ಕರ್ನಾಟಕ

karnataka

ಸರ್ಕಾರದ 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು: ಕಾಂಗ್ರೆಸ್ ಟೀಕೆ

By

Published : Feb 15, 2023, 7:16 AM IST

"ಪ್ರೀತಿ ಮಧುರ, ತ್ಯಾಗ ಅಮರ".. ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ. ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ-ಕಾಂಗ್ರೆಸ್ ಲೇವಡಿ

congress
ಕಾಂಗ್ರೆಸ್​​

ಬೆಂಗಳೂರು: ಪ್ರೇಮಿಗಳ ದಿನದಂದು ಬಿಜೆಪಿ ಸರ್ಕಾರದ ಕಾಲೆಳೆದು ಕಾಂಗ್ರೆಸ್ ವಿಭಿನ್ನವಾಗಿ ಟ್ವೀಟ್ ಮಾಡಿದೆ. 40 ಪರ್ಸೆಂಟ್ ಲವ್ ಹ್ಯಾಷ್ ಟ್ಯಾಗ್ ಮಾಡಿದೆ. "ಬಿಜೆಪಿಗರು ಶುದ್ಧ 40% ಪ್ರೇಮಿಗಳು, 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜೂಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು". ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ.. ಎಂದು ಲೇವಡಿ ಮಾಡಿದೆ.

ಬಿಜೆಪಿಗರದ್ದು ಗೋ ಪ್ರೀತಿಯಲ್ಲ, Go ಪ್ರೀತಿ. ಬಿಜೆಪಿಗರು ಗೋವಿನ ಎದುರು ಫ್ಲರ್ಟ್ ಮಾಡುತ್ತಾರೆ ಹೊರತು ಪ್ರೀತಿಯಲ್ಲ. ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು, ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು. ಸಿಎಂ ಮನೆಗೆ ಕಲ್ಲು ಹೊಡೆಯುವುದು. ರೈತರಿಗೆ ಅವಮಾನಿಸುವುದು. ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್‌ಲಿಂಗ್ ಅಗತ್ಯವಿದೆ. ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ. ಮಂಡ್ಯದಲ್ಲಿ ತಿರಸ್ಕಾರದ ಪ್ರೇಮ ವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನ ಪ್ರೇಮಿಗೆ ನಮ್ಮ ಸಾಂತ್ವಾನಗಳು ಎಂದಿದೆ.

"ಪ್ರೀತಿ ಮಧುರ, ತ್ಯಾಗ ಅಮರ": ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ. ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ. ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ. "ಸಚಿವ ಹುದ್ದೆ" ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ ಎಂದು ಕಾಂಗ್ರೆಸ್ ಕುಹಕವಾಡಿದೆ.

ಬಿಎಸ್​​ವೈ ದುರಂತ ನಾಯಕ: ಕರ್ನಾಟಕದ ಬಿಜೆಪಿಯ ಮೇರು ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಇಂತಹ ದಯನೀಯ ಸ್ಥಿತಿ ಬರಬಾರದಿತ್ತು. ಬಿಎಸ್​​ವೈ ಅವರ ರಾಜಕೀಯ ಜೀವನದ ಅರ್ಧ ಬದುಕು ಕಳೆಯದ ಅಮಿತ್ ಶಾ ಯಡಿಯೂರಪ್ಪನವರನ್ನು ನಿರ್ಲಕ್ಷಿಸಿದ್ದಾರೆ. 'ಸಂತೋಷ ಕೂಟ'ದ ಆಟದಲ್ಲಿ ಬಿಎಸ್​ವೈ "ದುರಂತ ನಾಯಕ"ನಾಗಿದ್ದಾರೆ. ಹಿರಿಯ ನಾಯಕರನ್ನು ನಡೆಸಿಕೊಳ್ಳುವ ಸಂಸ್ಕೃತಿ ಇದೇನಾ ರಾಜ್ಯ ಬಿಜೆಪಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಹತ್ತಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪ್ರತಿಭಟನೆಗಳು ಈ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿದೆ. ಸರ್ಕಾರದ ಯಾವೊಬ್ಬ ಪ್ರತಿನಿಧಿಯೂ ಪ್ರತಿಭಟನಾಕಾರರ ಸಮಸ್ಯೆ, ಬೇಡಿಕೆಗಳನ್ನು ಭೇಟಿಯಾಗಿ ಕೇಳಿಸಿಕೊಳ್ಳುವ ಕನಿಷ್ಠ ಸೌಜನ್ಯ ಇಲ್ಲದಿರುವುದು ಬಿಜೆಪಿಯ ಧೂರ್ತತನಕ್ಕೆ ಸಾಕ್ಷಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಒಮ್ಮೆ ಫ್ರಿಡಂ ಪಾರ್ಕ್ ಕಡೆ ಬನ್ನಿ ಎಂದಿದೆ.

