ಕರ್ನಾಟಕ

karnataka

ಬೆಲೆ ಏರಿಕೆ ಬಗ್ಗೆ ಸರ್ಕಾರದ ಉತ್ತರ : ತೃಪ್ತರಾಗದ ಕಾಂಗ್ರೆಸ್ ಸದಸ್ಯರಿಂದ ಸಭಾತ್ಯಾಗ

By

Published : Sep 20, 2021, 9:37 PM IST

ಬಿಎಸ್​ವೈ ಹೇಳಿಕೆಗೆ ಮತ್ತೆ ಕೌಂಟರ್ ನೀಡಿದ ಸಿದ್ದರಾಮಯ್ಯ, ಯಡಿಯೂರಪ್ಪಗೆ ವಯಸ್ಸಾಯ್ತು ಅಂತಾ ಕೆಳಗಿಳಿಸಿದ್ರು. ಅವರು ಸಿಎಂ ಆದಾಗಲೇ 75 ವರ್ಷ ಆಗಿತ್ತು. ಅವರನ್ನು ಬಲವಂತದಿಂದ ಇಳಿಸಿದ್ದು ಅಲ್ವೇ ಎಂದು ಕಾಲೆಳೆದರು..

congress-members-walk-out-in-assembly
ಕಾಂಗ್ರೆಸ್ ಸದಸ್ಯರ ಸಭಾತ್ಯಾಗ

ಬೆಂಗಳೂರು :ಬೆಲೆ ಏರಿಕೆ ಬಗ್ಗೆ ಸರ್ಕಾರ ನೀಡಿದ ಉತ್ತರಕ್ಕೆ ತೃಪ್ತರಾಗದ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು. ಬೆಲೆ ಏರಿಕೆಗೆ ಸಂಬಂಧಿಸಿದಂತೆ ಮಧ್ಯಾಹ್ನದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ನೀಡಿದರು.

ಇದಕ್ಕೆ ತೃಪ್ತರಾಗದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸಿಎಂ ಬಸವರಾಜ ಬೊಮ್ಮಾಯಿ ರಾಜಕೀಯ ಭಾಷಣ‌ ಮಾಡಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿ ಕಾಂಗ್ರೆಸ್ ಸದಸ್ಯರ ಜೊತೆ ಸಭಾತ್ಯಾಗ ಮಾಡಿದರು.

ಇದಕ್ಕೂ ಮುನ್ನ ಬೆಲೆ ಏರಿಕೆ ಸಂಬಂಧ ಉತ್ತರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ದೇಶದ ಆರ್ಥಿಕತೆ ಅಸ್ಥಿರವಾಗಬಾರದು. ಆರ್ಥಿಕ‌ ತಜ್ಞರು ಕೂಡ ಮಾತನಾಡಿದ್ದಾರೆ. ಕ್ರೂಡ್‌ ಆಯಿಲ್‌ಗೆ ನಾವು ಅವಲಂಬಿತರಾದರೆ ಕಷ್ಟ. ಆಯಿಲ್ ಸಂಸ್ಥೆಗಳೇ ಹಿಡಿತ ಸಾಧಿಸಿರುತ್ತವೆ. ನಾವು ಶೇ.80ರಷ್ಟು ಅವಲಂಬಿತರಾಗಿದ್ದೇವೆ. ಹೆಚ್ಚು ಆಮದು ಮಾಡಿಕೊಳ್ಳುತ್ತಿದ್ದೇವೆ.

ಎಥೆನಾಲ್ ಪೆಟ್ರೋಲ್ ರೀತಿಯಲ್ಲೇ ಇದೆ.‌ ಅದರ ಉಪಯೋಗಕ್ಕೆ ಆಯಿಲ್ ಲಾಬಿ ಬಿಡುತ್ತಿಲ್ಲ. ಎಥೆನಾಲ್ ಉತ್ಪಾದನೆಗೆ ಒತ್ತು ಕೊಡುತ್ತಿದ್ದೇವೆ. ಶುಗರ್ ಕೇನ್​ನಿಂದ ಈ ಎಥೆನಾಲ್ ಉತ್ಪಾದನೆಯಾಗುತ್ತಿದೆ. ಮುಂಬರುವ ದಿನದಲ್ಲಿ ಇದು ಉಪಯೋಗಕ್ಕೆ ಬರುತ್ತದೆ. ಶೇ.20ರಷ್ಟು ಉತ್ಪಾದನೆ ಹೆಚ್ಚಳವಾಗಲಿದೆ. ಇದು ಪೆಟ್ರೋಲ್ ಅವಲಂಬನೆ ಕಡಿಮೆ ಮಾಡುತ್ತದೆ ಎಂದು ವಿವರಿಸಿದರು.

