ಬೆಂಗಳೂರು :ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದ ನಗರದಲ್ಲಿ ಉಂಟಾದ ಅನಾಹುತಗಳ ಕುರಿತಂತೆ ಕ್ರಮಕೈಗೊಳ್ಳುವ ಸಲುವಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಸಚಿವರು ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿನ ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ ಮಳೆ ನೀರು ಹೋಗಲು ಕಾಲುವೆಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಲಾಗುವುದು.
51.5 ಕಿ.ಮೀ ಪ್ರೈಮರಿ ಬೃಹತ್ ಕಾಲುವೆಗಳು, 37 ಕಿ.ಮೀ ಸೆಕೆಂಡರಿ ಡ್ರೈನ್ ಕಾಲುವೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಸುಮಾರು 900 ಕೋಟಿ ರೂ. ಹಣದ ಅಗತ್ಯವಿದೆ. ವಿಶೇಷ ಅನುದಾನದ ಮೂಲಕ ರಾಜಕಾಲುವೆಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದರು.
ಮಳೆಯಿಂದ ಬೆಂಗಳೂರಿನ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿವೆ. ಇದರಿಂದ ಹಲವು ತಗ್ಗು ಪ್ರದೇಶದ ಮನೆ, ಬಡಾವಣೆಗಳಿಗೆ ನೀರು ನುಗ್ಗಿದೆ. ಇದಕ್ಕಾಗಿ ರಾಜಕಾಲುವೆಗಳ ದುರಸ್ಥಿ ನಡೆಯಬೇಕಿದೆ. ಜೊತೆಗೆ ರಾಜಕಾಲುವೆಯಲ್ಲಿ ಹರಿದು ಹೋಗುವ ನೀರಿನ ಪ್ರಮಾಣವನ್ನು ಹೆಚ್ಚಳ ಮಾಡಬೇಕಿದೆ ಎಂದರು.
ನಗರದೊಳಗಿರುವ ರಾಜಕಾಲುವೆಗಳ ದುರಸ್ಥಿ ನಡೆಯಬೇಕಿದೆ. ಕಲ್ಲು, ಮಣ್ಣಿನ ಕಾಲುವೆಗಳನ್ನು ಸಿಮೆಂಟ್ ಆರ್ಸಿಸಿ ಕಾಲುವೆ ಮಾಡಬೇಕಿದೆ. ವೃಷಭಾವತಿ, ಛಲಗಟ್ಟ, ಕೋರಮಂಗಲ ಹಾಗೂ ಹೆಬ್ಬಾಳ ಸೇರಿ ನಾಲ್ಕು ವ್ಯಾಲಿಗಳು 840 ಕಿ.ಮೀ ಉದ್ದ ಇವೆ.
ಈ ಪೈಕಿ 415 ಕಿ.ಮೀ ಅಭಿವೃದ್ಧಿಯಾಗಿದೆ. 2020-21ರ ಅವಧಿಯಲ್ಲಿ 75 ಕಿ.ಮೀ ದುರಸ್ಥಿಗೆ ಅನುಮತಿ ಕೊಟ್ಟಿದ್ದು, 30 ಕಿ.ಮೀ ಬಾಕಿ ಇದೆ. ಇದನ್ನು ಜನವರಿ ಅಂತ್ಯದೊಳಗೆ ಸಂಪೂರ್ಣಗೊಳಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ ಎಂದರು.
94 ಕ್ರಿಟಿಕಲ್ ಪಾಯಿಂಟ್ಸ್ಗಳಿವೆ. ಈ ಸೂಕ್ಷ್ಮ ಪ್ರದೇಶಗಳಿಗೆ ಎರಡು ತಿಂಗಳೊಳಗೆ ಪರಿಹಾರ ಕೊಡಬೇಕು. ಹಲವು ಪ್ರದೇಶಗಳಲ್ಲಿ ಒಳಚರಂಡಿ ಅಭಿವೃದ್ಧಿ, ಓಣಿ-ಬಡಾವಣೆಗಳಿನ ಚರಂಡಿಗಳ ಹೂಳು, ದುರಸ್ಥಿ ಕೆಲಸಗಳು ಕಾಲ ಕಾಲಕ್ಕೆ ಆಗಬೇಕೆಂದು ಆದೇಶ ಕೊಟ್ಟಿದ್ದೇನೆ ಎಂದರು.
ರಾಜಕಾಲುವೆ ಒತ್ತುವರಿ ತೆರವು :714 ಕಟ್ಟಡಗಳ ಒತ್ತುವರಿ ತೆರವು ಬಗ್ಗೆ ಬರುವ ದಿನಗಳಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು. ಬಡವರಿಗೆ ತೊಂದರೆ ಕೊಡದಂತೆ ಕೆಲಸ ಮಾಡುವಂತೆ ಹೇಳಿದ್ದೇನೆ. ಅವರಿಗೆ ಪರ್ಯಾಯ ಜಾಗಗಳಿಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿ ಕಾಲಾವಕಾಶ ಕೊಡಬೇಕು.
ದೊಡ್ಡ ಗುತ್ತಿಗೆದಾರರು ತಪ್ಪು ಮಾಡಿದ್ದರೆ ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ. ಕೆಲಸಕ್ಕಾಗಿ ಸುಮಾರು 130 ಇಂಜಿನಿಯರ್ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮಳೆ ನಿಂತ ಕೂಡಲೇ ರಸ್ತೆಗುಂಡಿ ಮುಚ್ಚಲು, ಒಂದು ಫೀಟ್ಗಿಂತಲೂ ಹೆಚ್ಚು ಆಳವಿರುವ ಗುಂಡಿಗಳನ್ನು ಮೊದಲು ಮುಚ್ಚಲು ಹೇಳಿದ್ದೇನೆ. ಕೆಟ್ಟ ರಸ್ತೆಗಳನ್ನು ದುರಸ್ಥಿಪಡಿಸಲು ಸೂಚಿಸಲಾಗಿದೆ ಎಂದರು.
ಇದನ್ನೂ ಓದಿ: Kalaburagi ACB Raid: ಡ್ರೈನೇಜ್ ಪೈಪಲ್ಲಿ ಹರಿದು ಬಂತು ಹಣ.. ಪಿಡಬ್ಲ್ಯೂಡಿ ಜೆಇ ಪ್ಲಾನ್ಗೆ ಎಸಿಬಿ ಅಧಿಕಾರಿಗಳೇ ದಂಗು