ಕರ್ನಾಟಕ

karnataka

ನಾಳೆ ಅಥವಾ ನಾಡಿದ್ದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಸಿಎಂ ಬೊಮ್ಮಾಯಿ

By

Published : Apr 9, 2023, 11:02 PM IST

ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯು ನಾಳೆ ಅಥವಾ ನಾಡಿದ್ದು ಪ್ರಕಟವಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

cm-basavaraj-bommai-reaction-on-list-of-bjp-candidates
ನಾಳೆ ಅಥವಾ ನಾಡಿದ್ದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಸಿಎಂ ಬೊಮ್ಮಾಯಿ

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತು ಅಂತಿಮ ನಿರ್ಧಾರಕ್ಕೆ ಬಾರದ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ನಾಳೆ ಮತ್ತೊಮ್ಮೆ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಹಾಗಾಗಿ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಬಹುತೇಕ ಸೋಮವಾರ ರಾತ್ರಿ ಅಥವಾ ಮಂಗಳವಾರ ಆಗಲಿದೆ.

ನವದೆಹಲಿಯಲ್ಲಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ಬಳಿಕ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಚುನಾವಣೆಯ ಒಟ್ಟಾರೆ ಅಭ್ಯರ್ಥಿಗಳ ಪಟ್ಟಿ ಕುರಿತಂತೆ ಚರ್ಚೆ ನಡೆಸಲಾಗಿದೆ. ಬಹುಶಃ ನಾಳೆ ಮತ್ತೆ ಸಭೆ ಸೇರುವ ಸಾಧ್ಯತೆ ಇದೆ. ನಾಳೆ ಅಥವಾ ನಾಡಿದ್ದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು ಎಂದಿದ್ದಾರೆ. ಇದೇ ವೇಳೆ ತಾವು ಸ್ವಕ್ಷೇತ್ರ ಶಿಗ್ಗಾಂವಿಯಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಪ್ರಧಾನಿ ಮೋದಿ ಉಪಸ್ಥಿರಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಾಯಿತು. ಗೆಲ್ಲುವ ಮಾನದಂಡದ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಪ್ರತಿಪಕ್ಷಗಳ ಅಭ್ಯರ್ಥಿ, ಕಾರ್ಯತಂತ್ರದ ಆಧಾರದಲ್ಲಿಯೂ ಚರ್ಚೆಗೆ ಪ್ರಧಾನಿ ಮೋದಿ ಸೂಚನೆ ನೀಡಿ ಕೆಲವೊಂದು ಸಲಹೆ ನೀಡಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಜೆ.ಪಿ.ನಡ್ಡಾ ಅಧ್ಯಕ್ಷತೆಯಲ್ಲಿ ಕೇಂದ್ರ ಸಂಸದೀಯ ಮಂಡಳಿ ಸಭೆ ನಡೆದಿದೆ. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ, ಸರ್ಬಾನಂದ್ ಸೋನವಾಲ, ಕೆ.ಲಕ್ಷ್ಮಣ್, ಇಕ್ಬಾಲ್ ಸಿಂಗ್ ಲಾಲ್ ಪುರ, ಸುಧಾ ಯಾದವ್, ಸತ್ಯನಾರಾಯಣ ಜಟಿಯಾ ಹಾಗು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾಗವಹಿಸಿದ್ದರು. ಬಳಿಕ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಸಹ ಪ್ರಭಾರಿ ಅಣ್ಣಾಮಲೈ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಭೆಯಲ್ಲಿ ಇದ್ದರು.

ಇಂದಿನ ಸಭೆಯಲ್ಲಿ ಎಲ್ಲಾ 224 ಕ್ಷೇತ್ರಗಳ ಕುರಿತು ಪ್ರಸ್ತಾಪವಾದರೂ 100 ಕ್ಷೇತ್ರಗಳ ಕುರಿತು ಮಾತ್ರ ಪೂರ್ಣ ಪ್ರಮಾಣದಲ್ಲಿ ಚರ್ಚೆಯಾಗಿದ್ದು, ಉಳಿದ ಕ್ಷೇತ್ರಗಳ ಕುರಿತು ಸೋಮವಾರ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಿ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ.ಹಾಗಾಗಿ ಭಾನುವಾರ ತಡರಾತ್ರಿ ಪಟ್ಟಿ ಬಿಡುಗಡೆ ಬದಲು ಸೋಮವಾರ ತಡರಾತ್ರಿ ಅಥವಾ ಮಂಗಳವಾರ ಬೆಳಗ್ಗೆ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ನಮಗೆ ನಂದಿನಿ, ಗೋವು ಎರಡೂ ಮುಖ್ಯ; ಕೆಎಂಎಫ್ ವಿಚಾರದಲ್ಲಿ ಆಧಾರರಹಿತ ಆರೋಪ: ರವಿಕುಮಾರ್

ABOUT THE AUTHOR

...view details