ರಾತ್ರಿ ಹಾಕಿದ ಟಾರು ಬೆಳಿಗ್ಗೆಯೇ ಕಿತ್ತು ಬರುತ್ತಿದೆ ಎಂದರೆ ನಿಜವಾಗಿಯೂ ಡಾಂಬರು ಹಾಕಿದ್ದೇ ಅಥವಾ ಜಲ್ಲಿಗೆ ಕಪ್ಪು ಬಣ್ಣ ಕಲಿಸಿ ಹಾಕಿದ್ದೇ ಬೊಮ್ಮಾಯಿ ಅವರೇ?. ರಾಜ್ಯ ಬಿಜೆಪಿ ಸರ್ಕಾರ ಹಾಕಿದ ರಸ್ತೆಗೆ ಒಂದ್​ ದಿನವೂ ಆಯಸ್ಸು ಇಲ್ಲವೆಂದರೆ ಕಮಿಷನ್ ದರ 40% ನಿಂದ 100%ಗೆ ಏರಿಕೆಯಾಗಿದೆಯೇ?, ಲೂಟಿಯಲ್ಲಿ ಬಿಜೆಪಿ ವೀರಪ್ಪನ್‌ನನ್ನೂ ಮೀರಿಸುತ್ತಿದೆ ಎಂದು ಕುಟುಕಿದೆ.

ಪ್ರೀತಿಯ ಪಯಣದ ಹಾದಿಯಲ್ಲಿ ಕೇವಲ ಕಲ್ಲು ಮುಳ್ಳುಗಳಷ್ಟೇ ಇರುವುದಿಲ್ಲ.. ರಸ್ತೆ ಗುಂಡಿಗಳು, ಕಿತ್ತು ಹೋದ ಡಾಂಬರು ಕೂಡ ಇರುತ್ತವೆ! ಏಕೆಂದರೆ ಅದು - 40 ಪರ್ಸೆಂಟ್ ಕಮಿಷನ್​​. ಈ ಸ್ಪೆಷಲ್ ಡಾಕ್ಟರ್‌ಗೆ ಹೃದಯ ಬಡಿತವೂ ತಿಳಿಯುತ್ತದೆ. ಲೂಟಿ ಹೊಡೆತವೂ ತಿಳಿದಿದೆ. ಈ ಡಾಕ್ಟರ್‌ಗೂ ಲವ್​ ಆಗಿದೆ.

