ಕರ್ನಾಟಕ

karnataka

ಆರಗ ಜ್ಞಾನೇಂದ್ರ ಅವರಿಂದ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

By

Published : Jul 5, 2022, 12:07 PM IST

Updated : Jul 5, 2022, 12:32 PM IST

ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವರ ರಾಜೀನಾಮೆಗೆ ಆಗ್ರಹಿಸಿರುವ ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

cm basavaraja bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದ ಅನುಮಾನ ಬಂದ ಕೂಡಲೇ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದು, ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಅವರಿಂದ ರಾಜೀನಾಮೆ ಪಡೆಯುವ ಪ್ರಶ್ನೆಯೇ ಇಲ್ಲ. ಗೃಹ ಸಚಿವರ ರಾಜೀನಾಮೆ ಕೇಳುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ. ಅವರು(ಕಾಂಗ್ರೆಸ್) ಅಧಿಕಾರದಲ್ಲಿದ್ದಿದ್ದರೆ ಈ ಪ್ರಕರಣವನ್ನು ಮುಚ್ಚಿಹಾಕುತ್ತಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.


ಆರ್.ಟಿ.ನಗರದ ತಮ್ಮ ಖಾಸಗಿ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಐ ಪ್ರಕರಣದಲ್ಲಿ ಗೃಹಸಚಿವರ ರಾಜೀನಾಮೆಗೆ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಆದರೆ ಅವರ ಕಾಲದಲ್ಲೂ ಪಿಎಸ್​ಐ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು. ಹಿರಿಯ ಅಧಿಕಾರಿ ಆರೋಪಿಯಾಗಿದ್ದರು. ಆದರೆ ಆಗ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಡಿಕೆಶಿ ಆರೋಪಕ್ಕೆ ಟಾಂಗ್ ನೀಡಿ, ವ್ಯವಸ್ಥೆ ಸ್ವಚ್ಛ ಮಾಡಲು ಮುಂದಾಗಿದ್ದೇವೆ. ಗೃಹ ಸಚಿವರ ದಕ್ಷತೆ, ಪ್ರಾಮಾಣಿಕತೆಯಿಂದಲೇ ಹಲವರ ಬಂಧನವಾಗಿದೆ ಎಂದು ಹೇಳಿದ ಸಿಎಂ, ಆರಗ ಜ್ಞಾನೇಂದ್ರ ಬೆಂಬಲಕ್ಕೆ ನಿಂತರು.

'ಕಾಂಗ್ರೆಸ್ ಪ್ರಕರಣ ಮುಚ್ಚಿ ಹಾಕುತ್ತಿತ್ತು': ನಾವು ನಮ್ಮ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಇದೇ ಪ್ರಕರಣದಲ್ಲಿ ಕಾಂಗ್ರೆಸ್ ಇದ್ದಿದ್ದರೆ ಸಿಸ್ಟಮ್ಯಾಟಿಕ್ ಆಗಿ ಪ್ರಕರಣ ಮುಚ್ಚಿ ಹಾಕುತ್ತಿತ್ತು. ಪ್ರಕರಣದ ಬಗ್ಗೆ ಅನುಮಾನ ಬಂದ ಕೂಡಲೇ ಗೃಹ ಸಚಿವರು ಎಫ್​​ಎಸ್​ಎಲ್ ವರದಿ ತರಿಸಕೊಂಡು ಪ್ರಾಥಮಿಕ ತನಿಖೆ ನಡೆಸಿದರು. ಬಳಿಕ ಸಿಐಡಿಗೆ ಕೊಡಿ ಎಂದು ನಾನು ಆದೇಶಿಸಿದ್ದೆ. ಪ್ರಕರಣದಲ್ಲಿ ಬಂಧಿಸಿರುವ 50 ಆರೋಪಿಗಳಲ್ಲಿ 20 ಪೊಲೀಸ್ ಅಧಿಕಾರಿಗಳಿದ್ದಾರೆ ಎಂದು ಹೇಳಿದರು.

ಜಮೀರ್ ಬೆಂಬಲಿಗರ ಪ್ರತಿಭಟನೆಗೆ ಸಿಎಂ ಗರಂ: ಶಾಸಕ ಜಮೀರ್ ಅಹ್ಮದ್ ನಿವಾಸ, ಕಚೇರಿ ಮೇಲಿನ ಎಸಿಬಿ ದಾಳಿ ವಿಚಾರ ಕುರಿತು ಪ್ರತಿಕ್ರಿಯೆ ನೀಡುವ ವೇಳೆ ಶಾಸಕ ಜಮೀರ್ ಬೆಂಬಲಿಗರ ಪ್ರತಿಭಟನೆಗೆ ಸಿಎಂ ಸಿಟ್ಟಾದರು. ಎಸಿಬಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡಚಣೆ ಮಾಡುತ್ತಿರುವುದರ ಹಿಂದೆ ಕಾಂಗ್ರೆಸ್ ಕುಮ್ಮಕ್ಕಿದೆ. ಪೆಂಡಿಂಗ್ ಕೇಸ್​ಗಳ ಸಂಬಂಧ ದಾಳಿ, ವಿಚಾರಣೆಗಳು‌ ನಡೆಯುತ್ತಿದೆ. ಆದರೆ ಇದಕ್ಕೆ ಅಡ್ಡಿಪಡಿಸಿ ಎಸಿಬಿ ದಾಳಿ ಸಂದರ್ಭದಲ್ಲಿ ಪ್ರತಿಭಟನೆ ಮಾಡಿಸಲಾಗುತ್ತಿದೆ. ಇದು ರಾಜಕೀಯಪ್ರೇರಿತ ಪ್ರತಿಭಟನೆ ಎಂದರು.

