ಕರ್ನಾಟಕ

karnataka

ಕಾರ​ಲ್ಲಿ 50 ಲಕ್ಷ ರೂ ಪತ್ತೆ: 10 ಲಕ್ಷ ಎಗರಿಸಿ ಕೇಸ್ ದಾಖಲಿಸಿದ್ದ ಬೆಂಗಳೂರಿನ ಹೆಡ್‌ ಕಾನ್ಸ್​ಟೇಬಲ್ ಅರೆಸ್ಟ್‌

By

Published : Oct 9, 2022, 7:06 AM IST

Updated : Oct 9, 2022, 1:46 PM IST

ಬೆಂಗಳೂರಲ್ಲಿ ಗಸ್ತು ತಿರುಗುವ ವೇಳೆ ಹೆಡ್​ ಕಾನ್ಸ್​ಟೇಬಲ್ 10 ಲಕ್ಷ ಎಗರಿಸಿದ ಹೆಡ್ ಕಾನ್ಸ್​ಟೇಬಲ್. ಚಂದ್ರಾ ಲೇಔಟ್ ಠಾಣೆ ಪೊಲೀಸ್​ರಿಂದ ಬಂಧನ.

Chandralayout Head Constable Arrest
ಹೆಡ್ ಕಾನ್ಸ್​ಟೇಬಲ್ ಮಹೇಂದ್ರಗೌಡ

ಬೆಂಗಳೂರು:ಹಣ ಬದಲಾಯಿಸಲು ಹೊರಟಿದ್ದ ತಂಡವನ್ನು ವಿಚಾರಣೆ ನೆಪದಲ್ಲಿ ತಡೆದು 10 ಲಕ್ಷ ರೂ. ಕಳ್ಳತನ ಮಾಡಿದ್ದ ಆರೋಪದಡಿ ಹೆಡ್ ಕಾನ್ಸ್​ಟೇಬಲ್ ಮಹೇಂದ್ರಗೌಡ ಎಂಬುವರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಂದ್ರಾ ಲೇಔಟ್ ಠಾಣೆಯಲ್ಲಿ ಹಲವು ತಿಂಗಳಿನಿಂದ ಮಹೇಂದ್ರಗೌಡ ಕೆಲಸ ಮಾಡುತ್ತಿದ್ದರು. ಹೊಯ್ಸಳ ವಾಹನದಲ್ಲಿ ಗಸ್ತು ತಿರುಗುವ ವೇಳೆ ವಿಚಾರಣೆ ನೆಪದಲ್ಲಿ ಹಣ ಎಗರಿಸಿದ್ದ ಆರೋಪ ಇವರ ಮೇಲಿದೆ.

ನೋಟು ಬದಲಾವಣೆ ಜಾಲ:ಚನ್ನಪಟ್ಟಣ ತಾಲೂಕಿನ ರಾಮಪುರದವರಾದ ಕೃಷಿಕ ಲಿಂಗೇಶ್, ರಿಯಲ್ ಎಸ್ಟೇಟ್ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. ಇವರಿಗೆ ಬೆಂಗಳೂರಿನ ಪ್ರದೀಪ್ ಎಂಬುವವರ ಪರಿಚಯವಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಲಿಂಗೇಶ್‌ಗೆ ಕರೆ ಮಾಡಿದ್ದ ಪ್ರದೀಪ್ 2,000 ಮುಖಬೆಲೆಯ ನೋಟುಗಳು ಕೆಲವೇ ದಿನಗಳಲ್ಲಿ ರದ್ದಾಗುವ ಸಾಧ್ಯತೆ ಇದೆ. ನನ್ನ ಪರಿಚಯಸ್ಥರೊಬ್ಬರ ಬಳಿ 2,000 ಮುಖಬೆಲೆಯ ನೂರಾರು ಕೋಟಿ ರೂಪಾಯಿ ಹಣವಿದೆ. ಅವರಿಗೆ 500 ಮುಖಬೆಲೆಯ ನೋಟುಗಳನ್ನು ನೀಡಿದರೆ, ಶೇ 10ರಷ್ಟು ಕಮಿಷನ್ ಕೊಡುತ್ತಾರೆ ಎಂದಿದ್ದ. ಇದನ್ನು ನಂಬಿದ್ದ ಲಿಂಗೇಶ್ 50 ಲಕ್ಷ ನೀಡಲು ಸಿದ್ಧರಾಗಿದ್ದರು.

