ಕರ್ನಾಟಕ

karnataka

ಮುಂಬರುವ ಚುನಾವಣೆಗೆ ತಾರಾ ಮೆರುಗು ನೀಡಲು ಕಾಂಗ್ರೆಸ್ ಯತ್ನ.. ಸಿಗಲಿದೆಯಾ ಯಶಸ್ಸು?

By

Published : Jan 23, 2023, 5:48 PM IST

Updated : Jan 23, 2023, 5:56 PM IST

Congress Leaders Invite Actor Kiccha Sudeep To Politics

ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಇದರ ಬೆನ್ನಲ್ಲೇ ನಟ ಕಿಚ್ಚ ಸುದೀಪ್ ಅವರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಬೆಂಗಳೂರು:ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್​​ ಅವರನ್ನು ಕಾಂಗ್ರೆಸ್ ತ​​ನ್ನತ್ತ ಸೆಳೆಯುವ ಪ್ರಯತ್ನ ನಡೆಸಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕೈ ಪಾಳಯ ತಾರಾ ಮೆರುಗು ನೀಡಲು ಹೊರಟಿದೆಯಾ ಎನ್ನುವ ಅನುಮಾನ ಶುರುವಾಗಿದೆ.

ತೆರೆಮರೆಗೆ ಸರಿಯುತ್ತಿರುವ ಸಚಿವೆಯರು: ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿರುವ ಮಾಜಿ ಸಚಿವೆಯರಾದ ಉಮಾಶ್ರಿ, ಡಾ. ಜಯಮಾಲಾ ನಿಧಾನವಾಗಿ ತೆರೆಮರೆಗೆ ಸರಿಯುತ್ತಿದ್ದಾರೆ. ಜಯಮಾಲಾ ವಿಧಾನ ಪರಿಷತ್ ಸದಸ್ಯತ್ವದಿಂದ ದೂರವಾದ ಬಳಿಕ ಕಾಂಗ್ರೆಸ್ ಪಾಳಯದಲ್ಲಿ ಅಷ್ಟಾಗಿ ಚುರುಕಾಗಿ ಓಡಾಡಿಕೊಂಡಿಲ್ಲ. ಮಾಜಿ ಸಚಿವೆ ಉಮಾಶ್ರಿ ಅವರಿಗೆ 'ನಾ ನಾಯಕಿ' ಕಾರ್ಯಕ್ರಮದ ಜವಾಬ್ದಾರಿ ನೀಡಿದ್ದರಿಂದ ಕೊಂಚ ಓಡಾಡಿಕೊಂಡಿದ್ದರು. ತೇರದಾಳ ಕ್ಷೇತ್ರದಿಂದ ಟಿಕೆಟ್ ಬಯಸುತ್ತಿರುವ ಅವರಿಗೆ ಇದುವರೆಗೂ ಯಾವುದೇ ಭರವಸೆ ಸಿಕ್ಕಿಲ್ಲ.

ಪಕ್ಷ ಸೇರ್ಪಡೆ ಸಾಧ್ಯತೆ ಕಡಿಮೆ: ಮುಖ್ಯಮಂತ್ರಿ ಚಂದ್ರು ಅವರಂತೂ ಕೈ ಬಿಟ್ಟು ಪೊರಕೆ ಹಿಡಿದಿದ್ದಾರೆ. ನಟ ಯಶ್ ಹಾಗೂ ದರ್ಶನ್ ಕಳೆದ ಲೋಕಸಭೆ ಚುನಾವಣೆ ವೇಳೆ ಪಕ್ಷೇತರ ಸದಸ್ಯೆ ಡಾ. ಸುಮಲತಾ ಪರ ಪ್ರಚಾರ ಮಾಡಿದ್ದರು. ಈ ಬಾರಿ ಅವರು ರಾಜಕೀಯವಾಗಿ ಯಾವ ಪಕ್ಷಕ್ಕೆ ಪ್ರಚಾರ ನಡೆಸಲು ಒಪ್ಪಲಿದ್ದಾರೆ ಎನ್ನುವುದು ತಿಳಿದಿಲ್ಲ. ಆದರೆ ರಾಜಕೀಯ ಪಕ್ಷ ಸೇರ್ಪಡೆಯಾಗುವ ಸಾಧ್ಯತೆ ಬಹಳ ಕಡಿಮೆ.

