ಕರ್ನಾಟಕ

karnataka

ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಹ್ಯಾಕ್ ಪ್ರಕರಣ: ಪಂಜಾಬ್ ಮೂಲದ ಆರೋಪಿ ಬೆಂಗಳೂರಿನಲ್ಲಿ ಸೆರೆ

By ETV Bharat Karnataka Team

Published : Oct 5, 2023, 10:09 PM IST

ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಹ್ಯಾಕ್ ಮಾಡಿ 11.5 ಕೋಟಿ ರೂ. ಹವಾಲಾ ಹಣವನ್ನಾಗಿ ಪರಿವರ್ತಿಸಲು ನೆರವು ನೀಡಿದ್ದ ಪಂಜಾಬ್ ಮೂಲದ ಆರೋಪಿಯನ್ನು ಸಿಐಡಿ ಬಂಧಿಸಿದೆ.

ಇ-ಪ್ರೊಕ್ಯೂರ್ ಮೆಂಟ್ ವೆಬ್ ಸೈಟ್ ಹ್ಯಾಕ್ ಪ್ರಕರಣ
ಇ-ಪ್ರೊಕ್ಯೂರ್ ಮೆಂಟ್ ವೆಬ್ ಸೈಟ್ ಹ್ಯಾಕ್ ಪ್ರಕರಣ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ 2019ರಲ್ಲಿ ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಜಾಲತಾಣ ಹ್ಯಾಕ್ ಮಾಡಿ 11.5 ಕೋಟಿ ರೂ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ ಸೈಬರ್ ಕ್ರೈಂ ಅಪರಾಧ ವಿಭಾಗದ ಪೊಲೀಸರು ನಾಲ್ಕು ವರ್ಷಗಳ ಬಳಿಕ ಪಂಜಾಬ್ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲೂದಿಯಾನದಲ್ಲಿ ಹರ್ವೀದರ್ ಸಿಂಗ್ ಎಂಬವನನ್ನು ಬಂಧಿಸಿದ ಸಿಐಡಿ ಪೊಲೀಸರು ನಗರಕ್ಕೆ ಕರೆತಂದಿದ್ದಾರೆ. ನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿಕೊಂಡಿದ್ದಾರೆ. ಹ್ಯಾಕಿಂಗ್​ನಲ್ಲಿ ಪರಿಣತಿ ಪಡೆದುಕೊಂಡಿದ್ದ ಶ್ರೀಕಿ 2019ರಲ್ಲಿ ಇ-ಪ್ರೋಕ್ಯೂರ್‌ಮೆಂಟ್ ಜಾಲತಾಣ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಹಣ ದೋಚಿದ್ದ.

ಇದೇ ಹಣವನ್ನು ಉತ್ತರ ಭಾರತ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲು ಹರ್ವೀಂದರ್ ಸಿಂಗ್​ನ ಸಹಾಯ ಪಡೆದಿದ್ದ. ಹಂತ-ಹಂತವಾಗಿ ಶ್ರೀಕಿ ಕಳುಹಿಸಿದ್ದ 11.5 ಕೋಟಿ ಹಣವನ್ನು ಹರ್ವಿಂದರ್ ಹಾಗೂ ಆತನ ಸಹಚರರು ಹವಾಲ ಹಣವಾಗಿ ಬದಲಾಯಿಸಿಕೊಂಡಿದ್ದರು. ಬ್ಯಾಂಕ್‌ಗಳಲ್ಲಿ ಅನಧಿಕೃತ ಹಣ ವಹಿವಾಟು ನಡೆದಿದೆ ಎಂದು ಗೊತ್ತಾಗುವಷ್ಟರಲ್ಲೇ ಆರೋಪಿಗಳು 11.5 ಕೋಟಿ ರೂಪಾಯಿ ಹಣವನ್ನು ಹವಾಲಾ ಹಣವನ್ನಾಗಿ ಆರೋಪಿಗಳು ಪರಿವರ್ತಿಸಿಕೊಂಡಿದ್ದರು. ಹರ್ವಿಂದರ್ ಸೇರಿದಂತೆ ಹಲವು ವ್ಯಕ್ತಿಗಳು ಶ್ರೀಕಿಗೆ ನೆರವು ನೀಡಿರುವುದು ಕಂಡುಬಂದಿದೆ.

