ಕರ್ನಾಟಕ

karnataka

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಜ್ಯಪಾಲರ ಮೂಲಕ ಕಾಂಗ್ರೆಸ್ ಮನವಿ

By

Published : Nov 25, 2021, 11:40 PM IST

ಕಾಂಗ್ರೆಸ್ ಪಕ್ಷದ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಮನವಿ ಪತ್ರ ಸಲ್ಲಿಸಿದೆ.

Congress delegation meets governor
ರಾಜ್ಯಪಾಲರನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ

ಬೆಂಗಳೂರು:ಇಂದು ಕಾಂಗ್ರೆಸ್ ಪಕ್ಷದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಮನವಿ ಪತ್ರ ಸಲ್ಲಿಕೆ ಮಾಡಿತು.

ರಾಜ್ಯಪಾಲರ ಭೇಟಿ ಬಳಿಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ನ.19 ಹಾಗೂ 20 ರಂದು ಪತ್ರಿಕೆಗಳಲ್ಲಿ ವರದಿಯೊಂದು ಬಂದಿತ್ತು. ಆ ವರದಿಯಲ್ಲಿ ಸರ್ಕಾರಿ ಕಾಮಗಾರಿಗಳ ಅಂದಾಜು ವೆಚ್ಚದಲ್ಲಿ ಸುಮಾರು 40% ಅನ್ನು ಸರ್ಕಾರದ ಸಚಿವರು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಕಮಿಷನ್ ರೂಪದಲ್ಲಿ ನೀಡಬೇಕು ಎಂದು ಗುತ್ತಿದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಹಾಗೂ ಸಂಘದ ಲಕ್ಷಕ್ಕೂ ಅಧಿಕ ಸದಸ್ಯರು ಪ್ರಧಾನಿಗಳಿಗೆ ಜು.6ರಂದು ಪತ್ರ ಬರೆದಿದ್ದಾರೆ. ರಾಜ್ಯದ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರಲಿಲ್ಲ. ಗುತ್ತಿದಾರರ ಸಂಘದ ಅಧ್ಯಕ್ಷರು ಇವತ್ತಿನವರೆಗೆ ಹೀಗೆ ಸಚಿವರು, ಸಂಸದರು, ಶಾಸಕರು ಹಾಗೂ ಅಧಿಕಾರಿಗಳಿಗೆ 40% ಕಮಿಷನ್ ಹಣ ನೀಡಲೇಬೇಕಾಗಿದೆ ಎಂದು ಪ್ರಧಾನಿಗಳಿಗೆ ಪತ್ರದ ಮೂಲಕ ದೂರು ನೀಡಿರಲಿಲ್ಲ. ಗುತ್ತಿದಾರರು ಕಮಿಷನ್ ಜೊತೆಗೆ ಜಿಎಸ್‌ಟಿ ಕಟ್ಟಬೇಕು. ಡೆಪಾಸಿಟ್ ಇಡಬೇಕು. ಆದಾಯ ತೆರಿಗೆ ಪಾವತಿಸಬೇಕು. ಅಂದರೆ ನೂರಕ್ಕೆ ಶೇ. 70 ರಷ್ಟು ಹಣ ಬೇರೆ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿದೆ ಎಂದರು.

ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಒಮ್ಮೆ ಭಾಷಣ ಮಾಡುವಾಗ ಇಲ್ಲಿನದು 10% ಸರ್ಕಾರ ಎಂದು ಕರೆದಿದ್ದರು. ಅವರ ಹೇಳಿಕೆಗೆ ಯಾವ ಆಧಾರಗಳೂ ಇರಲಿಲ್ಲ. ಆದರೆ ಈಗ ನೀಡಿರುವ ಮನವಿಯಲ್ಲಿ ಕೆಂಪಣ್ಣನವರು ಬರೆದಿರುವ ಪತ್ರ ಹಾಗೂ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯನ್ನು ನೀಡಿದ್ದೇವೆ. ಇದು ಭ್ರಷ್ಟಾಚಾರ ಹಾಗೂ ಹಣದ ಅಕ್ರಮ ವರ್ಗಾವಣೆ ಪ್ರಕರಣವಾಗುತ್ತದೆ. ಬಿಡಿಎ ಮೇಲೆ ಎಸಿಬಿ ರೈಡ್ ಮಾಡಿ ಸುಮಾರು ರೂ. 300 ಕೋಟಿ ನಷ್ಟವಾಗಿದೆ ಎಂದು ವರದಿ ನೀಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಹಾಗಾಗಿ ಈ ಸರ್ಕಾರಕ್ಕೆ ಸಂವಿಧಾನಾತ್ಮಕವಾಗಿ ಆಡಳಿತ ನಡೆಸುವ ಯಾವ ನೈತಿಕ ಹಕ್ಕಿಲ್ಲ. ರಾಜ್ಯದಲ್ಲಿ 356ನೇ ವಿಧಿಯನ್ನು ಜಾರಿಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

ರಾಜ್ಯದಲ್ಲಿ ಸಂವಿಧಾನ, ಕಾನೂನು ಕುಸಿದು ಬಿದ್ದಿದೆ. ಹಾಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂಬುದು ನಮ್ಮ ಮನವಿ. ಸುಪ್ರೀಂ ಕೋರ್ಟಿನ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ಸಮಿತಿ ರಚಿಸಿ ಅದರ ಮೂಲಕ ತನಿಖೆಯಾಗಬೇಕು ಎಂಬುದು ನಮ್ಮ ಇನ್ನೊಂದು ಮನವಿಯಾಗಿದೆ. ಪ್ರಧಾನಿಗೆ ಬರೆದ ಪತ್ರದಲ್ಲಿ ನಿರ್ದಿಷ್ಟ ಹೆಸರನ್ನು ಉಲ್ಲೇಖ ಮಾಡದಿದ್ದರು ಸಚಿವರು, ಸಂಸದರು, ಇಲಾಖೆಯ ಮುಖ್ಯ ಅಧಿಕಾರಿಗಳು ಎಂದು ಹೇಳಲಾಗಿದೆ. ಇಷ್ಟು ಸಾಕಾಗಲ್ವ? ಲೋಕೋಪಯೋಗಿ ಇಲಾಖೆ, ಸಣ್ಣ ಹಾಗೂ ಬೃಹತ್ ನೀರಾವರಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ, ಬಿಬಿಎಂಪಿ ಇಲಾಖೆಯನ್ನು ಹೆಸರಿಸಿದ್ದಾರೆ. ಇನ್ನೇನು ಹೇಳಬೇಕು ಎಂದರು.

ರಾಜ್ಯಪಾಲರನ್ನು ಭೇಟಿಯಾದ ನಿಯೋಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಮಾಜಿ ಸಚಿವ ಕೃಷ್ಣ ಬೈರೇಗೌಡ, ಮಾಜಿ ಸಂಸದ ವಿಎಸ್ ಉಗ್ರಪ್ಪ, ಶಾಸಕ ಅಜಯ್ ಸಿಂಗ್ ಮತ್ತಿತರರು ಇದ್ದರು.

ಇದನ್ನೂ ಓದಿ: ಸಿಬಿ ದಾಳಿ ಪ್ರಕರಣ: ಭ್ರಷ್ಟ ಅಧಿಕಾರಿಗಳ ಬಳಿ ಶೇ. 800, 550, 400 ರಷ್ಟು ಅಧಿಕ ಅಕ್ರಮ ಆಸ್ತಿ ಪತ್ತೆ!

ABOUT THE AUTHOR

...view details