ಕರ್ನಾಟಕ

karnataka

ಅಭ್ಯರ್ಥಿಗಳ ಆಯ್ಕೆ ಕಸರತ್ತು.. ಮುಂದುವರಿದ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ

By

Published : Feb 14, 2023, 7:27 AM IST

ವಿಧಾನಸಭೆ ಚುನಾವಣೆ-2023 - ರಾಜ್ಯ ಕಾಂಗ್ರೆಸ್​ನಲ್ಲಿ ಅರ್ಹ ಅಭ್ಯರ್ಥಿಗಳ ಪಟ್ಟಿ ತಯಾರಿಸಲು ನಾಯಕರ ಕಸರತ್ತು - ಮುಂದುವರಿದ ಸ್ಕ್ರೀನಿಂಗ್ ಕಮಿಟಿ ಸಭೆ

KPCC Office
ಕೆಪಿಸಿಸಿ ಕಚೇರಿ

ಬೆಂಗಳೂರು :ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪರಿಷ್ಕರಣೆ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್ ಹಾಗೂ ಸದಸ್ಯ ನೀರಜ್ ಡಂಗಿ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಅಭಿನಂದಿಸಿದರು. ಸದ್ಯ ರಾಜಧಾನಿ ಬೆಂಗಳೂರಿನಲ್ಲೇ ಬೀಡುಬಿಟ್ಟಿರುವ ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರು ನಿನ್ನೆಯಿಂದ ಅರ್ಹ ಅಭ್ಯರ್ಥಿಗಳ ಪಟ್ಟಿ ತಯಾರಿಸುವಲ್ಲಿ ನಿರತರಾಗಿದ್ದು, ಪ್ರತಿಯೊಬ್ಬ ನಾಯಕರನ್ನೂ ಪ್ರತ್ಯೇಕವಾಗಿ ಕೂರಿಸಿ ಚರ್ಚಿಸುತ್ತಿದ್ದಾರೆ. ಅಭ್ಯರ್ಥಿಗಳ ಆಯ್ಕೆಗೆ ಸೋಮವಾರದಿಂದ ಭಾರೀ ಕಸರತ್ತು ನಡೆದಿದ್ದು, ಸರಣಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ.

ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್ ನೇತೃತ್ವದಲ್ಲಿ ಮಹತ್ವದ ಸಭೆ ನೆನ್ನೆ ಸಹ ಮುಂದುವರಿದಿದ್ದು, ಬಿ.ಕೆ ಹರಿಪ್ರಸಾದ್, ಎಂ.ಬಿ ಪಾಟೀಲ್, ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಹೆಚ್ ಕೆ ಪಾಟೀಲ್, ಕೆ.ಎಚ್ ಮುನಿಯಪ್ಪ, ಕಾಂಗ್ರೆಸ್ ಶಾಸಕರು, ಎಂಎಲ್ ಸಿ ಗಳ ಜೊತೆ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದೆ. ಸಂಜೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಜೊತೆ ಅಂತಿಮ ಸಭೆ ನಡೆಯಲಿದೆ ಎಂದು ತಿಳಿಸಲಾಗಿತ್ತು. ಆದರೆ ಕೇವಲ ಡಿಕೆಶಿ ಮಾತ್ರ ಭೇಟಿ ನೀಡಿದ್ದರು. ಇಂದು ಕೆಪಿಸಿಸಿ ಪದಾಧಿಕಾರಿಗಳು, ಆಕಾಂಕ್ಷಿಗಳ ಜೊತೆ ಸಭೆ ನಡೆಯಲಿದೆ.

ಸಭೆ ಬಳಿಕ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಮಾತನಾಡಿ, ಅಭ್ಯರ್ಥಿಗಳ ಘೋಷಣೆ ವಿಳಂಬ ಅನ್ನೋ ಪ್ರಶ್ನೆ ಇಲ್ಲ. ನಮ್ಮಲ್ಲಿ ನಡೆದುಕೊಂಡು ಬರುತ್ತಿರೋ ಪ್ರಕ್ರಿಯೆ ಇದು. ಸ್ಟೇಟ್ ಎಲೆಕ್ಷನ್ ಕಮಿಟಿ ಬಳಿಕ ಸ್ಕ್ರೀನಿಂಗ್ ಕಮಿಟಿಗೆ ಬಂದಿದೆ. ಪಕ್ಷದ ಗೈಡ್​ಲೈನ್ಸ್ ಪ್ರಕಾರ ನಡೀತಾ ಇದೆ ಎಂದು ಹೇಳಿದರು.

