ಕರ್ನಾಟಕ

karnataka

ಹಾಲು ಉತ್ಪಾದಕರದ್ದೇ ಪ್ರತ್ಯೇಕ ಬ್ಯಾಂಕ್ ತೆರೆಯಬೇಕು : ಸಿಎಂ ಬಸವರಾಜ ಬೊಮ್ಮಾಯಿ

By

Published : Sep 29, 2021, 3:57 PM IST

ಹಾಲು ಉತ್ಪಾದಕರದ್ದೇ ಆದ ಪ್ರತ್ಯೇಕ ಬ್ಯಾಂಕ್ ತೆರೆಯಬೇಕು. ಇದರಿಂದ ಹಾಲು ಒಕ್ಕೂಟಗಳು ಇನ್ನಷ್ಟು ಸಧೃಢವಾಗಲಿವೆ. 14 ಸಾವಿರ ಸಹಕಾರ ಸಂಸ್ಥೆಗಳಲ್ಲಿ 25 ಲಕ್ಷ ಸದಸ್ಯರು ಇದ್ದಾರೆ. ಇವರೆಲ್ಲ ನಿತ್ಯ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ..

cm-basavaraja-bommai
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು :ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ ವತಿಯಿಂದ ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಹತ್ತು ಹೊಸ ಯೋಜನೆಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ನಗರದ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದ ಸಮಾರಂಭದಲ್ಲಿ ಚಾಲನೆ ನೀಡಿದರು. ಇದರೊಂದಿಗೆ ನಂದಿನಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ‌ ಮಾತನಾಡಿ, ಸಹಕಾರಿ ರಂಗದ ಶಕ್ತಿಯನ್ನು ನೋಡಬೇಕಂದ್ರೆ ಅದನ್ನು ಹಾಲು ಒಕ್ಕೂಟಗಳಲ್ಲಿ ನೋಡಬಹುದಾಗಿದೆ. ಪ್ರಧಾನಿಗಳು ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂದಾಗ, ಅದರಲ್ಲಿ ಪ್ರಮುಖವಾದುದು ಹೈನುಗಾರಿಕೆ. ಕೃಷಿ ಬೆಳೆದಿದೆ, ಹಸಿರು ಕ್ರಾಂತಿಯಾಗಿದೆ.

ಆಹಾರಕ್ಕೆ ಬೇರೆ ದೇಶದ ಮೇಲಿದ್ದ ಅವಲಂಬನೆ, ಈಗ ಇಲ್ಲ. ನಮ್ಮದು ಸ್ವಾವಲಂಬನೆಯ ದೇಶವಾಗಿದೆ. ಆದರೆ, ಅನ್ನದಾತ ಎಲ್ಲಿ ಇದ್ದ ಅಲ್ಲೇ ಇದ್ದಾರೆ. ಕೃಷಿ ಬೆಳೆದಿದೆ. ಆದರೆ, ಕೃಷಿಕ ಬೆಳೆದಿಲ್ಲ ಎಂದರು. ಕರ್ನಾಟಕ ಮಿಲ್ಕ್ ಫೆಡರೇಷನ್ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.

ಮಹಾರಾಷ್ಟ್ರ, ಗುಜರಾತ್​ನಲ್ಲಿ ಸಹಕಾರ ಸರ್ಕಾರವನ್ನು ಆಳುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಸರ್ಕಾರ ಸಹಕಾರವನ್ನು ನೋಡುಕೊಳ್ಳುತ್ತಿದೆ. ಇದು ಬದಲಾಗಬೇಕು. ಸಹಕಾರಿ ಸಚಿವರು ಇದಕ್ಕೆ ಹಲವಾರು ಕ್ರಮ ಕೈಗೊಂಡು ಬದಲಾವಣೆ ತರಬೇಕಿದೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು

ಸಹಕಾರಿ‌ ಸಂಸ್ಥೆಯಲ್ಲಿ ಪದಾಧಿಕಾರಿಗಳು ಬೆಳೆಯುವುದಷ್ಟೇ ಅಲ್ಲ ಸಂಸ್ಥೆಯನ್ನು ಬೆಳೆಸಬೇಕು. ಸಂಘದ ಉದ್ದೇಶ ಈಡೇರಬೇಕಿದೆ. ಹಾಲು ಉತ್ಪಾದಕರದ್ದೇ ಆದ ಪ್ರತ್ಯೇಕ ಬ್ಯಾಂಕ್ ತೆರೆಯಬೇಕು. ಇದರಿಂದ ಹಾಲು ಒಕ್ಕೂಟಗಳು ಇನ್ನಷ್ಟು ಸಧೃಢವಾಗಲಿವೆ. 14 ಸಾವಿರ ಸಹಕಾರ ಸಂಸ್ಥೆಗಳಲ್ಲಿ 25 ಲಕ್ಷ ಸದಸ್ಯರು ಇದ್ದಾರೆ.

ಇವರೆಲ್ಲ ನಿತ್ಯ ಆರ್ಥಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಹಾಲು ಉತ್ಪಾದಕರೇ ಒಂದು ಬ್ಯಾಂಕ್ ತೆರೆಯುವಂತಾಗಬೇಕು. ಇದು ನನ್ನ ಮತ್ತು ಬಾಲಚಂದ್ರ ಜಾರಕಿಹೊಳಿಯವರ ಆಶಯ. ಈಗಾಗಲೇ ಆರ್ಥಿಕ ವ್ಯವಸ್ಥೆ ಇದೆ, ಬಂಡವಾಳವೂ ಹರಿದು ಬರುತ್ತದೆ ಎಂದರು.

ಹಾಲು ಉತ್ಪಾದಕರ ಬ್ಯಾಂಕ್ ಮಾಡಿದರೆ ಎಲ್ಲರಿಗೂ ಉಪಯೋಗವಾಗಲಿದೆ. ಸರ್ಕಾರವೂ 100 ಕೋಟಿ ಬಂಡವಾಳ ಕೊಡಲಿದೆ ಎಂದು ಭರವಸೆ ನೀಡಿದ ಅವರು, 90 ಲಕ್ಷ ಲೀಟರ್ ಹಾಲು ನಿತ್ಯವೂ ಉತ್ಪಾದನೆಯಾಗುತ್ತಿದೆ. ಮೇ ಜೂನ್ ಒಳಗೆ 100 ಲಕ್ಷ ಲೀಟರ್ ಹಾಲಿಗೆ ಹೆಚ್ಚಿಸಬೇಕು. ಅದಕ್ಕೆ ಬೇಕಾದ ಮಾರುಕಟ್ಟೆಯನ್ನೂ ಹೆಚ್ಚಿಸಬೇಕು ಎಂದು ಹಾಲು ಸಹಕಾರ ಮಂಡಳಿಗೆ ಟಾರ್ಗೆಟ್ ನೀಡಿದರು.

ಇದರ ಜೊತೆಗೆ ಗೋವಿನ ರಕ್ಷಣೆಯೂ ಆಗಬೇಕು. ಹಾಲು ಕೊಟ್ಟ ನಂತರವೂ ಅದನ್ನು ನೋಡಿಕೊಳ್ಳಬೇಕು. ಕಸಾಯಿಖಾನೆಗೆ ಹೋಗದಂತೆ ಕಾನೂನು ಮೂಲಕ ರಕ್ಷಣೆ ಮಾಡಲಾಗುತ್ತಿದೆ. ಗೋಶಾಲೆ ನಿರ್ಮಾಣ ಸರ್ಕಾರದಿಂದಲೇ ಆಗಲಿದೆ. ಅದರ ನಿರ್ವಹಣೆಯನ್ನು ಹಾಲು ಸಹಕಾರ ಸಂಸ್ಥೆಗಳೇ ನೋಡಿಕೊಳ್ಳಬೇಕು ಎಂದರು.

ಬೆಲೆ ಏರಿಕೆ ಬಗ್ಗೆ ಯಾವುದೇ ಆಶ್ವಾಸನೆ ಕೊಡುವುದಿಲ್ಲ. ಆದರೆ, ಕಷ್ಟಕಾಲದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಪ್ರೋತ್ಸಾಹಧನ ಆರಂಭಿಸಿದರು. ಹಾಲಿನ ಪುಡಿ ತಯಾರಿಕೆಗೂ ಕೋಟ್ಯಂತರ ಅನುದಾನ ನೀಡಿದ್ದರು ಎಂದರು.

