ಕರ್ನಾಟಕ

karnataka

₹402 ಕೋಟಿ ಹೆಚ್ಚುವರಿ ಬಜೆಟ್ ಮಂಡಿಸಿದ್ದೇವೆ, ಇದು ಆರ್ಥಿಕಾಭಿವೃದ್ಧಿ ತೋರಿಸುತ್ತದೆ: ಸಿಎಂ

By

Published : Feb 17, 2023, 4:44 PM IST

Updated : Feb 17, 2023, 11:00 PM IST

ಸಾಮಾಜಿಕ, ಶೈಕ್ಷಣಿಕ, ಜನಪರ, ಜನಕೇಂದ್ರೀಕೃತ, ಜನಾಧಾರಿತ ಬಜೆಟ್ ಇದಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

CM Basavaraj Bommai reaction on budget
ರಾಜ್ಯದ ಆರ್ಥಿಕತೆಯನ್ನು ನೋಡಿ ಸಮತೋಲಿತ ಬಜೆಟ್ ಮಂಡನೆ ಮಾಡಿದ್ದೇವೆ: ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಚುನಾವಣಾ ವರ್ಷ ಅಂತ ಬೇಜವಾಬ್ದಾರಿಯಿಂದ ಬೇಕಾಬಿಟ್ಟಿ ಘೋಷಣೆ ಮಾಡಬಹುದಿತ್ತು. ನಮ್ಮದು ಜವಾಬ್ದಾರಿಯುತ ಸರ್ಕಾರ. ಜವಾಬ್ದಾರಿಯುತ ಬಜೆಟ್ ಮಂಡಿಸಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ವಿಧಾನಸೌಧದಲ್ಲಿ ಬಜೆಟ್ ಕುರಿತು ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಆರ್ಥಿಕತೆಯನ್ನು ನೋಡಿ ಸಮತೋಲಿತ ಬಜೆಟ್ ಮಂಡನೆ ಮಾಡಿದ್ದೇವೆ. ಆ ಮೂಲಕ ಸಮತೋಲನ ಕಾಪಾಡಿಕೊಂಡಿದ್ದೇವೆ. ಯಾವುದನ್ನು ಮಾಡಲು ಸಾಧ್ಯವಿಲ್ಲವೋ ಅದನ್ನು ಬಜೆಟ್​ನಲ್ಲಿ ಘೋಷಿಸಿಲ್ಲ. ಯಾವುದು ಮಾಡಲು ಸಾಧ್ಯವೋ ಅದನ್ನು ಮಾತ್ರ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು.

ಇದು ಸಾಮಾಜಿಕ, ಶೈಕ್ಷಣಿಕ, ಜನಪರ, ಜನಕೇಂದ್ರೀಕೃತ, ಜನಾಧಾರಿತ ಬಜೆಟ್ ಆಗಿದೆ. ಕೋವಿಡ್‌ನಿಂದ ಕಳೆದ ಮೂರು ವರ್ಷದಿಂದ ಕೊರತೆ ಬಜೆಟ್ ಮಂಡಿಸಿದ್ದೆವು. ಈಗ 402 ಕೋಟಿ ರೂ. ಆದಾಯ ಹೆಚ್ಚುವರಿ ಬಜೆಟ್ ಮಂಡಿಸಿದ್ದೇವೆ. ಇದು ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ತೋರಿಸುತ್ತದೆ. ನಮ್ಮ ತೆರಿಗೆ ಸಂಗ್ರಹ ಕ್ಷಮತೆ ಹೆಚ್ಚಿಸಿದ್ದೇವೆ. ಸರಾಸರಿ 23% ರಾಜಸ್ವ ಜಮೆ ಹೆಚ್ಚಾಗಿದೆ. ಕಳೆದ ಬಾರಿ 72,000 ಸಾಲ ಪಡೆಯುತ್ತೇವೆ ಅಂದಿದ್ದೆವು. ಆದರೆ ಕಡಿಮೆ ಸಾಲ ತೆಗೆದುಕೊಂಡಿದ್ದೇವೆ. ಸರ್ಕಾರ ಹಣಕಾಸಿನ ನಿರ್ವಹಣೆಯನ್ನು ದಕ್ಷತೆಯಿಂದ ಮಾಡಿದ್ದೇವೆ. ಹಿಂದಿನ ಯಾವುದೇ ಸರ್ಕಾರ ಈ ರೀತಿ ಮಾಡಿಲ್ಲ. ಕೃಷಿ, ಉತ್ಪಾದನೆ, ಮೂಲಸೌಕರ್ಯ ಮೂರು ವಲಯದಲ್ಲಿ ನಮ್ಮ ಬೆಳವಣಿಗೆ ದರ ಹೆಚ್ಚಿದೆ. ಆ ಮೂಲಕ ಸಾಧನೆ ಮಾಡಿದ್ದೇವೆ ಎಂದರು.