ಪೆಟ್ರೋಲಿಯಂ ಉತ್ಪನ್ನ ಆಮದು ಕಡಿಮೆ ಮಾಡಬೇಕು. ಆಗ ದರ ಏರಿಕೆಗೆ ಕಡಿವಾಣ ಹಾಕಬಹುದು. ಅದಕ್ಕಾಗಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಬೇಕು. ಎನ್‌ಡಿಎ ಸರ್ಕಾರ ಬಂದ ಮೇಲೆ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಎಥೆನಾಲ್ ಪ್ರಮಾಣ ಹೆಚ್ಚಿಸಲು ಆಯಿಲ್ ಲಾಬಿ ಬಿಡ್ತಿಲ್ಲ ಅನ್ನೋದು ಗೊತ್ತಾಗಿದೆ.

ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಎಥೆನಾಲ್ ಪ್ರಮಾಣದ ಶೇ.6ರಿಂದ 22ಕ್ಕೇರಿಸಲಾಗಿದೆ. ಮುಂದಿನ ದಿನಗಳ ಸಕ್ಕರೆ ಕಾರ್ಖಾನೆಯಲ್ಲಿ ವಿದ್ಯುತ್ ಉತ್ಪಾದನೆ ಬದಲು ಎಥೆನಾಲ್ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್​ಗೆ ತಿರುಗೇಟು :ಅರವತ್ತು ವರ್ಷದಲ್ಲಿ 13 ಕೋಟಿ ಗ್ಯಾಸ್ ಕಲೆಕ್ಷನ್ ಕಾಂಗ್ರೆಸ್ ಮಾಡಿದೆ. ನಾವು ಏಳು ವರ್ಷದಲ್ಲಿ 16.11 ಕೋಟಿ‌ ಹೊಸ ಕಲೆಕ್ಷನ್ ಮಾಡಿದ್ದೇವೆ. 7 ವರ್ಷ ಎಲ್ಲಿ?. 60 ವರ್ಷ ಎಲ್ಲಿ?. ಇದು ನಿಮ್ಮ ಮತ್ತು‌ ನಮ್ಮ ಸಾಧನೆ ಎಂದು ತಿರುಗೇಟು ನೀಡಿದರು. ಉಜ್ವಲ ಯೋಜನೆಯಲ್ಲಿ ಬಡವರಿಗೆ ಗ್ಯಾಸ್ ನೀಡಿದ್ದೇವೆ. ಇದರ ಉದ್ದೇಶ ಕಟ್ಟಿಗೆ ಒಲೆಗಳು ಕಡಿಮೆಯಾಗಬೇಕು ಎಂಬುದು ಎಂದರು.

ಈ ಹಿಂದೆ ಸಬ್ಸಿಡಿ ಬಗ್ಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಹೇಳಿದ್ದಾರೆ. 2000ದೊಳಗೆ ಸಬ್ಸಿಡಿ ನಿಲ್ಲಿಸಿ ಅಂತಾ ಹೇಳಿದ್ರು. ಆರ್ಥಿಕ ತಜ್ಞರು ಕಟು ಸತ್ಯ ಹೇಳ್ತಾರೆ, ರಾಜಕಾರಣಿಗಳು ಮರೆಮಾಚುತ್ತೇವೆ. ಸಿದ್ದರಾಮಯ್ಯ ಅವರೇ ಹಣಕಾಸಿನ ಸಚಿವರಾಗಿದ್ದಾಗ ಬಜೆಟ್ ಪ್ಲ್ಯಾನ್ ಗಾತ್ರವನ್ನು ಕಡಿಮೆ ಮಾಡಿ ಯಶಸ್ವಿಯಾದ್ರು.

ಕೆಲವು ಕಠಿಣ ಪರಿಸ್ಥಿತಿಯಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನರೇಂದ್ರ ಮೋದಿ ಅವರು ಕೋವಿಡ್ ಸಂದರ್ಭದಲ್ಲಿ ಕೆಲ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಅಬಕಾರಿ ಸುಂಕ ಈ ವರ್ಷ ಶೇ.10ರಷ್ಟು ಜಾಸ್ತಿ ಮಾಡಿರೋದು ನಿಜ. ಮುಂದಿನ ದಿನಗಳಲ್ಲಿ ಅದನ್ನು ಕಡಿಮೆ ಮಾಡುವುದಕ್ಕೆ ಅವಕಾಶ ಇದೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಕಾಳೆಲೆದ ಸಿಎಂ ಬೊಮ್ಮಾಯಿ : ಸಿದ್ದರಾಮಯ್ಯ ಅವರು ಕನ್ನಡದಲ್ಲಿ ಬಹಳ ಪಂಡಿತರಿದ್ದಾರೆ. ಮೊನ್ನೆ ಪದ್ಯ ಹೇಳಿದ್ದಾರೆ. ಷಟ್ಪದಿ ವಿವರಣೆ ನೀಡಿದ್ದಾರೆ. ನಾನು ಒಪನ್ ಆಗಿ ಹೇಳುತ್ತೇನೆ. ಅಷ್ಟು ಜ್ಞಾನ ನಮಗಿಲ್ಲ. ನನಗೂ ಕುಮಾರವ್ಯಾಸನ ಪದ್ಯ ಬೇಕು ಎಂದು ನಾನು ನಮ್ಮ ಅಧಿಕಾರಿಗೆ ಹೇಳಿ ಮಾಹಿತಿ ಪಡೆದಿದ್ದೇನೆ ಎಂದ ಅವರು, ಕುಮಾರವ್ಯಾಸನ ಪದ್ಯ ಹಾಗೂ ಅದಕ್ಕೆ ಅರ್ಥ ಹೇಳಿದರು.

