ಕರ್ನಾಟಕ

karnataka

ಗ್ರಾಹಕರಿಗೆ ಶಾಕ್​... Milk Price Hike: ಆಗಸ್ಟ್ 1ರಿಂದ ಪ್ರತಿ ಲೀಟರ್ ನಂದಿನಿ ಹಾಲಿನ ದರ 3 ರೂ. ಹೆಚ್ಚಳ

By

Published : Jul 21, 2023, 10:49 PM IST

ನಂದಿನಿ ಹಾಲಿನ ದರ ಪ್ರತಿ ಲೀಟರ್​ಗೆ 3 ರೂಪಾಯಿ ಹೆಚ್ಚಳ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಎಂಎಫ್‌ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

cm-siddaramaiah-meeting-with-kmf-officials-on-milk-price-hike
Milk Price Hike: ಆಗಸ್ಟ್ 1ರಿಂದ ಪ್ರತಿ ಲೀಟರ್ ನಂದಿನಿ ಹಾಲಿನ ದರ 3 ರೂ. ಹೆಚ್ಚಳ

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ರಾಜ್ಯದಲ್ಲಿನ ಎಲ್ಲ ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್‌ ಅಧ್ಯಕ್ಷರ ಸಭೆ ನಡೆಸಿದರು. ಪ್ರತಿ ಲೀಟರ್ ಹಾಲಿಗೆ ಕನಿಷ್ಠ ಮೂರು ರೂ. ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಆಗಸ್ಟ್ ಒಂದರಿಂದ ಜಾರಿಯಾಗುವಂತೆ ಹಾಲಿನ ದರ ಹೆಚ್ಚಳ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾಲು ಒಕ್ಕೂಟಗಳು ಹಾಗೂ ಕೆಎಂಎಫ್‌ ಅಧ್ಯಕ್ಷರ ಜೊತೆ ಸಿಎಂ ಸಭೆ

ಕಳೆದ ತಿಂಗಳು ಕೆಎಂಎಫ್ ಅಧ್ಯಕ್ಷರಾಗಿ ಶಾಸಕ ಭೀಮಾ ನಾಯಕ್ ಆಯ್ಕೆಯಾಗಿದ್ದು, ಅಂದೇ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ಐದು ರೂಪಾಯಿ ಹೆಚ್ಚಳ ಮಾಡುವ ಘೋಷಣೆ ಮಾಡಿದ್ದರು. ಹಾಲಿನ ದರ ಹೆಚ್ಚಳ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸುವುದಾಗಿಯೂ ತಿಳಿಸಿದ್ದರು. ವಿಧಾನಸಭೆ ಬಜೆಟ್ ಅಧಿವೇಶನ ಹಿನ್ನೆಲೆ 15 ದಿನ ಮುಂದಕ್ಕೆ ಹೋದ ಸಭೆ ಶುಕ್ರವಾರ ನಡೆದಿದೆ. ಹಾಲನ್ನು ಕೊಳ್ಳುವ ಗ್ರಾಹಕರನ್ನು ಸಹ ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ 3 ರೂ. ಹೆಚ್ಚಳಕ್ಕೆ ಸಮ್ಮತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ಒಂದರಿಂದ ಹಾಲಿನ ದರ ಹೆಚ್ಚಳವಾಗಲಿದ್ದು, 5ರ ಬದಲು 3 ರೂ.ಗೆ ಒಪ್ಪಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಹಾಲು ಖರೀದಿಸುವ ರೈತರಿಗೆ ನೀಡುತ್ತಿರುವ ಸಹಾಯಧನವನ್ನು 5 ರೂಪಾಯಿಯಿಂದ 7 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಲಾಗಿತ್ತು. ಈ ಹೆಚ್ಚಳ ಮಾಡುವುದಕ್ಕೆ ಹಾಲಿನ ಮಾರಾಟದ ಬೆಲೆ ಏರಿಕೆ ಅನಿವಾರ್ಯ ಎಂದು ಕೆಎಂಎಫ್ ಅಭಿಪ್ರಾಯಪಟ್ಟಿತ್ತು. ಇದೇ ರೀತಿ ಕೆಎಂಎಫ್​ಗೆ ನಷ್ಟವಾಗದ ರೀತಿ ಹಾಗೂ ರೈತರಿಗೂ ಹೆಚ್ಚುವರಿ ಸಹಾಯಧನ ಸಿಗುವಂತೆ ಮಾಡಲು ಹಾಲಿನ ದರ ಏರಿಕೆ ಮಾತ್ರ ಮಾರ್ಗವಾಗಿತ್ತು.