ಎಗರಿಸಿ ನಂತರ ಪ್ರಕರಣ ದಾಖಲು:ಅ. 2ರಂದು 50 ಲಕ್ಷ ಸಮೇತ ನಗರಕ್ಕೆ ಬಂದಿದ್ದ ಲಿಂಗೇಶ್, ಪ್ರದೀಪ್​​ ಅವರ ಕಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಸಿಂಗಸಂದ್ರಕ್ಕೆ ಹೋಗಿದ್ದರು. ನೋಟು ಬದಲಾವಣೆ ಜಾಲದ ಸದಸ್ಯರು ಎನ್ನಲಾದ ವೆಟ್ರಿವೇಲು ಹಾಗೂ ಇತರರು ಈ ಸ್ಥಳದಲ್ಲಿ ಹಣ ಬದಲಾವಣೆ ಸಾಧ್ಯವಿಲ್ಲ. ಜ್ಞಾನಭಾರತಿಯ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿ ಹೋಗೋಣ ಎಂದು ಲಿಂಗೇಶ್ ಹಾಗೂ ಪ್ರದೀಪ್​ನನ್ನು ಕರೆದುಕೊಂಡು ಅಲ್ಲಿಂದ ಹೊರಟಿದ್ದರು.

ಮಾರ್ಗ ಮಧ್ಯೆ ಸ್ಥಳ ಬದಲಿಸಿದ್ದ ವೆಟ್ರಿವೇಲು ಹಾಗೂ ಇತರರು ಲಿಂಗೇಶ್ ಹಾಗೂ ಪ್ರದೀಪ್ ಅವರನ್ನು ಚಂದ್ರಾ ಲೇಔಟ್‌ಗೆ ಕಡೆಗೆ ಕರೆದುಕೊಂಡು ಹೋಗಿದ್ದರು. ಅದೇ ಸ್ಥಳಕ್ಕೆ ಶ್ಯಾಮ್‌ ಸಂತೋಷ್ ಎಂಬಾತ ಬಂದಿದ್ದ. ಎಲ್ಲರೂ ಸೇರಿ ಕಾರಿನ ಎದುರು ನಿಂತುಕೊಂಡು ಮಾತನಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಹೋಗಿದ್ದ ಹೆಡ್ ಕಾನ್ಸ್​ಟೇಬಲ್ ಮಹೇಂದ್ರಗೌಡ ಎಲ್ಲರನ್ನೂ ವಿಚಾರಣೆ ನಡೆಸುವ ನೆಪದಲ್ಲಿ ಕಾರಿನಲ್ಲಿದ್ದ 50 ಲಕ್ಷ ಹಣದಲ್ಲಿ 10 ಲಕ್ಷ ರೂ. ಎಗರಿಸಿ ನಂತರ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದ ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ.

40 ಲಕ್ಷ ರೂ. ಎಂದು ಬಿಂಬಿಸಲು ಯತ್ನ: ನಂತರ ಕಾರು ಜಪ್ತಿ ಮಾಡಿ ಲಿಂಗೇಶ್‌ ಹಾಗೂ ಇತರರನ್ನು ಠಾಣೆಗೆ ಕಳುಹಿಸಿ ಕಾರಿನಲ್ಲಿ 40 ಲಕ್ಷ ರೂ. ಮಾತ್ರ ಇತ್ತು ಎಂದು ಬಿಂಬಿಸಿದ್ದ. ಆದರೆ ಈ ಬಗ್ಗೆ ಲಿಂಗೇಶ್ ದೂರು ನೀಡಿದಾಗ ಹಿರಿಯ ಅಧಿಕಾರಿಗಳು ಪರಿಶೀಲಿಸಿದಾಗ ಹೆಡ್‌ ಕಾನ್ಸ್​​ಟೇಬಲ್​ ಬಂಡವಾಳ ಬಯಲಾಗಿದೆ. ಸದ್ಯ ಘಟನೆಯ ಬಗ್ಗೆ ಮಾಹಿತಿ ದೊರಕುತ್ತಿದ್ದಂತೆ ಹೆಡ್ ಕಾನ್ಸ್​ಟೇಬಲ್ ಮಹೇಂದ್ರಗೌಡ ಅವರನ್ನು ಅಮಾನತು ಮಾಡಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಆದೇಶ ಹೊರಡಿಸಿದ್ದಾರೆ.

ಸದ್ಯ ಮಹೇಂದ್ರಗೌಡ ಜೊತೆ ಆರೋಪಿ ಶಶಿಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ:ವಿಧಾನಸೌಧ ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ ಟೆಕ್ಕಿ ಬಂಧನ

Last Updated : Oct 9, 2022, 1:46 PM IST

ABOUT THE AUTHOR

...view details