ಕರ್ನಾಟಕ

karnataka

ದಲಿತರ ಮೇಲೆ ಕಾಂಗ್ರೆಸ್​ ಸರ್ಕಾರ ದುಷ್ಟದೃಷ್ಟಿ ಬೀರುತ್ತಿದೆ: ಬಸವರಾಜ ಬೊಮ್ಮಾಯಿ

By

Published : Aug 4, 2023, 10:30 PM IST

ಆಶ್ವಾಸನೆಗಳನ್ನು ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್​ ಸರ್ಕಾರ ದಲಿತರ ಕಲ್ಯಾಣದ ವಿಚಾರದಲ್ಲಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ನಗರದ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ
ನಗರದ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ನಗರದ ಫ್ರೀಡಂ ಪಾರ್ಕಿನಲ್ಲಿ ಬಿಜೆಪಿಯಿಂದ ಪ್ರತಿಭಟನೆ

ಬೆಂಗಳೂರು : ದಲಿತರನ್ನು ಮತಬ್ಯಾಂಕ್ ಆಗಿ ಪರಿಗಣಿಸಿದ ಕಾಂಗ್ರೆಸ್ ಸರ್ಕಾರ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಮೀಸಲಿಟ್ಟ ಹಣವನ್ನು ತನ್ನ ಗ್ಯಾರಂಟಿಗಳ ಜಾರಿಗೆ ಬಳಸಿಕೊಳ್ಳುತ್ತಿದೆ. ಇದು ದುಷ್ಟದೃಷ್ಟಿಯ ಸರ್ಕಾರ ಎಂದು ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ದಲಿತರ ಕಲ್ಯಾಣಕ್ಕಾಗಿ ನೀಡಿದ ಅನುದಾನದಲ್ಲಿ 11 ಸಾವಿರ ಕೋಟಿಯನ್ನು ಕಿತ್ತು ಕಾಂಗ್ರೆಸ್ ಸರ್ಕಾರವು ಅವರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವುದನ್ನು ಖಂಡಿಸಿ, ನಗರದ ಫ್ರೀಡಂ ಪಾರ್ಕಿನಲ್ಲಿಂದು ಬಿಜೆಪಿಯ ರಾಜ್ಯ ಮತ್ತು ಬೆಂಗಳೂರು ಮಹಾನಗರ ಎಸ್‍ಸಿ ಮೋರ್ಚಾ ವತಿಯಿಂದ ಏರ್ಪಡಿಸಿದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಚುನಾವಣೆಗೂ ಮುನ್ನ ಗ್ಯಾರಂಟಿ ಕೊಟ್ಟಾಗ ಎಸ್​ಸಿ, ಎಸ್​ಟಿ-ಟಿಎಸ್​ಪಿ​ಯ ಹಣವನ್ನು ಗ್ಯಾರಂಟಿಗಾಗಿ ಬಳಸುವುದಾಗಿ ತಿಳಿಸಬೇಕಿತ್ತು. ಆದರೆ, ಅದನ್ನು ಮಾಡದೇ ಮೋಸ ಮಾಡುತ್ತಿದ್ದಾರೆ ಎಂದರು.

34 ಸಾವಿರ ಕೋಟಿಯಲ್ಲಿ 11 ಸಾವಿರ ತೆಗೆದರೆ 23 ಸಾವಿರ ಕೋಟಿ ಮಾತ್ರ ವಿನಿಯೋಗ ಆಗಲಿದೆ. ಗೃಹಿಣಿಯರಿಗೆ 2 ಸಾವಿರ ರೂಪಾಯಿ ವಿಚಾರಕ್ಕೆ 5,500 ಕೋಟಿಯನ್ನು ಎಸ್.ಸಿ. ಎಸ್.ಟಿ.-ಟಿ.ಎಸ್.ಪಿ.ಯಿಂದ ನೀಡಿದ್ದಾರೆ. 11 ಸಾವಿರ ಕೋಟಿಯಿಂದ ದಲಿತರ ಅಭಿವೃದ್ಧಿ ಸಾಧ್ಯವಿತ್ತು. ದಲಿತರಿಗೆ ಮನೆ, ಹಾಸ್ಟೆಲ್, ವಿದ್ಯಾರ್ಥಿಗಳಿಗೆ ಶಿಕ್ಷಣ, ಜಾಗ ಖರೀದಿಗೆ ಅದನ್ನು ಬಳಸಬಹುದಿತ್ತು.

ನಾವು 5 ಮೆಗಾ ಹಾಸ್ಟೆಲ್ ನಿರ್ಮಿಸಿದ್ದೇವೆ. ಬಾಬು ಜಗಜೀವನ್‍ರಾಂ ಹೆಸರಿನ ನಮ್ಮ ಯೋಜನೆಗಳನ್ನು ಗಾಳಿಗೆ ತೂರಿದ್ದೀರಿ. ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ 75 ಯೂನಿಟ್ ಉಚಿತ ವಿದ್ಯುತ್ ಕೊಡುವ ಯೋಜನೆ ಜಾರಿ ವಿಚಾರದಲ್ಲೂ ಅನ್ಯಾಯ ಆಗಿದೆ ಎಂದು ತಿಳಿಸಿದರು. ನಿಮಗೆ ಬದ್ಧತೆ ಇದ್ದರೆ 7 ಡಿ ಕ್ಲಾಸ್ ತೆಗೆಯಬೇಕಿತ್ತು ಎಂದು ತಿಳಿಸಿದರು.