ಜನರು ಕಳೆದ ಕೆಲ ವರ್ಷಗಳಿಂದ ಬೆಲೆ ಏರಿಕೆಯಿಂದ ತತ್ತರಿಸಿದ್ದು, ಹಾಲಿನ ಬೆಲೆ ವಿಪರೀತ ಹೆಚ್ಚಳವಾದರೆ ಇನ್ನಷ್ಟು ಹೊರೆ ಆಗಲಿದೆ. ಆದ್ದರಿಂದ ದರ ಹೆಚ್ಚಳವನ್ನು ಮಿತಿಗೊಳಿಸಿ ಮೂರು ರೂ.ಗೆ ಸೀಮಿತ ಮಾಡಿ ಆದೇಶ ಹೊರಡಿಸುವಂತೆ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಎಲ್ಲಾ ಸಾಧಕ ಬಾದಕಗಳ ಪರಿಶೀಲನೆ ಬಳಿಕ ಇಂದು ಅಂತಿಮ ಹಂತದ ಸಭೆಯು ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದಿದೆ. ಹಾಲಿನ ದರ ಹೆಚ್ಚಳ ಅನಿವಾರ್ಯ ಹಾಗೂ ಅದು ಗ್ರಾಹಕರಿಗೆ ಹೊರೆಯಾಗದ ರೀತಿ ಮಾಡಲು ತೀರ್ಮಾನಿಸಲಾಗಿದೆ.

ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ಮಾರಾಟ ಬೆಲೆ ಕಡಿಮೆ ಇದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದ್ದು, ಇದರ ಜೊತೆಗೆ ರೈತರಿಗೆ ನೀಡುವ ಬೆಲೆ ಸಹ ಕಡಿಮೆ ಆಗಿದೆ. ರಾಜ್ಯದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಹಾಲಿನ ಸಂಗ್ರಹ ಪ್ರಮಾಣ ಸಹ ಕುಸಿಯುತ್ತಿದೆ. ರೈತರಿಗೆ ಹೆಚ್ಚಿನ ಸಹಾಯಧನ ಲಭಿಸಿದರೆ ಹೈನು ಉದ್ಯಮ ಇನ್ನಷ್ಟು ಚೇತರಿಸಿಕೊಳ್ಳಲಿದೆ ಎಂಬುದು ಸರ್ಕಾರದ ಆಶಯವಾಗಿದೆ.

ಸಭೆಯಲ್ಲಿ ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್‌ ಪ್ರಸಾದ್‌, ಪಶುಸಂಗೋಪನಾ ಇಲಾಖೆ ಕಾರ್ಯದರ್ಶಿ ಸಲ್ಮಾ ಫಾಹಿಂ, ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಜಗದೀಶ್‌, ಕೆಎಂಎಫ್ ನಿರ್ದೇಶಕ ಹೆಚ್.ಡಿ.ರೇವಣ್ಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಮಾಲೂರು ಶಾಸಕ ನಂಜೇಗೌಡರು ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ವನ್ಯಜೀವಿಗಳಿಂದ ಜೀವಹಾನಿ: ತಕ್ಷಣ ಪರಿಹಾರಕ್ಕೆ ಸಚಿವ ಖಂಡ್ರೆ ಸೂಚನೆ

ABOUT THE AUTHOR

...view details