ಹೆತ್ತವರಿಗೆ ಹೆಗ್ಗಣ ಮುದ್ದು : ಸಿಎಂ ಉತ್ತರದ ಮೇಲೆ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆಯಿದೆ. ನೀವು ಉತ್ತಮ ಭಾಷಣ ಮಾಡಿರಲಿಲ್ವೇ, ಆಗ ಏನಾದ್ರೂ ನಿಮ್ಮ‌ನ್ನ ಬೆನ್ನು ತಟ್ಟಿದ್ರಾ?.‌ ಎಂದು ಬಿ.ಎಸ್ ಯಡಿಯೂರಪ್ಪ ಕಡೆ ನೋಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಅವರಿಗೆ ರಾಜ್ಯವೇ ಬೆನ್ನು ತಟ್ಟುತ್ತದೆ. ಸಿದ್ದರಾಮಯ್ಯ ಮಾತಿಗೆ ಸಿಎಂ ಪ್ರತ್ಯುತ್ತರ ಕೊಟ್ಟರು. ಮತ್ತೆ ಸಿಎಂಗೆ ಟಾಂಗ್ ಕೊಟ್ಟ ಸಿದ್ದರಾಮಯ್ಯ, ಪಾಪ ಆಪರೇಷನ್ ಕಮಲ‌ ಮಾಡಿದ್ದು ಅವರು (ಯಡಿಯೂರಪ್ಪ). ಸರ್ಕಾರ‌ ರಚನೆ ಮಾಡಿದ್ದು ಯಡಿಯೂರಪ್ಪ. ಅಂತವರನ್ನು ನೀವು‌ ಮೂಲೆಗೆ ಕೂರಿಸಿಬಿಟ್ಟಿರಿ ಎಂದು ಕಾಲೆಳೆದರು.

ಸಿದ್ದರಾಮಯ್ಯ ಆರೋಪಕ್ಕೆ ಬಿ ಎಸ್ ಯಡಿಯೂರಪ್ಪ ಎದ್ದು ನಿಂತು, ನಾನಾಗಿಯೇ ರಾಜೀನಾಮೆ ನೀಡಿದ್ದೆ. ಯಾರೂ ಒತ್ತಡ ಹಾಕಿಲ್ಲ. ಮುಂದಿನ ಚುನಾವಣೆಯಲ್ಲೂ ನಾವೇ ಅಧಿಕಾರಕ್ಕೆ‌ ಬರುತ್ತೇವೆ. ನಿಮ್ಮನ್ನು ಪ್ರತಿಪಕ್ಷದಲ್ಲೇ ಕೂರಿಸುತ್ತೇವೆ ಎಂದ ತಿರುಗೇಟು ನೀಡಿದರು.

ಬಿಎಸ್​ವೈ ಹೇಳಿಕೆಗೆ ಮತ್ತೆ ಕೌಂಟರ್ ನೀಡಿದ ಸಿದ್ದರಾಮಯ್ಯ, ಯಡಿಯೂರಪ್ಪಗೆ ವಯಸ್ಸಾಯ್ತು ಅಂತಾ ಕೆಳಗಿಳಿಸಿದ್ರು. ಅವರು ಸಿಎಂ ಆದಾಗಲೇ 75 ವರ್ಷ ಆಗಿತ್ತು. ಅವರನ್ನು ಬಲವಂತದಿಂದ ಇಳಿಸಿದ್ದು ಅಲ್ವೇ ಎಂದು ಕಾಲೆಳೆದರು. ಈ ವೇಳೆ ಎರಡೂ ಕಡೆ ಮಾತಿನ ವಾಗ್ದಾಳಿ ಸಹ ನಡೆಯಿತು.

ಓದಿ:ಕರ್ನಾಟಕ ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ 2021 ಪರಿಷತ್​​​ನಲ್ಲಿ ಅಂಗೀಕಾರ

ABOUT THE AUTHOR

...view details