ಹಲವು ಕಾರ್ಯಕ್ರಮಗಳು ಅನುಷ್ಠಾನವಾಗಿವೆ. ಕೆಲವು ಇನ್ನೂ ಅನುಷ್ಠಾನದ ಪ್ರಕ್ರಿಯೆಯಲ್ಲಿದೆ. ಈಗಾಗಲೇ ಆದಾಯ ವೆಚ್ಚ 76% ಆಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ವೆಚ್ಚ ಮಾಡಲಾಗಿದೆ. ಯೋಜನೆಗಳು ಸರಿಯಾಗಿ ಅನುಷ್ಠಾನ ಆಗಿಲ್ಲ ಎಂಬ ವಿರೋಧ ಪಕ್ಷದ ಆರೋಪ ಶುದ್ಧ ಸುಳ್ಳು. ಈ ವರ್ಷ 3,09,182 ಕೋಟಿ ರೂ. ಬಜೆಟ್ ಮಂಡಿಸಿದ್ದೇವೆ. ಆ ಮೂಲಕ ಈ ಬಾರಿ 43,402 ಕೋಟಿ ರೂ. ಹೆಚ್ಚಿನ ಗಾತ್ರದ ಬಜೆಟ್ ಮಂಡನೆ ಮಾಡಿದ್ದೇವೆ.

ಈ ಬಾರಿ 16% ಬಜೆಟ್ ಗಾತ್ರ ಹೆಚ್ಚಿಸಿದ್ದೇವೆ. ಇದು ಇನ್ನಷ್ಟು ಆರ್ಥಿಕ ವೃದ್ಧಿಯನ್ನು ತೋರಿಸುತ್ತದೆ. ಆದಾಯ ಹೆಚ್ಚುವರಿ ಆಗಿದೆ. ವಿತ್ತೀಯ ಕೊರತೆ 3% ಒಳಗಡೆ ಇದೆ, ಒಟ್ಟಾರೆ ಹೊಣೆಗಾರಿಕೆ 24.2% ಇದೆ. ಆರ್ಥಿಕ ಶಿಸ್ತು ಪಾಲನೆಯಾಗಿದೆ. ಆ ಮೂಲಕ ರಾಜ್ಯದ ಆರ್ಥಿಕತೆ ಬೆಳವಣಿಗೆ ದರದಲ್ಲಿದ್ದೇವೆ, ಸರಿಯಾದ ದಿಕ್ಕಿನೆಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಕೃಷಿಗೆ ಹೆಚ್ಚಿನ ಆದ್ಯತೆ, ರೈತರ ಸಾಲದ ಮಿತಿ ಹೆಚ್ಚಳ, ಅಲ್ಪಾವಧಿಯ ಬಡ್ಡಿರಹಿತ ಸಾಲದ ಮಿತಿಯನ್ನು 3 ಲಕ್ಷದಿಂದ 5,00,000 ರೂ.ಗೆ ಹೆಚ್ಚಿಸಿದ್ದೇವೆ. 30 ಲಕ್ಷ ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಮಾಡುವ ಗುರಿ ಹೊಂದಿದ್ದೇವೆ. ಅಗತ್ಯವಿದ್ದಾಗ ಹಣ ಸಿಗುವುದಿಲ್ಲ ಎಂಬ ರೈತರ ಸಮಸ್ಯೆ ಬಗೆಹರಿಸಲು ಭೂ ಸಿರಿಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ 10,000 ರೂ. ಹೆಚ್ಚುವರಿ ಬಡ್ಡಿರಹಿತ ಸಾಲ ಕೊಡಲಿದ್ದೇವೆ. ರೈತರಿಗೆ ಜ್ಯೋತಿ ವಿಮೆ ಯೋಜನೆ ಸೌಲಭ್ಯ ಘೋಷಣೆ ಮಾಡಿದ್ದೇವೆ. 55 ಲಕ್ಷ ರೈತ ಕುಟುಂಬಕ್ಕೆ 180 ಕೋಟಿ ರೂ‌. ವೆಚ್ಚದಲ್ಲಿ ಈ ಯೋಜನೆ ಜಾರಿ ಮಾಡಲಿದ್ದೇವೆ.