ಉದ್ಘಾಟನೆಗೊಂಡ ಯೋಜನೆಗಳು

1) ನಂದಿನಿ ಹೈಟೆಕ್ ಮೆಗಾ ಹಾಲಿನ ಪುಡಿ ಉತ್ಪಾದನಾ ಘಟಕ (ಕಣ್ವ, ರಾಮನಗರ ಜಿಲ್ಲೆ)
2) ಪಶು ಆಹಾರ ಉತ್ಪಾದನಾ ಘಟಕ-2 (ಧಾರವಾಡ)
3) ಪಶು ಆಹಾರ ಉತ್ಪಾದನಾ ಘಟಕ-2 (ಗುಬ್ಬಿ, ತುಮಕೂರು ಜಿಲ್ಲೆ)
4) ಹೈಟೆಕ್ ಬುಲ್ ಮದರ್ ಫಾರಂ ಮತ್ತು ಮೇವು ಅಭಿವೃದ್ಧಿ ಕೇಂದ್ರ (ಹೆಸರಘಟ್ಟ, ಬೆಂಗಳೂರು)
5) ರಾಜ್ಯ ಕೇಂದ್ರೀಯ ಪ್ರಯೋಗಾಲಯ ಕೆಎಂಎಫ್ ಸಂಕೀರ್ಣ (ಬೆಂಗಳೂರು)
6) ಕೆಎಂಎಫ್ ತರಬೇತಿ ಕೇಂದ್ರ (ಕಲಬುರ್ಗಿ ಡೇರಿ ಆವರಣ)
7) ಹಾಸನ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳು
8) ರಾಜಾನುಕುಂಟೆ ಪಶು ಆಹಾರ ಘಟಕದಲ್ಲಿ ಗೋದಾಮು, ಆಡಳಿತ ಕಚೇರಿ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳು
9) ಶಿಕಾರಿಪುರ ಪಶು ಆಹಾರ ಘಟಕದಲ್ಲಿ ಕಾಕಂಬಿ ಶೇಖರಣಾ ಬ್ಯಾಂಕ್
10) ಬೆಣ್ಣೆ ದಾಸ್ತಾನಿನ ಡೀಪ್ ಫ್ರೀಝರ್ ಘಟಕ ಚಳ್ಳಘಟ್ಟ (ಬೆಂಗಳೂರು)

ಹೊಸ ಉತ್ಪನ್ನಗಳ ಬಿಡುಗಡೆ

"ನಂದಿನಿ" ಉತ್ಪನ್ನಗಳ ಶ್ರೇಣಿಗೆ ಹೊಸದಾಗಿ ನಂದಿನಿ ಶ್ರೀಖಂಡ್‌ನಲ್ಲಿ ಗ್ರೀನ್ ಆ್ಯಪಲ್, ಕಿವಿ ಹಣ್ಣು, ಬಟರ್ ಸ್ಕಾಚ್ ಫ್ಲೇವರ್ ಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಜೊತೆಗೆ ನಂದಿನಿ ಕರದಂಟು, ನಂದಿನಿ ಗೋಡಂಬಿ ಶಕ್ತಿ (ಕಾಜೂ ಕಟ್ಲಿ), ನಂದಿನಿ ಲಡಗಿ ಲಡ್ಡು, ನಂದಿನಿ ಪಿಂಕ್ ಗಾವಾ ಕ್ಯಾಂಡಿ, ನಂದಿನಿ ಸಕ್ಕರೆ ರಹಿತ ಐಸ್ ಕ್ರೀಮ್, ನಂದಿನಿ ರಾಗಿ ಬೈಟ್ ಕುಕ್ಕೀಸ್ ಉತ್ಪನ್ನಗಳು ಸಹ ಮಾರುಕಟ್ಟೆಗೆ ಇಂದು ಉದ್ಘಾಟನೆಗೊಳಿಸಲಾಯಿತು. ಇನ್ನು, ಪಶು ಆಹಾರದ ವಿಭಾಗದಲ್ಲಿ ಎಮ್ಮೆಗಳಿಗಾಗಿ "ನಂದಿನಿ" ಎಮ್ಮೆ-ಪಶು ಆಹಾರವನ್ನು ಪಶು ಸಂಗೋಪನೆ ಸಚಿವ ಪ್ರಭು ಬಿ.ಚೌಹಾಣ್​ ಬಿಡುಗಡೆಗೊಳಿಸಿದರು.

ಕೆಎಂಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ಎಲ್ಲಾ ಶಾಲಾ ಮಕ್ಕಳಿಗೆ ಹಾಲಿನ ಪುಡಿ ಕೊಡಲಾಗುತ್ತಿದೆ. 7 ಲಕ್ಷ ಲೀಟರ್ ಹಾಲನ್ನು ಪೌಡರ್ ಮುಖಾಂತರ ಕೊಡುತ್ತಿದ್ದೇವೆ. ಇದನ್ನು ಟೆಟ್ರಾ ಪ್ಯಾಕ್ ಹಾಲಿನ ಮೂಲಕ ಕೊಡುವ ಯೋಜನೆ ಆಗಬೇಕು.

ಇದರಿಂದ ಪುಡಿಯಾಗಿ ಕನ್ವರ್ಷನ್ ಮಾಡುವ ಕೆಲಸ ತಪ್ಪಲಿದೆ. ಖಾಸಗಿಗೆ ಅವಲಂಬನೆಯಾಗುವುದು ತಪ್ಪಲಿದೆ. ಆಂಧ್ರಕ್ಕೆ ಈಗಾಗಲೇ ಕೊಡಲಾಗ್ತಿದೆ. ಆದರೆ, ನಮ್ಮ ರಾಜ್ಯಕ್ಕೆ ಕೊಡಲಾಗುತ್ತಿಲ್ಲ ಎಂಬ ನೋವಿದೆ. ಇದಕ್ಕೆ ಸರ್ಕಾರ ಮುಂದಿನ ಬಜೆಟ್​ನಲ್ಲಿ ಯೋಜನೆ ತರಬೇಕು ಎಂದರು.

ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ, ಜನತೆ ಮೆಚ್ಚುವಂತಹ ಕೆಲಸವನ್ನ ಸಿಎಂ ಬೊಮ್ಮಾಯಿಯವರು ಮಾಡ್ತಾರೆ. ಯಾವುದೇ ಸಮಸ್ಯೆಯನ್ನು ಸಾವಾಧಾನದಿಂದ ಕೇಳುತ್ತಾರೆ. ಕೋವಿಡ್ ಸಂದರ್ಭದಲ್ಲಿ ಉಚಿತವಾಗಿ ರಾಜ್ಯದ ಜನತೆಗೆ ಹಾಲನ್ನ ಹಂಚಿದ್ದೇವೆ.

2.11 ಲಕ್ಷ ಲೀಟರ್ ಹಾಲು ಸಂಗ್ರಹಿಸಿ ಕೊಟ್ಟಿದ್ದೇವೆ. ಲೀಟರ್ ಗೆ 37 ರೂಪಾಯಿಯಂತೆ ಖರೀದಿ ಮಾಡಿ ರಾಜ್ಯದ ಜನತೆಗೆ ಉಚಿತವಾಗಿ ಹಾಲನ್ನ ಕೊಟ್ಟಿದ್ದೇವೆ. ಆದರೆ, ಕೋವಿಡ್ ಸಂದರ್ಭದಲ್ಲಿ ರೈತರಿಂದ ಹಾಲನ್ನ ಖರೀದಿ ಮಾಡೋದನ್ನ ನಿಲ್ಲಿಸಿಲ್ಲ. ಇವತ್ತು ಸಹಕಾರ ಇಲಾಖೆಯಿಂದ ರೈತರಿಗೆ ಸಾಲ ನೀಡಿ ಅವರ ಅಭಿವೃದ್ಧಿಗೆ ಸದಾ ನಮ್ಮ ಸರ್ಕಾರ ಮಾಡ್ತಿದೆ ಎಂದರು.

ಓದಿ:ನಮಗ್ಯಾಕೆ ಟಿಕೆಟ್ ಕೊಡಲ್ಲ? ನಾವು ಗಂಡಸರಲ್ವಾ?: ಹಾನಗಲ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ತಹಶೀಲ್ದಾರ್ ಕಿಡಿ

ABOUT THE AUTHOR

...view details