ತಾರಾ ಮೆರುಗು:ಪಕ್ಷಕ್ಕೆ ಮತ್ತೊಮ್ಮೆ ತಾರಾ ಮೆರುಗು ನೀಡುವ ಕಾಂಗ್ರೆಸ್ ಪ್ರಯತ್ನಕ್ಕೆ ಸಣ್ಣ ಮಟ್ಟದ ಯಶಸ್ಸು ಈಗಾಗಲೇ ಲಭಿಸಿದೆ. ಜನಪ್ರಿಯ ಹಾಸ್ಯ ನಟ ಸಾಧು ಕೋಕಿಲಾ ಹಾಗೂ ನಟ, ನಿರ್ಮಾಪಕ, ನಿರ್ದೇಶಕ ಎಸ್. ನಾರಾಯಣ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ನಾರಾಯಣ್ ಈಗಾಗಲೇ ರಾಜಾಜಿನಗರದಿಂದ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಸಹ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಇನ್ನು ಕೆಲ ನಟರು ಸೇರುವ ಸಾಧ್ಯತೆ ಇದೆ. ಆದರೆ ಇವರ ಆಗಮನದಿಂದ ಕಾಂಗ್ರೆಸ್ ಪಕ್ಷಕ್ಕೆ ತಾರಾ ಮೆರುಗು ಬರುವುದು ಕಷ್ಟಸಾಧ್ಯ. ಇದರಿಂದ ಜನಪ್ರಿಯ ನಟರೊಬ್ಬರಿಗೆ ಗಾಳ ಹಾಕಲು ಕೈ ಕಸರತ್ತು ನಡೆಸಿದೆ.

ನಟ ಸುದೀಪ್​​

ಸುದೀಪ್‌ಗೆ ಗಾಳ: ಇತ್ತೀಚಿನ ದಿನಗಳಲ್ಲಿ ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಮಿಂಚುತ್ತಿರುವ ನಟ ಸುದೀಪ್​​ ಅವರನ್ನು ಪಕ್ಷಕ್ಕೆ ಸೆಳೆದರೆ ದೊಡ್ಡ ಮಟ್ಟದ ಮತ ಬ್ಯಾಂಕ್ ಕಲೆ ಹಾಕಬಹುದು. ರಾಜ್ಯದ ವಿವಿಧ ವಿಧಾನಸಭೆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ಮಾಡುತ್ತಿದ್ದಾರೆ ಎನ್ನಲಾಗಿದೆ.

ಸುದೀಪ್ ಹಿಂದೇಟು?:ರಾಜಕೀಯ ರಂಗ ಪ್ರವೇಶಿಸಿ ಚಿತ್ರರಂಗದಲ್ಲಿ ಜನಪ್ರಿಯತೆ ಕಳೆದುಕೊಂಡ ಹಾಗೂ ಯಶಸ್ವಿಯಾಗದ ಹಲವು ನಟ - ನಟಿಯರನ್ನು ಕಂಡಿರುವ ಸುದೀಪ್ ರಾಜಕೀಯ ಪ್ರವೇಶಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಅತ್ಯಂತ ಜನಪ್ರಿಯರಾಗಿರುವ ಇವರು ಒಮ್ಮೆಲೆ ರಾಜಕೀಯಕ್ಕೆ ಧುಮುಕಿ ಭವಿಷ್ಯ ಕಂಡುಕೊಳ್ಳಲು ಬಯಸುತ್ತಿಲ್ಲ.

ಸದ್ಯ ತಮ್ಮ ಜನಪ್ರಿಯತೆಯ ಅರಿವಿರುವ ಅವರು ಕಾಂಗ್ರೆಸ್ ಸೇರಲು ಉತ್ಸಾಹ ತೋರುತ್ತಿಲ್ಲ. ರಾಜಕೀಯಕ್ಕೆ ಸೇರಿ ತಮ್ಮ ವೀಕ್ಷಕರನ್ನು, ಅಭಿಮಾನಿಗಳನ್ನು ಸೀಮಿತಗೊಳಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರಿಗೆ ಹೇಳಿಕೊಂಡಿದ್ದಾರಾದರೂ, ಕೈ ನಾಯಕರು ಬಿಡಲು ಸಿದ್ಧರಿಲ್ಲ. ಮನವೊಲಿಸುವ ಕಸರತ್ತು ನಡೆಸುತ್ತಿದ್ದಾರೆ.

