ಕರ್ನಾಟಕ

karnataka

ದಸರಾದಲ್ಲೂ ಕಮಿಷನ್ ಕಾಟ, ರಾಜ್ಯದ ಮಾನ ಹರಾಜು: ಬಸವರಾಜ ಬೊಮ್ಮಾಯಿ

By ETV Bharat Karnataka Team

Published : Oct 14, 2023, 10:39 PM IST

Updated : Oct 15, 2023, 9:57 AM IST

ಖ್ಯಾತ ಸರೋದ್ ವಾದಕ ಪಂ. ರಾಜೀವ್ ತಾರಾನಾಥ್ ಅವರಿಗೆ ಕಮಿಷನ್ ಕೇಳಿರುವುದು ರಾಜ್ಯದ ಮಾನ ಹರಾಜು ಆಗುವಂತೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್​ ಮಾಡಿದ್ದಾರೆ. ಆದರೆ ದಸರಾ ಕಾರ್ಯಕ್ರಮದ ಸಂಭಾವನೆಯಲ್ಲಿ ಕಮಿಷನ್ ಬೇಡಿಕೆ ಇಡಲಾಗಿದೆ ಎಂಬ ವಿಚಾರವನ್ನು ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅಲ್ಲಗಳೆದಿದ್ದಾರೆ.

ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ

ಬೆಂಗಳೂರು:ವಿಶ್ವ ವಿಖ್ಯಾತ ದಸರಾ ಮಹೋತ್ಸವದಲ್ಲಿ ಖ್ಯಾತ ಸರೋದ್ ವಾದಕ ಪಂ.ರಾಜೀವ್ ತಾರಾನಾಥ್ ಅವರಿಗೆ ಕಾರ್ಯಕ್ರಮ ನೀಡಲು ಕಮಿಷನ್ ಕೇಳಿರುವುದು ರಾಜ್ಯದ ಮಾನ ಹರಾಜು ಆಗುವಂತೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಅಧಿಕಾರಿಗಳ ವರ್ಗಾವಣೆಗೆ, ಕಾಂಟ್ರಾಕ್ಟರ್​ಗಳಿಗೆ ಬಿಲ್ ನೀಡಲು ಕಮಿಷನ್ ಪಡೆಯುತ್ತಿದ್ದ ಈ ಸರ್ಕಾರದ ಕಮಿಷನ್ ದಂಧೆ ವಿಶ್ವ ವಿಖ್ಯಾತ ಮೈಸೂರು ದಸರಾಗೂ ವಿಸ್ತರಿಸಿದ್ದು ನಾಡಿನ ದುರಂತ.

ಖ್ಯಾತ ಸರೋದ್ ವಾದಕ ಪಂ. ರಾಜೀವ್ ತಾರಾನಾಥ್ ಅವರಿಗೆ ದಸರಾದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲು ಅಧಿಕಾರಿಗಳು ಕಮಿಷನ್ ಕೇಳಿದ್ದು ಕರ್ನಾಟಕದ ಮಾನ ಹರಾಜಾಗುವಂತೆ ಮಾಡಿದೆ. ಇಂತ ಅತೀ ಭ್ರಷ್ಟ ಸರ್ಕಾರವನ್ನು ಸ್ವಾತಂತ್ರ ಭಾರತದ ಇತಿಹಾಸಸಲ್ಲಿಯೇ ಕಂಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಖ್ಯಾತ ಸರೋದ್ ವಾದಕ ಪಂ. ರಾಜೀವ್ ತಾರಾನಾಥ್ ಅವರೇ ಕಮಿಷನ್ ಬೇಡಿಕೆಯನ್ನು ಮಾಧ್ಯಮಗಳ ಮೂಲಕ ಬಹಿರಂಗ ಪಡಿಸಿದ್ದು, ಕಮಿಷನ್ ಕೇಳಿದ ಅಧಿಕಾರಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಎನ್​ ರವಿಕುಮಾರ್​ ವಾಗ್ದಾಳಿ:ಇದೆ ವಿಚಾರವಾಗಿ ವಾಗ್ದಾಳಿ ನಡೆಸಿರುವ ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ಕಲಾವಿದರ ಬಳಿಯೂ ಕಮೀಷನ್ ಪಡೆಯುವ ಸರ್ಕಾರವಿದು. ಅಂತವರ ಹತ್ತಿರ ಕಮೀಷನ್ ಕೇಳಿರುವ ಅಧಿಕಾರಿಯನ್ನು ಅಮಾನತು ಮಾಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ರವಿಕುಮಾರ್​ ಆಗ್ರಹಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈಸೂರಿನಲ್ಲಿ ದಸರಾ ನಡೆಯುತ್ತಿದೆ. ಅಂತಾರಾಷ್ಟ್ರೀಯ ಖ್ಯಾತಿಯ ಸಾಂಸ್ಕೃತಿಕ ದಸರಾ. ಇಡೀ ಪ್ರಪಂಚಕ್ಕೆ ಮಾದರಿಯಾದ ದಸರಾ ಮೈಸೂರಿನಲ್ಲಿ ನಡೆಯುತ್ತದೆ.