ಬೆಲೆ ಕುಸಿತದಿಂದ ರಕ್ಷಣೆ ನೀಡಲು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆಹಾರ ಧಾನ್ಯ ಖರೀದಿಗೆ ಸ್ಥಾಪಿಸಿರುವ ಆವರ್ತ ನಿಧಿಗೆ 1,500 ಕೋಟಿ ರೂ.‌ನೀಡಿ, ಒಟ್ಟು 3,500 ಕೋಟಿಗೆ ಹೆಚ್ಚಳ ಮಾಡಿದ್ದೇವೆ. ಸರ್ಕಾರಿ ಪದವಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಸಂಪೂರ್ಣ ಶೂನ್ಯ ಶುಲ್ಕ ಮಾಡಿದ್ದೇವೆ. 8 ಲಕ್ಷ ವಿದ್ಯಾರ್ಥಿಗಳಿಗೆ ಇದರಿಂದ ಲಾಭವಾಗಲಿದೆ. ಸರ್ಕಾರಿ ಹಾಗೂ ಪಿಯುಸಿ ಮತ್ತು ಡಿಗ್ರಿ ವಿದ್ಯಾರ್ಥಿಗಳಿಗೆ ಈ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ವಿವರಿಸಿದರು.

ನಿರುದ್ಯೋಗಿ ಪದವಿ ವಿದ್ಯಾರ್ಥಿಗಳಿಗೆ ಮೂರು ವರ್ಷದ ವರೆಗೆ 2,000 ಸಹಾಯಧನ ನೀಡುವ ಯೋಜನೆ ನೀಡಿದ್ದೇವೆ. ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ, ಮಹಿಳಾ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ನೀಡಿದ್ದೇವೆ. ಶಾಲಾ ಮಕ್ಕಳಿಗೆ ಬಸ್ ಸಮಸ್ಯೆ ನಿವಾರಿಸಲು ಒಂದು ಸಾವಿರ ಬಸ್ ವ್ಯವಸ್ಥೆ ಮಾಡಲಿದ್ದೇವೆ. ಅಂಗನವಾಡಿ, ಗ್ರಂಥಪಾಲಕರು, ಆಶಾ ಕಾರದಯಕರ್ತರು, ಬಿಸಿಊಟ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಕೊಡಲು 70 ಕೋಟಿ ಅನುದಾನ ನೀಡಲಿದ್ದೇವೆ. ಜೊತೆಗೆ 1,000 ರೂ. ಗೌರವಧನ ಹೆಚ್ಚಳ ಮಾಡಿದ್ದೇವೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಒಂದು ನಿಗಮ ರಚನೆ ಮಾಡಿದ್ದೇವೆ. ಎಸ್​ಸಿ, ಎಸ್​ಟಿ ಸಮುದಾಯದವರಿಗೆ 50 ಲಕ್ಷ ರೂ. ವರೆಗಿನ ಸರ್ಕಾರಿ ಕಾಮಗಾರಿಗಳ ಗುತ್ತಿಗೆ ಕೊಡಲಾಗುತ್ತಿತ್ತು. ಈಗ ಆ ಮಿತಿಯನ್ನು ಒಂದು ಕೋಟಿಗೆ ಹೆಚ್ಚಳ ಮಾಡಿದ್ದೇವೆ. ಆ ಮೂಲಕ ಸಮುದಾಯದವರ ಬೇಡಿಕೆ ಪೂರೈಸಿದ್ದೇವೆ ಎಂದರು.