ನಾಲ್ಕಾರು ಸಾರಿ ಮಾತುಕತೆ:ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮೂಲಕ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಸುದೀಪ್​​ ಅವರನ್ನು ಸೆಳೆಯುವ ಯತ್ನ ನಡೆಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ರೆಡ್ಡಿ ಅವರನ್ನು ನಾಲ್ಕಾರು ಸಾರಿ ಮಾತುಕತೆಗೆ ಸುದೀಪ್ ಬಳಿ ಕಳುಹಿಸಿಕೊಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೆಗಲಿಗೆ ಪಕ್ಷವನ್ನು ಗೆಲ್ಲಿಸುವ ಜವಾಬ್ದಾರಿ ಇದ್ದು, ಇದಕ್ಕೆ ತಾರಾ ಮೆರುಗು ಪೂರಕವಾಗಲಿದೆ ಎನ್ನುವ ಆಶಯ ಅವರದ್ದು. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದಾರೆ.

ಜನಪ್ರಿಯ ನಟರನ್ನು ಕರೆಸಿ ಪ್ರಚಾರ: ಮುಂಬರುವ ವಿಧಾನಸಭೆ ಚುನಾವಣೆ ವೇಳೆ ಗಡಿ ಜಿಲ್ಲೆಗಳಲ್ಲಿ ಪಕ್ಕದ ರಾಜ್ಯದ ಜನಪ್ರಿಯ ನಟರನ್ನು ಕರೆಸಿ ಕಾಂಗ್ರೆಸ್ ಪರ ಪ್ರಚಾರ ನಡೆಸುವ ಚಿಂತನೆಯ ಜತೆ ಪಕ್ಷದೊಳಗೂ ಕೆಲ ಉತ್ತಮ ನಾಯಕರನ್ನು ಹೊಂದಬೇಕೆಂಬ ಹಂಬಲ ಹೊತ್ತಿದ್ದಾರೆ.

ಸುದೀಪ್ ಅವರನ್ನು ಸಂಪರ್ಕಿಸಿದ್ದು ನಿಜ: "ಕಾಂಗ್ರೆಸ್ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತ. ಪಕ್ಷದ ವರ್ಚಸ್ಸು ಹೆಚ್ಚಿಸುವ ನಟ ಸುದೀಪ್ ಬಂದರೆ ಪಕ್ಷಕ್ಕೆ ಹೊಸ ಹಾಗೂ ಯುವ ಇಮೇಜ್ ದೊರಕಲಿದೆ. ಸುದೀಪ್ ಒಬ್ಬ ಜನಪ್ರಿಯ ನಟ. ಇವರು ಕಾಂಗ್ರೆಸ್ ಗೆ ಬಂದರೆ ಪಕ್ಷದ ಬಲವರ್ಧನೆ ಆಗಲಿದೆ. ಹೀಗಿರುವಾಗ ಆಸಕ್ತರನ್ನು ಆಹ್ವಾನಿಸುವುದರಲ್ಲಿ ತಪ್ಪೇನಿದೆ. ಸುದೀಪ್ ಕಾಂಗ್ರೆಸ್ ಸೇರುವುದಾದರೆ ಸ್ವಾಗತ. ನಮ್ಮ ನಾಯಕರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಸುದೀಪ್ ಅವರನ್ನು ಸಂಪರ್ಕಿಸಿದ್ದು ನಿಜ. ಇದುವರೆಗೂ ಅವರಿಂದ ಸೂಕ್ತ ಸ್ಪಂದನೆ ದೊರಕಿಲ್ಲ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೊಬ್ಬರು 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಶಾಸಕ ರಾಮಲಿಂಗ ರೆಡ್ಡಿ ಜೊತೆ ಕಿಚ್ಚ ಸುದೀಪ್ ಮಾತುಕತೆ: ಕುತೂಹಲ

Last Updated :Jan 23, 2023, 5:56 PM IST

ABOUT THE AUTHOR

...view details