ಕರ್ನಾಟಕ

karnataka

ಡ್ಯಾಶ್ ಡ್ಯಾಶ್ ದಾಸರಾಗಿರುವವರಿಗೆ RSS ದೇಶ ನಿಷ್ಠೆ ಅರ್ಥವಾಗಲ್ಲ: ಸಿದ್ದರಾಮಯ್ಯ ವಿರುದ್ಧ ಸಿ ಟಿ ರವಿ ವಾಗ್ದಾಳಿ

By

Published : Dec 2, 2022, 6:58 AM IST

ಸಿದ್ದರಾಮಯ್ಯನವರು ಮತ್ತು ಸುಳ್ಳು ಒಂದು ನಾಣ್ಯದ ಎರಡು ಮುಖಗಳು ಎಂಬುದು ದೇಶಕ್ಕೆ ಗೊತ್ತಿದೆ. ಸುಳ್ಳು ನಮ್ಮಲ್ಲಿಲ್ಲವಯ್ಯ ಎಂದು ಹೇಳುತ್ತಲೇ ಸುಳ್ಳನ್ನೇ ಮನೆ ದೇವರನ್ನಾಗಿ ಮಾಡಿಕೊಂಡಿರುವವರು ನೀವೇ ಅಲ್ಲವೇ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ct ravi
ಸಿಟಿ ರವಿ

ಬೆಂಗಳೂರು: ಅಧಿಕಾರಕ್ಕಾಗಿ ಗಾಳಿ ಬಂದ ಕಡೆ ಛತ್ರಿ ಹಿಡಿಯುವ ಜನರಿಗೆ ಆರ್​ಎಸ್​ಎಸ್ ಅರ್ಥವಾಗುವುದಾದರೂ ಹೇಗೆ?, ಡ್ಯಾಶ್ ಡ್ಯಾಶ್ ದಾಸರಾಗಿರುವ ಸಕಲ ಕಲಾವಲ್ಲಭರಿಗೆ ಸಂಘದ ಧ್ಯೇಯ ನಿಷ್ಠೆ ಹಾಗೂ ದೇಶ ನಿಷ್ಠೆ ಈ ಜನ್ಮದಲ್ಲಿ ಅರ್ಥವಾಗದು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಟೀಕಿಸಿದರು.

ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಹಿಂದುತ್ವದ ವಿಚಾರದ ಬಗ್ಗೆ ಸದಾ ಭಯಪಡುವ ಸಿದ್ದರಾಮಯ್ಯಗೆ ಈಗ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿದ್ದಾಗಲೇ ಚುನಾವಣೆ ಗೆಲ್ಲಲಾಗದ ಅವರು, ಈಗ ಇಡೀ ರಾಜ್ಯದಲ್ಲೇ ಒಂದು ಕ್ಷೇತ್ರಕ್ಕಾಗಿ ದುರ್ಬೀನು ಹಿಡಿದು ಹುಡುಕುವ ಸ್ಥಿತಿಗೆ ತಲುಪಿದ್ದಾರೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್‌ ಸಹ ಸಿದ್ದರಾಮಯ್ಯಗೆ ಮೂಗುದಾರ ಹಾಕಿದ್ದಾರೆ. ತಾವು ಮುಖ್ಯಮಂತ್ರಿಯಾಗಿದ್ದಾಗ ತುಳಿದ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಹಾಗಾಗಿ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಕಾಲಿಟ್ಟಲ್ಲೆಲ್ಲಾ ಮುಳ್ಳೇ ಎಂದು ಸಿ ಟಿ ರವಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯ-ಸಿಟಿ ರವಿ ನಡುವೆ ಮಾತಿನ ಚಕಮಕಿ!

