮಾಡೆಲ್ ಪ್ರದರ್ಶಿಸಿ ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ: ಅಶ್ವತ್ಥನಾರಾಯಣ

Last Updated :Oct 17, 2023, 3:33 PM IST

ABOUT THE AUTHOR

...view details