ಗೋಹತ್ಯೆ ನಿಷೇಧ ರದ್ದತಿ, ಮತಾಂತರ ನಿಷೇಧ ರದ್ದತಿಗೆ ನಿಮಗೆ ಸಮಯವಿದೆ. ದಲಿತರ ಪರವಾಗಿ 7 ಡಿ ರದ್ದತಿ ಘೋಷಣೆಯಾಗಿಯೇ ಉಳಿದಿದೆ. ದೋಖಾ ಮಾಡುವ, ದ್ರೋಹದ ಯೋಜನೆ ನಿಮ್ಮದಾಗಿತ್ತು. ನಿಮ್ಮ ಬಣ್ಣ ಬಯಲಾಗಿದೆ. ದಲಿತರ ಪರ ನಿಲ್ಲಲು ನಿಮಗೆ ಬೆನ್ನೆಲುಬಿಲ್ಲವೇ? ದಲಿತರ ಪರ ಧ್ವನಿ ಇಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿಗೆ ಬೇರೆ ಕಡೆಯಿಂದ ಹಣ ಹೊಂದಿಸಿ:ಗೃಹ ಲಕ್ಷ್ಮಿ ಸೇರಿ ವಿವಿಧ ಯೋಜನೆಗಳಲ್ಲಿ ಭ್ರಷ್ಟಾಚಾರ ಮಾಡಲಾಗುತ್ತಿದೆ. ಯುವಕರು, ಮಹಿಳೆಯರಿಗೆ ಮೋಸ ಮಾಡಿದ್ದು, ರೈತರನ್ನು ತುಳಿದುಹಾಕಿದ್ದಾರೆ. ರೈತ ವಿದ್ಯಾನಿಧಿ ಬಂದ್ ಆಗಿದೆ. ಕಿಸಾನ್ ಸಮ್ಮಾನ್ 4 ಸಾವಿರ ಹಣ ರದ್ದಾಗಿದೆ. ರೈತರು, ಮಹಿಳೆಯರು, ದಲಿತರು, ವಿದ್ಯಾರ್ಥಿಗಳ ವಿರೋಧಿ ಸರ್ಕಾರ ಇಲ್ಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. 11 ಸಾವಿರ ಕೋಟಿ ರೂಪಾಯಿಯನ್ನು ಮತ್ತೆ ಅದೇ ಖಾತೆಗೆ ಕೊಡಿ. ಗ್ಯಾರಂಟಿಗೆ ಬೇರೆ ಕಡೆಯಿಂದ ಹಣ ಹೊಂದಿಸಿ ಎಂದು ಆಗ್ರಹಿಸಿದರು.

ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಎಸ್.ಸಿ. ಎಸ್.ಟಿ.-ಟಿ.ಎಸ್.ಪಿ.ಯ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ನೀಡಲು ವರ್ಗಾಯಿಸಿದ್ದು ಖಂಡನೀಯ. 11 ಸಾವಿರ ಕೋಟಿಯನ್ನು ಗ್ಯಾರಂಟಿಗೆ ಕೊಡುವುದಾಗಿ ಮಹದೇವಪ್ಪ, ಪ್ರಿಯಾಂಕ್ ಖರ್ಗೆಯವರ ಉಪಸ್ಥಿತಿಯಲ್ಲೇ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಇದೀಗ ಮತ್ತೆ ಆ ವಿಚಾರದಲ್ಲಿ ಸುಳ್ಳು ಹೇಳುತ್ತಿದ್ದಾರೆ. ಗ್ಯಾರಂಟಿ ಕೊಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಕಾಂಗ್ರೆಸ್ಸಿಗರು ಚುನಾವಣೆ ನಂತರ ಗ್ಯಾರಂಟಿ ಲಂಚ ನೀಡುವ ಭರವಸೆ ಕೊಟ್ಟಿದ್ದರು ಎಂದು ಟೀಕಿಸಿದರು.

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಎಸ್‍ಸಿ ಮೋರ್ಚಾ ಪದಾಧಿಕಾರಿಗಳು, ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ:ಶಿಕ್ಷಣಕ್ಕೆ ಸಿಎಸ್​ಆರ್ ಫಂಡ್ ಆಕರ್ಷಿಸಲು ಸಮಾವೇಶ: ಕಾರ್ಪೋರೇಟ್ ಕಂಪನಿಗಳ ಜೊತೆ ಇಂದು ಸಿಎಂ ಸಂವಾದ

ABOUT THE AUTHOR

...view details