40 ಪರ್ಸೆಂಟ್ ಲವ್​: ಕನಸಲ್ಲೂ ನೀನೇ, ಮನಸಲ್ಲೂ ನೀನೇ, ಉಸಿರಲ್ಲೂ ನೀನೇ, ಹೆಸರಲ್ಲೂ ನೀನೇ.. ಹೃದಯದ "ಆಕ್ಸಿಜನ್"! ಕಮಿಷನ್ ಕೊಡಿಸುವ, ಖಜಾನೆ ತುಂಬುವ "ಆಕ್ಸಿಜನ್" ಎಂದರೆ ಇವರಿಗೆ ಅದಮ್ಯ ಪ್ರೇಮ. ಪ್ರೇಮದಲ್ಲಿ ಮುಳುಗಿದವರು ಸದಾ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಮತ್ತು ಆ ಭ್ರಮೆಗಳನ್ನೇ ವಾಸ್ತವ ಎಂದು ತಿಳಿದುಕೊಂಡಿರುತ್ತಾರೆ. ಇದು ಪ್ರೇಮದ ಮೊದಲ ಹಂತ. ಪ್ರೇಮವಿರುವ ಕಡೆ ದ್ವೇಷಕ್ಕೆ ಜಾಗವಿಲ್ಲ.. ಆದರೆ ದ್ವೇಷವನ್ನೇ ಪ್ರೇಮಿಸಿದರೆ?, ದ್ವೇಷವನ್ನೇ ಪ್ರೀತಿಸಿ, ದ್ವೇಷವನ್ನೇ ಧ್ಯಾನಿಸಿ, ದ್ವೇಷದೊಂದಿಗೆ ರೊಮ್ಯಾನ್ಸ್ ಮಾಡುವ ವಿಶಿಷ್ಠ ಪ್ರೇಮಿ ಇವರು. ಸರಸ ಸಲ್ಲಾಪದ ಸಿಡಿಗಳು" ಬಿಜೆಪಿಗರ 'ಸಿಡಿ ಸಂಭ್ರಮ'ದ ಎಪಿಸೋಡ್‌ಗಳು ನೂರಾರಿವೆಯಂತೆ. ಯತ್ನಾಳ್​ ಅವರು ಹೇಳುವ ಸಿಡಿ ಸಿಡಿಯುವುದು ಯಾವಾಗ? ಎಂದು ಕಾಂಗ್ರೆಸ್​ ಪ್ರಶ್ನಿಸಿದೆ.

ಬಿಜೆಪಿ ಎಂಬುದು ಕ್ರಿಮಿನಲ್‍ಗಳ ತೊಟ್ಟಿ ಎಂದು ಮತ್ತೊಮ್ಮೆ ಸಾಬೀತಾಗಿದೆ. ಒಬ್ಬ ಶಾಸಕ ಚೆಕ್‍ಬೌನ್ಸ್ ಕೇಸ್​​ನಲ್ಲಿ 4 ವರ್ಷ ಶಿಕ್ಷೆಗೆ ಗುರಿಯಾದರೆ, ಮತ್ತೊಬ್ಬ ವಂಚನೆ ಕೇಸ್​ನಲ್ಲಿ 2 ವರ್ಷ ಶಿಕ್ಷೆಗೆ ಗುರಿಯಾಗಿದ್ದಾರೆ. ಸ್ವಯಂಘೋಷಿತ ಸುಸಂಸ್ಕೃತ ಪಕ್ಷ ಬಿಜೆಪಿಯ ತುಂಬಾ ಭ್ರಷ್ಟಾಚಾರಿಗಳು ಮತ್ತು ಕ್ರಿಮಿನಲ್‍ಗಳೇ ತುಂಬಿರುವುದು ನಾಚಿಕೆಗೇಡಿನ ಸಂಗತಿ ಕಾಂಗ್ರೆಸ್​ ಸರಣಿ ಟ್ವೀಟ್​ಗಳ ಮೂಲಕ ಸರ್ಕಾರವನ್ನು ಟೀಕಿಸಿದೆ.

ಇದನ್ನೂ ಓದಿ:ಬಿಜೆಪಿ ಸೇರಲು ರೌಡಿಗಳು ಪರೇಡ್​ಗೆ ಸಜ್ಜಾಗಿದ್ದಾರೆ: ಸಿಎಂಗೆ ಬಾಂಬೆ ಬೊಮ್ಮಣ್ಣ ಎಂದು ಕಾಂಗ್ರೆಸ್ ಟ್ವೀಟ್ ಅಭಿಯಾನ

ABOUT THE AUTHOR

...view details