ಈ ದಸರಾ ಬಹಳ ದೊಡ್ಡ ಹಬ್ಬ. ಇಂತಹ ಕಾರ್ಯಕ್ರಮಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಪಂಡಿತ್ ರಾಜೀವ್ ತಾರಾನಾಥ್ ಗೆ ಆಹ್ವಾನ ನೀಡಿದ್ದಾರೆ. ಇಂತಹ ಕಲಾವಿದರನ್ನ ಕರೆದಾಗ ಗೌರವಧನ ಕೊಡ್ತಾರೆ. ಆದರೆ, ಆ ಹಣ ನಮಗೆ ಕೊಡಬೇಕು ಅಂತ ಹೇಳಿದ್ದಾರೆ. ಈ ಸರ್ಕಾರ ಕಮೀಷನ್ ಕೇಳಿದೆ ಎಂದು ದೂರಿದರು. ನಮ್ಮ ರಾಜ್ಯದಲ್ಲಿ ಹಿಂದುಳಿದ ತಾಲೂಕಿನಲ್ಲಿ ಆಳಂದ ತಾಲೂಕು ಕೂಡ ಒಂದು. ಅಲ್ಲಿನ ಶಾಸಕ ಬಿ ಆರ್ ಪಾಟೀಲ್ ಇದ್ದಾರೆ. ಅವರ ಬಗ್ಗೆ ನಮಗೆ ಗೌರವ ಇದೆ. ಅವರ ಸಂಬಂಧಿಕನೊಬ್ಬ ವರ್ಗಾವಣೆ ದಂಧೆಗೆ ಇಳಿದಿದ್ದಾನೆ. ಬೀದರ್, ಕಲಬುರಗಿ, ಯಾದಗಿರಿ ಹಾಲು ಒಕ್ಕೂಟದಿಂದ 32 ಪೋಸ್ಟಿಂಗ್ ಕರೆಯಲಾಗಿದೆ. 32 ಪೋಸ್ಟಿಗೆ ಸಾವಿರಾರು ಅರ್ಜಿಗಳು ಬಂದಿವೆ. ಎರಡು ಸಾವಿರ ಅರ್ಜಿ ಸ್ವೀಕಾರ ಆಗುತ್ತದೆ. 1,476 ಅರ್ಜಿ ಅನರ್ಹ ಆಗುತ್ತವೆ. 538 ಅರ್ಜಿ ಮಾತ್ರ ಅರ್ಹತೆ ಪಡೆಯುತ್ತವೆ.

ಒಂದೊಂದು ಪೋಸ್ಟಿಗೆ ಲಕ್ಷಾಂತರ ಹಣ ಮೀಸಲಿಟ್ಟಿದ್ದಾರೆ. 37 ಜನರನ್ನು ನೇಮಕ ಮಾಡಿಕೊಂಡಿದ್ದಾರೆ. ಎಲಿಜಿಬಲ್ ಇಲ್ಲದವರನ್ನೂ ನೇಮಕ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸಿಎಂ ಹಾಗೂ ರಾಜ್ಯಪಾಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದರು.

ಶುಕ್ರವಾರ ಐಟಿ ದಾಳಿಯಾಗಿದೆ. 42 ಕೋಟಿ ಹಣ ಸಿಕ್ಕಿದೆ. ಈ ಹಣ ಪಂಚರಾಜ್ಯಗಳ ಚುನಾವಣೆಗೆ ಸಂಗ್ರಹ ಆಗಿರುವ ಹಣ. ಈ 42 ಕೋಟಿ ಹಣ ಯಾವುದು ಅಂತ ಈಗಾಗಲೇ ಹೇಳಿದ್ದೇನೆ. ಕಾಂಟ್ರಾಕ್ಟರ್ಸ್‌ಗೆ ಹಣ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಸಂಗ್ರಹ ಮಾಡಿದ ಎಲೆಕ್ಷನ್ ಕಮೀಷನ್ ಇದು. ಶಿವರಾಮ್ ಕಾರಂತ ಬಡಾವಣೆ ಕಂಟ್ರಾಕ್ಟರ್ಸ್​ಗಳಿಂದ 60 ಕೋಟಿಗಿಂತ ಹೆಚ್ಚು ಹಣ ಸಂಗ್ರಹ ಮಾಡಿ ಈಗಾಗಲೇ ಕಳಿಸಲಾಗಿದೆ. ಹಾಗಂತ ಕಾಂಟ್ರಾಕ್ಟರ್ಸ್ ಮಾತನಾಡ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ಎಲೆಕ್ಷನ್​ನ​ ಕಲೆಕ್ಷನ್ ಸೆಂಟರ್ ಆಗಿದೆ ಎಂದು ಬೊಮ್ಮಾಯಿ ಹರಿಹಾಯ್ದರು.

ಕಮಿಷನ್ ಬೇಡಿಕೆ ಸುಳ್ಳು ಎಂದ ಸಾಂಸ್ಕೃತಿಕ ಉಪ ಸಮಿತಿ:ದಸರಾ ಕಾರ್ಯಕ್ರಮದ ಸಂಭಾವನೆಯಲ್ಲಿ ಕಮಿಷನ್ ಬೇಡಿಕೆ ಇಡಲಾಗಿದೆ ಎಂಬ ವಿಚಾರವನ್ನು ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ಅಲ್ಲಗಳೆದಿದ್ದಾರೆ. ''ತಮ್ಮನ್ನು ಯಾರೂ ಕಮಿಷನ್​ ಕೇಳಿಲ್ಲ, ಯಾರೂ ಸಂಪರ್ಕ ಸಹ ಮಾಡಿಲ್ಲ'' ಎಂದು ಸ್ವತಃ ಅವರೇ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ ಎಂದು ದಸರಾ ಮಹೋತ್ಸವದ ಸಾಂಸ್ಕೃತಿಕ ಉಪಸಮಿತಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ:ಸರೋದ್ ವಾದಕ ರಾಜೀವ್ ತಾರಾನಾಥ್ ಬಳಿ ಕಮೀಷನ್ ಬೇಡಿಕೆ ಸುಳ್ಳು.. ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದ ಸಾಂಸ್ಕೃತಿಕ ಉಪಸಮಿತಿ

Last Updated : Oct 15, 2023, 9:57 AM IST

ABOUT THE AUTHOR

...view details