ಅತ್ತ ದರಿ, ಇತ್ತ ಪುಲಿ ಎಂದು ಇಬ್ಬರ ನಡುವೆ ಸಿಲುಕಿರುವ ಸಿದ್ದರಾಮಯ್ಯ ಈಗ ತಮ್ಮ ದಾರಿ ಸುಗಮ ಮಾಡಿಕೊಳ್ಳುವ ತವಕದಲ್ಲಿದ್ದಾರೆ. ಈ ಮೊದಲೇ ಮತಾಂಧ ಟಿಪ್ಪು ಪ್ರೇಮಿಯಾದ ಅವರು ಆರ್‌ಎಸ್‌ಎಸ್​ ಅನ್ನು ಬೈಯುವ ಮೂಲಕ ಹೈಕಮಾಂಡ್​ಗಳಾದ ಅಮ್ಮ-ಮಗನ ಗಮನ ಸೆಳೆಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಏಕೆಂದರೆ, ಸಿದ್ದರಾಮಯ್ಯನವರನ್ನು ಸೋಲಿಸಲು ಪ್ರಯತ್ನ ಪಡುವುದು ಆರ್‌ಎಸ್‌ಎಸ್‌ ಅಲ್ಲ, ಬದಲಾಗಿ ತಮ್ಮ ಪಕ್ಷದವರೇ ಎಂಬ ಸತ್ಯದ ಅರಿವು ಅವರಿಗಾಗಿದೆ ಎಂದಿದ್ದಾರೆ.

ದೇಶ ಭಕ್ತರನ್ನು ಹುಟ್ಟುಹಾಕುತ್ತಿರುವ ಸಂಸ್ಥೆ ಆರ್‌ಎಸ್‌ಎಸ್‌ ಅಲ್ಲ ಎಂದು ಹೇಳುವ ಮೂಲಕ ಅವರು ತಮ್ಮ ಅಜ್ಞಾನವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದು ಮಾತ್ರ ಅಕ್ಷಮ್ಯ. ನಮ್ಮ ಸಾಂಸ್ಕೃತಿಕ ಹಿರಿಮೆ ಮತ್ತು ಭಾರತದ ಶ್ರೀಮಂತ ಪರಂಪರೆಯ ಬಗ್ಗೆ ಇವತ್ತು ದೇಶದ ಜನ ಅರಿತಿದ್ದಾರೆ ಎಂದರೆ ಅದಕ್ಕೆ ಆರ್‌ಎಸ್‌ಎಸ್‌ ಕಾರಣ. ಸಂಘ ಪರಿವಾರದವರು ಸದಾ ಸಮಾಜದ ಬಗ್ಗೆ ಚಿಂತಿಸುವವರೇ ವಿನಃ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಕೇಕ್‌ ಮಾಡಿಸಿ ಬೆರಳು ಚೀಪುವವರಲ್ಲ. ಕಳೆದ ಬಾರಿ ಸಂಘ ಪರಿವಾರದವರು ನಡೆಸುವ ಶಾಲೆಯ ಮಕ್ಕಳ ಅನ್ನ ಕಿತ್ತುಕೊಂಡ ಕಾರಣ ಅದರ ಫಲವನ್ನು ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಉಣ್ಣಬೇಕಾಯಿತು. ಈಗ ಒಂದು ಕಡೆ ಆರ್‌ಎಸ್‌ಎಸ್‌ ಬಗ್ಗೆ ಹೀಗಳೆಯುತ್ತಾ ಇನ್ನೊಂದು ಕಡೆ ಕತ್ತಿ ಹಿಡಿದು ದೌಲತ್ತು ಮೆರೆಯುತ್ತಿರುವ ಸಿದ್ದರಾಮಯ್ಯನವರ ಸಂಸ್ಕಾರ ಯಾವುದು ಎಂಬುದನ್ನು ಪ್ರಜ್ಞಾವಂತ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು.

ಇದನ್ನೂ ಓದಿ:

ಪಿಎಫ್ಐ ನೆಪಕ್ಕೆ ಮಾತ್ರ ಆರ್​ಎಸ್​ಎಸ್ ಟಾರ್ಗೆಟ್ ಮಾಡುತ್ತಿದೆ: ಸಿ.ಟಿ ರವಿ

15 ಲಕ್ಷಕ್ಕೆ ಕೈಚಾಚುವ ದುಸ್ಥಿತಿ ಸಚಿವ ಭೈರತಿ ಬಸವರಾಜು ಅವರಿಗೆ ಬಂದಿಲ್ಲ: ಸಿ ಟಿ ರವಿ

ಸಿಟಿ ರವಿ ವಾಗ್ದಾಳಿ ವೇಳೆ ಸಿದ್ದರಾಮಯ್ಯ ಆಗಮನ.. ಕ್ಷಣ ಕಾಲ ತಬ್ಬಿಬ್ಬಾದ ಸಿಟಿ ರವಿ

ABOUT THE AUTHOR

...view details