ಹೈಕೋರ್ಟ್ ಛೀಮಾರಿ ಹಾಕಿತು ಅಂತ ಎಸಿಬಿ ದಾಳಿ ನಡೆದಿಲ್ಲ. ದಾಖಲೆ ಆಧರಿಸಿ ಕ್ರಮ ತಗೊಂಡಿದ್ದಾರೆ. ಇದು ನಿರಂತರವಾಗಿ ನಡೆಯುತ್ತದೆ ಎಂದು ನಿನ್ನೆ ನಡೆದ ಐಎಎಸ್ ಅಧಿಕಾರಿ ಬಂಧನ ಕುರಿತು ಸ್ಪಷ್ಟೀಕರಣ ನೀಡಿದರು. ಸಿಐಡಿ ಮತ್ತು ಎಸಿಬಿ ಕಾರ್ಯ ಚಟುವಟಿಕೆಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಆರೋಪಿಗಳ ವಿಡಿಯೋ ಕಾಲ್: ಪರಪ್ಪನ ಅಗ್ರಹಾರ ಜೈಲಿಂದ ಹರ್ಷ ಕೊಲೆ ಆರೋಪಿಗಳ ವಿಡಿಯೋ ಕಾಲ್ ವಿವಾದ ಪ್ರಕರಣ ಕುರಿತು ಪ್ರತಿಕ್ರಿಯಿಸಿ, ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಒಂದು ಟೀಮ್ ಅಲ್ಲಿ ಅಪರಾಧಿಗಳ ಜೊತೆ ಶಾಮೀಲಾಗಿದೆ ಎನಿಸುತ್ತಿದೆ. ಇಂದೇ ಪರಪ್ಪನ ಅಗ್ರಹಾರ ಪ್ರಕರಣ ಸಂಬಂಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಕುಮಾರಸ್ವಾಮಿ ಆರೋಪ ಕುರಿತು ಪ್ರತಿಕ್ರಿಯಿಸಿ, ಗಾಳಿಯಲ್ಲಿ ಗುಂಡು ಹೊಡೆಯೋ ರೀತಿಯಲ್ಲಿ ಮಾತನಾಡಿದರೆ ಆಗೋದಿಲ್ಲ. ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಅದರ ಬದಲು ಕಿಂಗ್ ಪಿನ್ ಯಾರು ಅಂತ ಹೇಳಲಿ ಎಂದು ತಿಳಿಸಿದರು.

ಪೌರಕಾರ್ಮಿಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದೇವೆ. ಅವರ ವೇತನ ತಾರತಮ್ಯ ಕುರಿತು ಕ್ರಮ ತೆಗೆದುಕೊಳ್ಳುತ್ತೇವೆ. ಇದು ಬೇರೆ ರಾಜ್ಯಗಳಲ್ಲಿ ಮಾಡಿಲ್ಲ. ಕರ್ನಾಟಕದಲ್ಲಿ ಖಾಯಮಾತಿ ಮಾಡುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೇವೆ ಎಂದರು.

ಇದನ್ನೂ ಓದಿ:ಪಿಎಸ್​ಐ ಹಗರಣ: ಗೃಹ ಸಚಿವ ಆರಗ ಜ್ಞಾನೇಂದ್ರ ವಜಾಕ್ಕೆ ಸಿದ್ದರಾಮಯ್ಯ ಆಗ್ರಹ

ರಾಜ್ಯದ ಹಲವೆಡೆ ಮಳೆ ಕುರಿತು ಮಾತನಾಡಿ, ನಿನ್ನೆ ರಾತ್ರಿ ವಿಪತ್ತು ನಿರ್ವಹಣೆ ದಳದ ಜೊತೆ ಚರ್ಚೆ ಮಾಡಿದ್ದೇನೆ. ಸಂತ್ರಸ್ತರಿಗೆ ಪರಿಹಾರ ಕೊಡಲು ಸೂಚಿಸಿದ್ದೇನೆ. ಇಂದು ಮಳೆ ಹಾನಿ ಕುರಿತು ಡಿಸಿಗಳ ಜೊತೆಗೆ ಸಭೆ ಮಾಡುತ್ತೇನೆ. ಮತ್ತಷ್ಟು ಸೂಚನೆ ಕೊಡುತ್ತೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

Last Updated : Jul 5, 2022, 12:32 PM IST

ABOUT THE AUTHOR

...view details