ವಂಚನೆಯ ಹಣವನ್ನು ಉತ್ತರ ಭಾರತ ಮೂಲದ ವ್ಯಕ್ತಿಗಳೊಂದಿಗೆ ಸಂಪರ್ಕ ಬೆಳೆಸಿದ್ದವರ ಬ್ಯಾಂಕ್ ಖಾತೆಗಳಿಗೆ ಶ್ರೀಕಿ ಹಣ ವರ್ಗಾಯಿಸಿದ್ದ ಪ್ರಮುಖ ನಾಲ್ವರು ವ್ಯಕ್ತಿಗಳ ಪೈಕಿ ಹರ್ವಿಂದರ್ ಸಿಂಗ್ ಓರ್ವನಾಗಿದ್ದನು. ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿಗೂ ಸಂಬಂಧವಿಲ್ಲ. ಇ-ಪ್ರೊಕ್ಯೂರ್‌ಮೆಂಟ್ ಜಾಲತಾಣ ಹ್ಯಾಕ್ ಮಾಡಿದ ಪ್ರಕರಣದಲ್ಲಿ ಹರ್ವಿಂದರ್ ನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಶ್ರೀಕಿಯೊಂದಿಗೆ ಬಿಟ್ ಕಾಯಿನ್ ದಂಧೆಯಲ್ಲಿ ಭಾಗಿಯಾಗಿದ್ದಾನೆ ಎಂಬುದರ ಬಗ್ಗೆ ಮುಂದಿನ ತನಿಖೆಯಲ್ಲಿ ಗೊತ್ತಾಗಲಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಬಿಟ್ ಕಾಯಿನ್‌ ಪ್ರಕರಣ ಬೇಧಿಸಲು ತಜ್ಞರ ತಂಡ ರಚನೆ:ಇತ್ತೀಚೆಗೆ ರಾಜ್ಯ ಸರ್ಕಾರವು ಬಿಟ್​ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿಯ ಎಸ್ಐಟಿ ತಂಡಕ್ಕೆ ತಾಂತ್ರಿಕವಾಗಿ ಪರಿಣತಿ ಪಡೆದಿರುವ ಸೈಬರ್ ಫೊರೆನ್ಸಿಕ್ ಹಾಗೂ ಕ್ರಿಪ್ಟೊ ಕರೆನ್ಸಿ ತಜ್ಞರ ತಂಡವನ್ನು ನೇಮಿಸಲು ಹಸಿರು ನಿಶಾನೆ ತೋರಿತ್ತು. ಆರ್ಥಿಕ ಸ್ವರೂಪದ ಅಪರಾಧ ಪ್ರಕರಣವನ್ನು ಬೇಧಿಸಬೇಕಾದರೆ ಪೊಲೀಸರು ತಾಂತ್ರಿಕವಾಗಿ ಪಳಗಬೇಕಿದೆ.‌ ಸಿಐಡಿ ಜೊತೆಗೆ ಎಫ್ಎಸ್​ಎಲ್​ನ ಕೆಲವೇ ಅಧಿಕಾರಿಗಳು ಬಿಟ್ ಕಾಯಿನ್ ವ್ಯವಹಾರ ಸ್ವರೂಪದ ಬಗ್ಗೆ ಬಲ್ಲವರಾಗಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ವಂಚನೆಯನ್ನು ಬಗೆಹರಿಸಬೇಕಿದೆ.

ಹೀಗಾಗಿ ಎಸ್ಐಟಿ ತಂಡ ಸರ್ಕಾರಕ್ಕೆ ಪತ್ರ ಬರೆದು ವಿಶೇಷ ತಜ್ಞರ ತಂಡ ನಿಯೋಜಿಸುವ ಅಗತ್ಯವಿದೆ ಎಂದು ಹೇಳಿತ್ತು. ಇದನ್ನು ಮನಗಂಡ ಸರ್ಕಾರ ಕಳೆದ ಆಗಸ್ಟ್ 31ರಂದು ತಜ್ಞರ ತಂಡ ನೇಮಕಕ್ಕೆ ಒಪ್ಪಿಗೆ ನೀಡಿ ಗರಿಷ್ಠ ₹50 ಲಕ್ಷದವರೆಗೂ ಸೇವಾಶುಲ್ಕವಾಗಿ ಪಾವತಿಸಲು ಆದೇಶಿಸಿತ್ತು. ಈ ಆದೇಶ ಪತ್ರ ಈಟಿವಿ ಭಾರತ್‌ಗೆ ಲಭ್ಯವಾಗಿ ವರದಿಯಾಗಿತ್ತು.

ಇದನ್ನೂ ಓದಿ :ದೊಡ್ಡಬಳ್ಳಾಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ: 57 ಪ್ರಕರಣದ 30 ಆರೋಪಿಗಳ ಬಂಧನ.. ಅಪಾರ ಮೌಲ್ಯದ ವಸ್ತು ಜಪ್ತಿ

ABOUT THE AUTHOR

...view details