7ನೇ ವೇತನ ಆಯೋಗದ ವರದಿ ಜಾರಿ:7ನೇ ಪರಷ್ಕೃತ ವೇತನ ಆಯೋಗವನ್ನು ರಚನೆ ಮಾಡಿದ್ದೇವೆ. ವರದಿ ಬಂದ ಬಳಿಕ ಇದೇ ವರ್ಷ ಅನುಷ್ಠಾನ‌ ಮಾಡುವ ಉದ್ದೇಶ ಇದೆ. ಅದಕ್ಕಾಗಿ 6,000 ಕೋಟಿ ರೂ. ಹಣವನ್ನು ಈಗಾಗಲೇ ಮೀಸಲಿಡಲಾಗಿದೆ. ಅದಕ್ಕೆ ಹೆಚ್ಚುವರಿ ಹಣ ಬೇಕಾದರೆ ಪೂರಕ ಬಜೆಟ್​ನಲ್ಲಿ ಇಡುತ್ತೇವೆ. ಯಾವುದೇ ಸಮಸ್ಯೆ ಆಗದಂತೆ ಜಾರಿ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.

ಜನರೇ ಹೂ ಮುಡಿಸುತ್ತಾರೆ: ಕಾಂಗ್ರೆಸ್‌ನವರು ಕಿವಿಗೆ ಹೂವು ಇಟ್ಟುಕೊಂಡು ಬಂದಿರುವ ಬಗ್ಗೆ ಮಾತನಾಡಿದ ಸಿಎಂ, ಕಾಂಗ್ರೆಸ್‌ನವರು ಕಿವಿಯಲ್ಲಿ ಹೂವು ಇರಿಸಿಕೊಂಡು ಚೆನ್ನಾಗಿ ಕಾಣಿಸುತ್ತಿದ್ದರು. ಇಲ್ಲಿ ತನಕ ಜನರಿಗೆ ಹೂವು ಇಡುತ್ತಿದ್ದರು. ಇವತ್ತು ನೀವೇ ಹೂವು ಇಟ್ಟು ಕೊಂಡಿದ್ದೀರಾ. ಅದೂ ಕೇಸರಿ ಬಣ್ಣದ ಹೂವು ಇಟ್ಟು ನಮಗೆ ಪ್ರಚಾರ ಸಿಕ್ಕಿದೆ. ಜನರೇ ನಿಮಗೆ ಹೂವು ಮುಡಿಸುತ್ತಾರೆ ಎಂದು ಟೀಕಿಸಿದರು.

ಇದನ್ನೂ ಓದಿ:ಕೆಟ್ಟ ಆರ್ಥಿಕ ನೀತಿಯ ನಿರಾಶಾದಾಯಕ ಚುನಾವಣಾ ಬಜೆಟ್: ಸಿದ್ದರಾಮಯ್ಯ

Last Updated : Feb 17, 2023, 11:00 PM IST

ABOUT THE AUTHOR

...view details