ಶೀಘ್ರದಲ್ಲೇ ಪಕ್ಷದ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆ ಮಾಡುತ್ತೇವೆ. ಬ್ಲಾಕ್, ಜಿಲ್ಲಾ ಮಟ್ಟದಲ್ಲಿ ಅಭಿಪ್ರಾಯಗಳು ಇರುತ್ತವೆ. ಅವುಗಳನ್ನು ನಮ್ಮ ನಾಯಕರು ಫೀಡ್ ಬ್ಯಾಕ್ ತೆಗೆದುಕೊಂಡಿರುತ್ತಾರೆ. ಸರ್ವೇ ಮಾಡಿಸಿದ್ದೀವಿ, ಸಾಮಾಜಿಕ ನ್ಯಾಯವಾಗಿ ಟಿಕೆಟ್ ಕೊಡಬೇಕು. ಚುನಾವಣೆ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುತ್ತದೆ ಎಂದು ಎಂ.ಬಿ ಪಾಟೀಲ್​ ತಿಳಿಸಿದರು.

ಎಐಸಿಸಿ ನಾಯಕರು ಸಿಎಂ ಯಾರೆಂದು ತೀರ್ಮಾನಿಸುತ್ತಾರೆ :ನಿನ್ನೆ ಸಂಜೆ ಹಮ್ಮಿಗೊಂಡಿದ್ದ ಕಾಂಗ್ರೆಸ್​ ಲಿಂಗಾಯತ ಮುಖಂಡರ ಪ್ರತ್ಯೇಕ ಸಭೆ ವಿಚಾರ ಕುರಿತು ಮಾತನಾಡಿದ ಎಂ.ಬಿ ಪಾಟೀಲ್​ ಅವರು ಸ್ವಾಭಾವಿಕವಾಗಿ ಎಲ್ಲಾ ಸಮುದಾಯದವರು ಮೀಟಿಂಗ್ ಮಾಡುತ್ತಾರೆ. ನ್ಯಾಯಯುತವಾಗಿ ಲಿಂಗಾಯತ ಸಮುದಾಯ ಕೇಳುತ್ತೆ. ಎಲ್ಲಿ ಗೆಲ್ಲಲು ಆಗುತ್ತೋ, ಎಲ್ಲಿ ಜನಸಂಖ್ಯೆ ಹೆಚ್ಚು ಇರುತ್ತೋ ಅಲ್ಲಿ ಪರಿಣಗಣೆ ಆಗಬೇಕು. ಸಭೆ ಮಾಡೋದರಲ್ಲಿ ಏನು ತಪ್ಪಿಲ್ಲ. ಕಾಂಗ್ರೆಸ್ ನಲ್ಲಿ ಸಿಎಂ ಪದ ಚುನಾವಣೆ ನಂತರ ಬರುತ್ತೆ. 150 ಸೀಟ್ ತನಕ ಹೋಗುತ್ತೇವೆ. ಗೆದ್ದ ಮೇಲೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತೆ. ಬಳಿಕ ಎಐಸಿಸಿಯಿಂದ ವೀಕ್ಷಕರು ಬಂದು ಶಾಸಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಎಐಸಿಸಿ ನಾಯಕರು ಸಿಎಂ ಯಾರೆಂದು ತೀರ್ಮಾನ ಮಾಡುತ್ತಾರೆ ಎಂದರು.

ಇದನ್ನೂ ಓದಿ :ಕಾಂಗ್ರೆಸ್​ನಿಂದ ಬಿಜೆಪಿ ಸೋಲಿಸಲು ಆಗಲ್ಲ, ಜೆಡಿಎಸ್​ನಿಂದ ಮಾತ್ರ ಸಾಧ್ಯ: ಹೆಚ್​ಡಿಕೆ

ABOUT THE AUTHOR

...view details