ಕರ್ನಾಟಕ

karnataka

Bengaluru crime: ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಮಾರಣಾಂತಿಕ ಹಲ್ಲೆ.. ಮಾಜಿ ಸಿಎಂ ನಿವಾಸದ ಕೂಗಳತೆ ದೂರದಲ್ಲೇ ಪುಡಿರೌಡಿಯ ಹಾವಳಿ

By

Published : Jun 20, 2023, 1:53 PM IST

Updated : Jun 20, 2023, 4:40 PM IST

ಸೋಮವಾರ ಬೆಳಗಿನ ಜಾವ 2.30ರ ಸುಮಾರಿಗೆ ಆರ್.ಟಿ. ನಗರದ ಎಂಎಲ್ಎ ಲೇಔಟ್​ನಲ್ಲಿ ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಪುಡಿರೌಡಿಯೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.

The injured security guard was Albert
ಗಾಯಾಳು ಸೆಕ್ಯುರಿಟಿ ಗಾರ್ಡ್ ಆಲ್ಬರ್ಟ್

ಸಿಸಿಟಿವಿಯಲ್ಲಿ ಸೆರೆಯಾದ ಹಲ್ಲೆ ನಡೆಸುತ್ತಿರುವ ದೃಶ್ಯ

ಬೆಂಗಳೂರು: ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಪುಡಿರೌಡಿಯೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಸೋಮವಾರ ಬೆಳಗಿನ ಜಾವ 2.30ರ ಸುಮಾರಿಗೆ ಆರ್.ಟಿ. ನಗರದ ಎಂಎಲ್ಎ ಲೇಔಟಿನಲ್ಲಿ ನಡೆದಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿವಾಸದಿಂದ ಕೂಗಳತೆ ದೂರದಲ್ಲಿಯೇ ಘಟನೆ ನಡೆದಿದ್ದು, ಅಪರಿಚಿತ ಆರೋಪಿಯ ಕೃತ್ಯಕ್ಕೆ ಸೆಕ್ಯುರಿಟಿ ಗಾರ್ಡ್ ಅಲ್ಬರ್ಟ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.

ಎಂಎಲ್ಎ ಲೇಔಟ್ 1ನೇ ಮುಖ್ಯರಸ್ತೆಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಆಲ್ಬರ್ಟ್ ಭಾನುವಾರ ರಾತ್ರಿ ಕರ್ತವ್ಯದಲ್ಲಿದ್ದರು. ಈ ವೇಳೆ ಬೆಳಗಿನ ಜಾವ 2:30 ರ ಸುಮಾರಿಗೆ ಬಂದಿದ್ದ ಆರೋಪಿಯು ಆಲ್ಬರ್ಟ್ ಕುಳಿತಿದ್ದ ಕುರ್ಚಿಯ ಹಿಂದೆ ಬಂದು ನಿಂತುಕೊಂಡಿದ್ದ. ಆರೋಪಿಯನ್ನು ಉದ್ದೇಶಿಸಿ 'ಯಾರಪ್ಪ ನೀನು? ರಾತ್ರಿ ವೇಳೆ ಇಲ್ಲೆಲ್ಲಾ ಓಡಾಡಬಾರದು, ಕ್ಯಾಮೆರಾಗಳಿವೆ' ಎಂದು ಆಲ್ಬರ್ಟ್ ಹೇಳಿದ್ದರು. ಅಷ್ಟಕ್ಕೆ ಸಿಟ್ಟಿಗೆದ್ದ ಆರೋಪಿ ಅವಾಚ್ಯವಾಗಿ ನಿಂದಿಸಿ, ತನ್ನ ಬಳಿಯಿದ್ದ ಚಾಕುವಿನಿಂದ ಆಲ್ಬರ್ಟ್​ರ ಎಡಗೆನ್ನೆ ಕೊಯ್ದು ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಸಾರ್ವಜನಿಕರೊಬ್ಬರ ಸಹಾಯದಿಂದ ಸ್ಥಳಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಆಲ್ಬರ್ಟ್ ಆರ್.ಟಿ. ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ. ಸೆಕ್ಯುರಿಟಿ ಗಾರ್ಡ್ ಮೇಲೆ ಆರೋಪಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ‌.

ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪುಡಿ‌ ರೌಡಿಗಳ ಹಾವಳಿ ಅತಿಯಾಗುತ್ತಿದೆ. ರಾತ್ರಿ ಕೆಲಸ ಮುಗಿಸಿ ವಾಪಸಾಗುತ್ತಿದ್ದವರನ್ನು ಅಡ್ಡಗಟ್ಟಿ ನಮ್ಮ ಏರಿಯಾದಲ್ಲಿ ಯಾಕೆ ಓಡಾಡುತ್ತಿದ್ದೀರಾ ಎಂದು ಓರ್ವನನ್ನ ಹತ್ಯೆಗೈದು ಮತ್ತೋರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ಜೂನ್ 14ರ ರಾತ್ರಿ ರಾಮಮೂರ್ತಿ ನಗರದ ವಿಜಿನಾಪುರದಲ್ಲಿ ನಡೆದಿತ್ತು.

ಇರದ್ರಾಜ್​ ಮತ್ತು ವಿಜಯ್​ ಇಬ್ಬರು ಸಂಬಂಧಿಗಳು ರಾಮಮೂರ್ತಿ ನಗರದಲ್ಲಿ ವಾಸಿಸುತ್ತಿದ್ದರು. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಿತ್ಯ ಕೆಲಸ ಮುಗಿದ ಬಳಿಕ ಇಬ್ಬರು ಬೈಕ್​ನಲ್ಲಿ ಮನೆಗೆ ತೆರಳುತ್ತಿದ್ದರು. ಎಂದಿನಂತೆ ಜೂನ್ 14ರ ರಾತ್ರಿ ಸಹ ಇರದ್ರಾಜ್ ಮತ್ತು ವಿಜಯ್ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು.

ಈ ವೇಳೆ ವಿಜಿನಾಪುರ ಬಳಿ ಆರೋಪಿ ರಾಜೇಶ್​ ಎಂಬಾತ ತನ್ನ ಸಹಚರರೊಂದಿಗೆ ಇರದ್ರಾಜ್​ ಮತ್ತು ವಿಜಯ್​ ತೆರಳುತ್ತಿದ್ದ ಬೈಕ್​ನನ್ನು ಅಡ್ಡಗಟ್ಟಿದ್ದಾರೆ. ಬಳಿಕ ರಾಜೇಶ್​ ‘ಯಾರು ನೀವು, ಈ ಸಮಯದಲ್ಲಿ ನಮ್ಮ ಏರಿಯಾಗೆ ಏಕೆ ಬಂದಿದ್ದಿರಾ?’ ಎಂದು ಇರದ್ರಾಜ್​ಗೆ ಪ್ರಶ್ನಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಉತ್ತರಿಸಿದ ಇರದ್ರಾಜ್​ ‘ಅದನ್ನೆಲ್ಲ ಕೇಳಲು ನೀವು ಯಾರು.

ನಾವು ನಮ್ಮ ಮನೆಗೆ ಹೋಗ್ತಿದ್ದೇವೆ. ದಾರಿ ಬಿಡಿ’ ಎಂದು ಉತ್ತರಿಸಿದ್ದನು. ಇಷ್ಟಕ್ಕೆ ಕೋಪಗೊಂಡ ರಾಜೇಶ್​ ನಮ್ಮನ್ನು ಯಾರೆಂದು ಕೇಳ್ತೀಯಾ ಎಂದು ಮಚ್ಚಿನಿಂದ ಇರದ್ರಾಜ್ ತಲೆಗೆ ಬೀಸಿದ್ದನು. ನಂತರ ವಿಜಯ್ ತಲೆಗು ಒಂದು ಏಟು ಹೊಡೆದಿದ್ದನು. ನಂತರ ಇರದ್ರಾಜ್ ಹಾಗೂ ವಿಜಯ್ ಇಬ್ಬರು ಮನೆಗೆ ಹೋಗಿ ಗಾಯಕ್ಕೆ ಮನೆಯಲ್ಲಿದ್ದ ಔಷಧ ಹಚ್ಚಿಕೊಂಡು ಮಲಗಿದ್ದರು. ಆದರೆ, ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಇರದ್ರಾಜ್ ಮೃತಪಟ್ಟಿರುವುದು ವಿಜಯ್​ ಗಮನಕ್ಕೆ ಬಂದಿದೆ. ಕೂಡಲೇ ವಿಜಯ್​ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ಪ್ರಕರಣ ಕುರಿತು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಯುವಕರಿಬ್ಬರ ಮೇಲೆ ಹಲ್ಲೆ, ಮಚ್ಚಿನೇಟು ತಿಂದ ಯುವಕ ಸಾವು.. ಬೆಂಗಳೂರಿನಲ್ಲಿ 4 ದಿನಗಳ ಅಂತರದಲ್ಲಿ 4ನೇ ಕೊಲೆ!

Last Updated : Jun 20, 2023, 4:40 PM IST

ABOUT THE AUTHOR

...view details