ಕರ್ನಾಟಕ

karnataka

ಕಿತ್ತೂರು ಚೆನ್ನಮ್ಮ, ಟಿಪ್ಪು ಸುಲ್ತಾನ್​ ಸ್ವಾಭಿಮಾನದ ಹೋರಾಟ ನಮ್ಮೆಲ್ಲರಿಗೆ ಸ್ಫೂರ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ

By ETV Bharat Karnataka Team

Published : Oct 13, 2023, 1:02 PM IST

Updated : Oct 13, 2023, 1:49 PM IST

ಸಿಎಂ ಸಿದ್ದರಾಮಯ್ಯ ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವ-2023ರ ವೀರ ವಿಜಯ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು :ಕಿತ್ತೂರು ರಾಣಿ ಚೆನ್ನಮ್ಮ, ಟಿಪ್ಪು ಸುಲ್ತಾನ್​​ ಸ್ವಾಭಿಮಾನಿ ಹೋರಾಟದ ಸ್ಫೂರ್ತಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಳಗಾವಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವ-2023ರನ್ನು ಆಯೋಜಿಸಿದ್ದು, ಪೂರ್ವಭಾವಿಯಾಗಿ ಕಿತ್ತೂರು ಚೆನ್ನಮ್ಮಾಜಿಯ ವೀರ ವಿಜಯ ಜ್ಯೋತಿ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಚೆನ್ನಮ್ಮನ ಕಿತ್ತೂರು ಉತ್ಸವದ ಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಿತ್ತೂರು ಚೆನ್ನಮ್ಮ ತನ್ನ ಸಣ್ಣ ಸೈನ್ಯದಿಂದ ಬ್ರಿಟಿಷರ ಬೃಹತ್ ಸೈನ್ಯಕ್ಕೆ ಸೆಡ್ಡು ಹೊಡೆದ ಧೀಮಂತ ರಾಣಿ. ಇವರ ಧೈರ್ಯ ಮತ್ತು ಆದರ್ಶ ಯುವ ಸಮೂಹವನ್ನು, ಇವತ್ತಿನ ಪೀಳಿಗೆಯನ್ನು ತಲುಪಬೇಕು ಎನ್ನುವ ಕಾರಣಕ್ಕೆ ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ಕಿತ್ತೂರು ಉತ್ಸವ ಮತ್ತು ಜಯಂತ್ಯುತ್ಸವವನ್ನು ಆರಂಭಿಸಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿ, ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ್, ಧಾರವಾಡ ಗ್ರಾಮೀಣ ಶಾಸಕರಾದ ವಿನಯ್ ಕುಲಕರ್ಣಿ, ಬೈಲಹೊಂಗಲ ಶಾಸಕರಾದ ಮಹಂತೇಶ ಕೌಜಲಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಕುರಿತು ವೀರ ಚೆನ್ನಮ್ಮನ ಕುರಿತು ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಕೂಡ ಹಾಕಿಕೊಂಡಿದ್ದಾರೆ.

ನಿಮಗೆಲ್ಲ ತಿಳಿದಿರುವಂತೆ ಕಳೆದ 25 ವರ್ಷಗಳಿಂದ ಉತ್ಸವವನ್ನು ಆಚರಿಸಲಾಗುತ್ತಿದ್ದು, ಈ ಬಾರಿ ಅಕ್ಬೋಬರ್‌ 23ರಿಂದ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಕಿತ್ತೂರು ಉತ್ಸವವನ್ನು ಆಚರಿಸಲಾಗುವುದು. ಉತ್ಸವಕ್ಕೆ ಎಲ್ಲ ಸಿದ್ಧತೆಗಳು ಭರದಿಂದ ಸಾಗಿದೆ. ಇನ್ನೂ ಮೊನ್ನೆ ತಾನೇ ಕಿತ್ತೂರು ಉತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ ಬೆಳಗಾವಿಯಲ್ಲಿ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಅಕ್ಟೋಬರ್​ 4 ರಂದು ನಡೆಸಲಾಗಿತ್ತು.

ಆ ವೇಳೆ ಜಾರಕಿಹೊಳಿ ಮೂರು ದಿನಗಳ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಕನಿಷ್ಠ ಮೂರು ಕೋಟಿ ರೂಪಾಯಿ ಅನುದಾನದ ಅಗತ್ಯವಿದೆ. ಇದಕ್ಕಾಗಿ ಪ್ರಯತ್ನಿಸಲಾಗುವುದು. ಈಗಾಗಲೇ ಐದು ಕೋಟಿ ರೂಪಾಯಿ ನೀಡುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದರು. ಕಿತ್ತೂರು ಚೆನ್ನಮ್ಮ ಉತ್ಸವದಲ್ಲಿ ವೀರ ಹೋರಾಟಗಾರರ ಭಾವಚಿತ್ರಗಳ ಅನಾವರಣ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಇದನ್ನೂ ಓದಿ:ಗುತ್ತಿಗೆದಾರನ ನಿವಾಸದಲ್ಲಿ ಪತ್ತೆಯಾದ ಹಣದ ಬಗ್ಗೆ ಸೂಕ್ತ ತನಿಖೆಯಾಗಬೇಕು: ಅಶ್ವತ್ಥ ನಾರಾಯಣ ಆಗ್ರಹ

Last Updated :Oct 13, 2023, 1:49 PM IST

ABOUT THE AUTHOR

...view details